ADVERTISEMENT

ಫಲಿತಾಂಶ ಹೆಚ್ಚಳಕ್ಕೆ ಚೈತನ್ಯ ಇ-ಮ್ಯಾಗಜೀನ್

ಆದರ್ಶ ವಿದ್ಯಾಲಯದಲ್ಲಿ ನಡೆದ ವೈವಿಧ್ಯಮಯ ಶೈಕ್ಷಣಿಕ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:03 IST
Last Updated 23 ಡಿಸೆಂಬರ್ 2025, 6:03 IST
ಚಾಮರಾಜನಗರ ತಾಲ್ಲೂಕಿನ ಮಲ್ಲಯ್ಯನಪುರದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು
ಚಾಮರಾಜನಗರ ತಾಲ್ಲೂಕಿನ ಮಲ್ಲಯ್ಯನಪುರದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು   

ಚಾಮರಾಜನಗರ: ತಾಲ್ಲೂಕಿನ ಮಲ್ಲಯ್ಯನಪುರದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೋಮವಾರ ಪ್ರತಿಭಾ ಪುರಸ್ಕಾರ, ಪ್ರೇರಣಾ ಶಿಬಿರ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ, ಸಂದರ್ಶನದಂತಹ ವಿವಿಧ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದರು.

ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡ ಜಿಲ್ಲಾಧಿಕಾರಿಗೆ ವಿದ್ಯಾರ್ಥಿಗಳೇ ಸಂದರ್ಶನ ಮಾಡುವ ಮೂಲಕ ಹಲವು ಪ್ರಶ್ನೆಗಳನ್ನು ಕೇಳಿದರು. ‌ಬಾಲ್ಯ, ಶಾಲಾ ಕಾಲೇಜು ದಿನಗಳು, ಓದು, ಯುಪಿಎಸ್‌ಸಿ ಸಹಿತ ಸ್ಪರ್ಧಾತ್ಮ ಪರೀಕ್ಷೆಗಳ ತಯಾರಿ ಕುರಿತು ವಿವರಿಸಿದರು.

ಜಿಲ್ಲೆಯಲ್ಲಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಯೋಜನೆಗಳು, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಇರುವ ದೂರದೃಷ್ಟಿ ಕುರಿತು ವಿದ್ಯಾರ್ಥಿಗಳಿಗೆ ವಿವರಣೆ ನೀಡಿದ ಜಿಲ್ಲಾಧಿಕಾರಿ ‘ಶಾಲಾ ಶಿಕ್ಷಣ ಇಲಾಖೆ ಹೊರತಂದಿರುವ ಸಾಪ್ತಾಹಿಕ ‘ಚೈತನ್ಯ’ ಇ-ಮ್ಯಾಗಜೀನ್ ಬಿಡುಗಡೆ ಮಾಡಿದರು.

ADVERTISEMENT

ಜಿಲ್ಲೆಯು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶದ ಸಾಧನೆ ಮಾಡಲು ಚೈತನ್ಯ ಇ-ಮ್ಯಾಗಜೀನ್ ಸಹಾಯಕವಾಗಿದ್ದು, ಪ್ರತಿ ವಿಷಯದ ಬಗ್ಗೆ ಮಾದರಿ ಪ್ರಶ್ನೆಪತ್ರಿಕೆಗಳು, ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಇದು ಒಳಗೊಂಡಿದೆ. ಪ್ರತಿ ವಿಷಯದಲ್ಲಿ ಕನಿಷ್ಟ 40ಕ್ಕಿಂತಲು ಹೆಚ್ಚು ಅಂಕಗಳನ್ನು ಪಡೆಯಲು ಸಹಾಯಕವಾಗಿದೆ ಎಂದರು.

ಈ ವಾರ ಸಮಾಜ ವಿಜ್ಞಾನ ವಿಷಯದ ಇ-ಮ್ಯಾಗಜೀನ್ ಬಿಡುಗಡೆ ಮಾಡುತ್ತಿದ್ದು ಮುಂದಿನ ವಾರದಿಂದ ವಾರಕ್ಕೊಂದು ವಿಷಯದಂತೆ ಇ-ಮ್ಯಾಗಝೀನ್ ಬಿಡುಗಡೆ ಮಾಡಲಾಗುವುದು. ಇ-ಮ್ಯಾಗಝೀನ್‌ಗಳನ್ನು ಪ್ರತಿ ಪೋಷಕರ, ವಿದ್ಯಾರ್ಥಿಗಳ ವಾಟ್ಸ್‌ ಆ್ಯಪ್‌ ನಂಬರಿಗೆ ಕಳುಹಿಸಲಾಗುವುದು. ಇದರಿಂದ ಸುಲಭವಾಗಿ ಜ್ಞಾನಾರ್ಜನೆಗೆ ಸಹಕಾರಿಯಾಗಲಿದೆ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಬಹುದು ಎಂದರು.

ಶಾಲೆಗೆ ಅವಶ್ಯಕವಿರುವ ರಂಗಮಂದಿರ, ಸಭಾಂಗಣ, ಕಾಂಪೌಂಡ್ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಿಕೊಡುವಂತೆ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮಹದೇವಸ್ವಾಮಿ, ಸದಸ್ಯರು ಹಾಗೂ ಶಿಕ್ಷಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಕಾರಾತ್ಮವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಹಂತ ಹಂತವಾಗಿ ಸೌಲಭ್ಯ ಕಲ್ಪಿಸಿಕೊಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳನ್ನು ಸನ್ಮಾನಿಸಲಾಯಿತು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪಾಟೀಲ್, ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ರಾಜೀವ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಬಸವರಾಜು, ನಗರಸಭೆ ಸದಸ್ಯರು ಹಾಗೂ ಎಸ್.ಡಿ.ಎಮ್.ಸಿ ಸದಸ್ಯ ಮಹೇಶ್ ಹಾಗೂ ಖಲೀಲ್ ಉಲ್ಲಾ, ಮುಖ್ಯ ಶಿಕ್ಷಕ ಅರ್ಕಪ್ಪ, ಇ-ಆಡಳಿತ ಜಿಲ್ಲಾ ಸಂಯೋಜಕ ಮಧುಕೇಶ್, ಸಿಎಸ್‍ಆರ್ ಸಂಯೋಜಕ ರಕ್ಷಿತಾ ಉಪಸ್ಥಿತರಿದ್ದರು.

‘ಓದಿದ ಶಾಲೆ ಅಭಿವೃದ್ಧಿಗೆ ಶ್ರಮಿಸಿ’

ಸಂವಿಧಾನ ಎಲ್ಲರಿಗೂ ಶೈಕ್ಷಣಿಕವಾಗಿ ಉನ್ನತ ಸ್ಥಾನಗಳನ್ನು ಗಳಿಸಲು ಸಮಾನ ಅವಕಾಶಗಳನ್ನು ನೀಡಿದೆ. ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ಪ್ರಸ್ತುತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸುತ್ತಿದ್ದು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.ವಿದ್ಯಾರ್ಥಿಗಳು ಓದಿದ ಶಾಲೆ ಮತ್ತು ಊರನ್ನು ಮರೆಯದೆ ಮುಂದೆ ಕೈಲಾದ ಸಹಾಯಹಸ್ತ ಚಾಚಬೇಕು. ಸಾಮಾಜಿಕ ಜಾಲತಾಣಗಳನ್ನು ಮನರಂಜನೆಗೆ ಮಾತ್ರವಲ್ಲ ಶೈಕ್ಷಣಿಕ ಉನ್ನತಿಗೆ ಪೂರಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.