ADVERTISEMENT

ಮೂಲೆಹೊಳೆ ಚೆಕ್‌ಪೋಸ್ಟ್ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 1:55 IST
Last Updated 1 ಆಗಸ್ಟ್ 2021, 1:55 IST
ಗುಂಡ್ಲುಪೇಟೆ ತಾಲ್ಲೂಕಿನ ಮೂಲೆಹೊಳೆ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು
ಗುಂಡ್ಲುಪೇಟೆ ತಾಲ್ಲೂಕಿನ ಮೂಲೆಹೊಳೆ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು   

ಚಾಮರಾಜನಗರ: ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಜಿಲ್ಲೆಯ ಗಡಿ ಭಾಗಗಳಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಶನಿವಾರ ಬೆಳಿಗ್ಗೆ ಗುಂಡ್ಲುಪೇಟೆ ತಾಲ್ಲೂಕಿನ ಗಡಿಭಾಗದ ಮೂಲೆಹೊಳೆ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ತಪಾಸಣಾ ಕಾರ್ಯ ಪರಿಶೀಲಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ ರವಿ, ತಹಶೀಲ್ದಾರ್ ರವಿಶಂಕರ್, ಪೊಲೀಸ್ ಅಧಿಕಾರಿಗಳೊಂದಿಗೆ ಅರಣ್ಯ ಭಾಗದ ಮೂಲೆಹೊಳೆ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದ ಅವರು, ಕೇರಳ ಕಡೆಯಿಂದ ಬರುತ್ತಿರುವ ವಾಹನಗಳನ್ನು ಸಿಬ್ಬಂದಿ ತಪಾಸಣೆ ಮಾಡುವುದನ್ನು ವೀಕ್ಷಿಸಿದರು.

ADVERTISEMENT

ಪ್ರತಿನಿತ್ಯ ಕೇರಳದಿಂದ ಬರುವ ವಾಹನಗಳು ಹಾಗೂ ಇಲ್ಲಿಂದ ಅತ್ತ ಹೋಗುವ ವಾಹನಗಳ ಮಾಹಿತಿಗಳನ್ನು ಕರಾರುವಾಕ್ಕಾಗಿ ದಾಖಲು ಮಾಡುವಂತೆ ಸಿಬ್ಬಂದಿಗೆ ಅವರು ಸೂಚಿಸಿದರು.

ರಸ್ತೆ ಸಾರಿಗೆ ನಿಗಮಗಳ ವಾಹನ ಸಂಚಾರ, ಪ್ರಯಾಣಿಕರ ಸಂಖ್ಯೆ, ಖಾಸಗಿ ವಾಹನಗಳು ಸರಕು ಸಾಗಣೆ ಸೇರಿದಂತೆ ಎಲ್ಲ ಬಗೆಯ ವಾಹನಗಳ ಸಂಚಾರ ಕುರಿತು ದಾಖಲು ಮಾಡಿಕೊಳ್ಳಬೇಕು ಎಂದರು.

ಕೇರಳದಿಂದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರು ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್ ಇರುವ ವರದಿ ಹಾಜರು ಪಡಿಸಲೇಬೇಕು. ಎರಡು ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿರಲೇಬೇಕು. ಸಂಬಂಧಪಟ್ಟ ವಾಹನಗಳ ನಿರ್ವಾಹಕರು ನೆಗೆಟಿವ್ ವರದಿ ಇರುವ ಬಗ್ಗೆ ಖಾತ್ರಿ ಪಡಿಸಿಕೊಂಡಿರಬೇಕು. ಕೋವಿಡ್ ನೆಗೆಟಿವ್ ವರದಿ ಹಾಗೂ ಲಸಿಕೆ ಪಡೆದುಕೊಳ್ಳದೇ ಇದ್ದಲ್ಲಿ ಜಿಲ್ಲೆಗೆ ಪ್ರವೇಶಿಸಲು ಅವಕಾಶ ಮಾಡಿಕೊಡಬಾದು’ ಎಂಬ ಕಟ್ಟುನಿಟ್ಟಿನ ನಿರ್ದೇಶನವನ್ನು ಡಾ.ಎಂ.ಆರ್‌.ರವಿ ಅವರು ನೀಡಿದರು.

‘ದಿನನಿತ್ಯ ಕೇರಳಕ್ಕೆ ಹೋಗಿ ಬರುತ್ತಿರುವ ಸರಕು ಸಾಗಣೆ ವಾಹನಗಳ ಚಾಲಕರು ಕಡ್ಡಾಯವಾಗಿ 15 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ವರದಿ ಹಾಜರು ಪಡಿಸಲೇಬೇಕಿದೆ. ಇಲ್ಲವಾದಲ್ಲಿ ಸ್ಥಳದಲ್ಲಿಯೇ ರ‍್ಯಾಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಬೇಕು. ಆರೋಗ್ಯ ಇಲಾಖೆ ಈ ಬಗ್ಗೆ ತಕ್ಷಣವೇ ಕ್ರಮವಹಿಸಬೇಕು’ ಎಂದು ಅವರು ಸೂಚಿಸಿದರು.

ಪೊಲೀಸ್ ಅಧಿಕಾರಿಗಳಾದ ಮಹದೇವಸ್ವಾಮಿ, ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಚೆಕ್‌ಪೋಸ್ಟ್ ಅಧಿಕಾರಿ ಸಿಬ್ಬಂದಿ ಈ ವೇಳೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.