ADVERTISEMENT

ಮತದಾರರ ಪಟ್ಟಿಗೆ ಆಧಾರ್ ಜೋಡಣೆ: ಡಿ.ಸಿ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 16:26 IST
Last Updated 1 ಆಗಸ್ಟ್ 2022, 16:26 IST
ಮತದಾರರ ಚೀಟಿ ಹಾಗೂ ಆಧಾರ್‌ ಸಂಖ್ಯೆ ಜೋಡಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಮಾತನಾಡಿದರು
ಮತದಾರರ ಚೀಟಿ ಹಾಗೂ ಆಧಾರ್‌ ಸಂಖ್ಯೆ ಜೋಡಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಮಾತನಾಡಿದರು   

ಚಾಮರಾಜನಗರ: ಚುನಾವಣಾ ಆಯೋಗದ ಕಾರ್ಯಕ್ರಮವಾದ ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆ ಜೋಡಣೆ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೋಮವಾರ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಂದಿನಿಂದ ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆ ಜೋಡಿಸುವ ಪ್ರಕ್ರಿಯೆ ಆರಂಭವಾಗಲಿದೆ. ಜಿಲ್ಲೆಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ನೋಂದಾಯಿತರಾಗಿರುವ ಎಲ್ಲ ಮತದಾರರಿಂದ ನಮೂನೆ 6ಬಿರಲ್ಲಿ ಆಧಾರ್ ಸಂಖ್ಯೆಯನ್ನು ಪಡೆದು ಮತದಾರರ ಪಟ್ಟಿಯಲ್ಲಿ ಆಧಾರ್ ಡಾಟಾವನ್ನು ಲಿಂಕ್ ಮಾಡಲಾಗುತ್ತದೆ’ ಎಂದರು.

‘ಮತದಾರರು ಸ್ವತಃ ತಾವೇ, ಆನ್‌ಲೈನ್ ಮೂಲಕ ತಮ್ಮ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ನಂಬರ್ ಅನ್ನು ಎನ್‌ವಿಎಸ್‌ಪಿ (NVSP) ಪೋರ್ಟಲ್ ಮೂಲಕ ಅಥವಾ ವೋಟರ್ ಹೆಲ್ಪ್‌ಲೈನ್ ಆ್ಯಪ್ ಮೂಲಕ ಲಿಂಕ್ ಮಾಡಿಕೊಂಡೂ ದೃಢೀಕರಿಸಿಕೊಳ್ಳಬಹುದಾಗಿದೆ’ ಎಂದರು.

ADVERTISEMENT

‘ಆಧಾರ್ ಸಂಖ್ಯೆ ಹೊಂದಿಲ್ಲದಿದ್ದರೆ ನರೇಗಾ ಉದ್ಯೋಗ ಕಾರ್ಡ್, ಬ್ಯಾಂಕ್ ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್ ಪುಸ್ತಕ, ವಾಹನ ಚಾಲನಾ ಪರವಾನಗಿ, ಆರೋಗ್ಯ ವಿಮೆ, ಸ್ಮಾರ್ಟ್ ಕಾರ್ಡ್, ಪಾನ್‌ಕಾರ್ಡ್, ಪಾಸ್‌ಪೋರ್ಟ್, ಪಿಂಚಣಿ ದಾಖಲೆ, ಸರ್ಕಾರಿ, ಸಾರ್ವಜನಿಕ ವಲಯ, ಕಂಪನಿ ಉದ್ಯೋಗಿಗಳಿಗೆ ನೀಡಲಾದ ಗುರುತಿನ ಚೀಟಿಯಂತಹ ನಿಗದಿತ ದಾಖಲೆಗಳನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ದೃಢೀಕರಿಸಿಕೊಳ್ಳಲು ಅವಕಾಶವಿದೆ. ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಚಾರುಲತಾ ತಿಳಿಸಿದರು.

ಚುನಾವಣಾ ತಹಶೀಲ್ದಾರ್ ವಿನೋದ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಬ್ಯಾಡಮೂಡ್ಲು ಬಸವಣ್ಣ, ಎಂ. ಸ್ವಾಮಿ, ಮಹೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.