ADVERTISEMENT

ಡ್ರಗ್ಸ್‌ ದಂಧೆ: ಕಟ್ಟೆಚ್ಚರ, ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ

ಪೊಲೀಸ್‌, ಅರಣ್ಯ ಇಲಾಖೆ, ಕಂದಾಯ, ಕೃಷಿ ಇಲಾಖೆಯ ಅಧಿಕಾರಿಳೊಂದಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸಭೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 14:20 IST
Last Updated 16 ಸೆಪ್ಟೆಂಬರ್ 2020, 14:20 IST
ಡ್ರಗ್ಸ್‌ ದಂಧೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರು ಅಧಿಕಾರಿಗಳ ಸಭೆ ನಡೆಸಿದರು
ಡ್ರಗ್ಸ್‌ ದಂಧೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರು ಅಧಿಕಾರಿಗಳ ಸಭೆ ನಡೆಸಿದರು   

ಚಾಮರಾಜನಗರ: ಜಿಲ್ಲೆಯಲ್ಲಿ ಗಾಂಜಾ ಬೆಳೆ ಸೇರಿದಂತೆ ಯಾವುದೇ ಮಾದಕ ವಸ್ತುಗಳ ಚಟುವಟಿಕೆಗಳಿಗೆ ಅವಕಾಶವಾಗದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿ, ಅಕ್ರಮ ನಡೆಸುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೂಚನೆ ನೀಡಿದರು.

ಡ್ರಗ್ಸ್‌ ದಂಧೆ ನಿಯಂತ್ರಣ ಸಂಬಂಧ ಪೊಲೀಸರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಯುವ ಜನಾಂಗವನ್ನು ತಪ್ಪು ದಾರಿಗೆ ಕರೆದೊಯ್ದು ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಮಾದಕ ವಸ್ತುಗಳಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ಜಿಲ್ಲೆಯಲ್ಲಿ ನಡೆಯದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಕಂದಾಯ, ಅಬಕಾರಿ, ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಂಘಟಿತರಾಗಿ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ವಿಶೇಷ ಕಣ್ಗಾವಲು ಇರಿಸಬೇಕು’ ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಜಮೀನು ಮಾಲೀಕರ ವಿರುದ್ಧ ಪ್ರಕರಣ:‘ಸರ್ಕಾರಿ ಜಮೀನಿರಲಿ ಅಥವಾ ಖಾಸಗಿಯವರ ಭೂಮಿಯೇ ಇರಲಿ, ಎಲ್ಲ ಕಡೆ ಕಂದಾಯ ಅಧಿಕಾರಿಗಳು ನಿಗಾ ಇಟ್ಟಿರಬೇಕು. ಯಾವ ಬೆಳೆ ಬೆಳೆಯಲಾಗುತ್ತಿದೆ ಎಂಬ ಮಾಹಿತಿಯನ್ನು ಆಯ ಗ್ರಾಮಲೆಕ್ಕಿಗರಿಂದ ಮಾಹಿತಿ ಸಂಗ್ರಹಣೆ ಮಾಡಬೇಕು. ಗಾಂಜಾ ಸೇರಿದಂತೆ ಯಾವುದೇ ಮಾದಕ ವಸ್ತುಗಳ ಬೆಳೆ ಬೆಳೆದಿರುವುದು ಕಂಡು ಬಂದಲ್ಲಿ ಕೂಡಲೇ ವರದಿ ಮಾಡಿ ಪ್ರಕರಣ ದಾಖಲಿಸಬೇಕು. ಆರ್‌ಟಿಸಿ ಹೊಂದಿರುವ ಮಾಲೀಕರ ವಿರುದ್ದವೇ ಮೊದಲು ಪ್ರಕರಣ ಹೂಡಬೇಕು’ ಎಂದು ಡಾ.ಎಂ.ಆರ್.ರವಿ ಅವರು ಸೂಚಿಸಿದರು.

ADVERTISEMENT

‘ಕಾಡಂಚಿನ ಭಾಗ ಹಾಗೂ ಅರಣ್ಯ ಗಡಿ ಭಾಗದಲ್ಲಿ ವಿಶೇಷ ನಿಗಾ ವಹಿಸಬೇಕು. ಗಾಂಜಾ ಸೇರಿದಂತೆ ಯಾವುದೇ ಮಾದಕ ಅಕ್ರಮ ಚಟುವಟಿಕೆಗಳು ನಡೆಯದಂತೆ ಅರಣ್ಯ, ಪೊಲೀಸ್, ಅಬಕಾರಿ, ಇಲಾಖೆಗಳು ಗಸ್ತು ವ್ಯವಸ್ಥೆಯನ್ನು ತೀವ್ರಗೊಳಿಸಬೇಕು. ಕಂದಾಯ ಇಲಾಖೆ ಅಧಿಕಾರಿಗಳಿಗೆ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳೂ ನೆರವು ನೀಡಬೇಕು. ತಾಲ್ಲೂಕು ಮಟ್ಟದಲ್ಲಿ ಸ್ಕ್ವಾಡ್ ರಚಿಸಿ ಮಾದಕ ವಸ್ತುಗಳ ಚಟುವಟಿಕೆಗಳು ಎಲ್ಲಿಯೇ ಕಂಡು ಬಂದಲ್ಲಿ ಜಂಟಿ ಕಾರ್ಯಚರಣೆ ನಡೆಸಬೇಕು’ ಎಂದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ. ಹದ್ದಣ್ಣವರ್ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಗಾಂಜಾ ಬೆಳೆಯುವವರ ವಿರುದ್ದ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಮಾದಕ ವಸ್ತುಗಳ ಚಟುವಟಿಕೆ ನಡೆಯದಂತೆ ನಿಗಾವಹಿಸಿದ್ದು, ಅಕ್ರಮ ಕೃತ್ಯಗಳನ್ನು ಮಟ್ಟ ಹಾಕಲು ಸನ್ನದ್ಧರಾಗಿದ್ದೇವೆ’ ಎಂದು ಹೇಳಿದರು.

ಅಬಕಾರಿ ಉಪಆಯುಕ್ತ ಮುರುಳೀಧರ್, ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬಡೋಲೆ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ. ಬಾಲಚಂದ್ರ, ಬಿಆರ್‌ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ಕುಮಾರ್, ತಹಶೀಲ್ದಾರರಾದ ಚಿದಾನಂದ ಗುರುಸ್ವಾಮಿ, ಕೆ.ಕುನಾಲ್, ನಂಜುಂಡಯ್ಯ, ಸುದರ್ಶನ್, ವೈದ್ಯ ಅಧಿಕಾರಿಗಳಾದ ಡಾ. ರಾಜು, ಕೃಷಿ ಜಂಟಿ ನಿರ್ದೇಶಕಿ ಚಂದ್ರಕಲಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

‘ಹೊರಗಿನವರ ಮೇಲೆ ಕಣ್ಣಿಡಿ’

‘ಹೋಂ ಸ್ಟೇ, ರೆಸಾರ್ಟ್‌ಗಳ ಮೇಲೂ ಕಟ್ಟೆಚ್ಚರ ಇರಬೇಕು. ಹೊರಗಿನಿಂದ ಬರುವ ಜನರ ಮೇಲೆ ಕಣ್ಗಾವಲು ಇಡಬೇಕು. ಅಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ಇರಬೇಕು. ಅಂತರ ರಾಜ್ಯ ಚೆಕ್‌ಪೋಸ್ಟ್‌ಗಳು ಸೇರಿದಂತೆ ಇತರೆ ಚೆಕ್‌ಪೋಸ್ಟ್ ಗಳಲ್ಲಿಯೂ ತಪಾಸಣೆ ಚುರುಕುಗೊಳಿಸಬೇಕು’ ಎಂದು ಡಾ.ಎಂ.ಆರ್.ರವಿ ಅವರು ಸೂಚಿಸಿದರು.

ಅರಿವು ಮೂಡಿಸಿ: ‘ಅಧಿಕಾರಿಗಳು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಜಾಗೃತಿ ಸಭೆ ನಡೆಸುವ ಮೂಲಕ ಜನರಿಗೆ ಅರಿವು ಮೂಡಿಸಬೇಕು ಆರೋಗ್ಯ ಇಲಾಖೆ ನೆರವಿನೊಂದಿಗೆ ಮಾದಕ ವಸ್ತುಗಳ ಸೇವನೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಮನೋ ವೈದ್ಯರಿಂದಲೂ ಆಪ್ತ ಸಮಾಲೋಚನೆ ಇತರೆ ವಿಧಾನಗಳ ಮೂಲಕ ಜನರಿಗೆ ಮಾರ್ಗದರ್ಶನ ಮಾಡುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.