ADVERTISEMENT

ಚಾಮರಾಜನಗರ: ಕಚೇರಿಗೆ ತಡವಾಗಿ ಬಂದ ಅಧಿಕಾರಿಗಳು

ನಗರಸಭೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ, ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 14:24 IST
Last Updated 7 ಫೆಬ್ರುವರಿ 2020, 14:24 IST
ಜಿಲ್ಲಾಧಿಕಾರಿ ಎಂ.ಆರ್‌.ರವಿ ಅವರು ಶುಕ್ರವಾರ ನಗರಸಭೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಜಿಲ್ಲಾಧಿಕಾರಿ ಎಂ.ಆರ್‌.ರವಿ ಅವರು ಶುಕ್ರವಾರ ನಗರಸಭೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಚಾಮರಾಜನಗರ: ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಶುಕ್ರವಾರ ಬೆಳಿಗ್ಗೆ ನಗರಸಭೆಗೆ ದಿಢೀರ್‌ ಭೇಟಿ ನೀಡಿ ಅಧಿಕಾರಿಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.

ಬೆಳಿಗ್ಗೆ 10.10ರ ಸುಮಾರಿಗೆ ನಗರಸಭೆ ಕಚೇರಿಗೆ ಭೇಟಿ ನೀಡಿದ ಅವರು ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದರು. ಆ ಹೊತ್ತಿಗೆ ಹೆಚ್ಚಿನ ಸಿಬ್ಬಂದಿ ಕಚೇರಿಗೆ ಬಂದಿರಲಿಲ್ಲ. ನಂತರ ಆಯುಕ್ತ ರಾಜಣ್ಣ ಅವರ ಕೊಠಡಿಗೆ ತೆರಳಿದರು.

ಕಚೇರಿಯ ಮೊಗಸಾಲೆಯಲ್ಲಿ ಕಪಾಟು ಹಾಗೂ ಇನ್ನಿತರ ವಸ್ತುಗಳನ್ನು ಇಟ್ಟಿದ್ದನ್ನು ಗಮನಿಸಿದ ರವಿ, ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಬೇರೆ ಕಡೆ ಇರಿಸುವಂತೆ ಸೂಚಿಸಿದರು.

ADVERTISEMENT

ಸ್ವಚ್ಛತೆ ಹಾಗೂ ಗಾಳಿ ಬೆಳಕಿನ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಇಲ್ಲಿ ಸ್ವಚ್ಛತೆ ಇಲ್ಲ, ಗಾಳಿ ಬೆಳಕು ಸಮರ್ಪಕವಾಗಿಲ್ಲದೆ, ದಾಸ್ತಾನು ಕೊಠಡಿಯಂತೆ ಇದೆ. ನಗರಸಭೆ ಕಚೇರಿಯೇ ಈ ರೀತಿ ಇದ್ದರೆ, ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಹೇಗೆ ಮೂಡಿಸುತ್ತೀರಿ’ ಎಂದು ಪ್ರಶ್ನಿಸಿದರು.

ತಡವಾಗಿ ಬಂದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೂ ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು. ಕಚೇರಿ ಎಷ್ಟು ಗಂಟೆಗೆ ಆರಂಭವಾಗುತ್ತದೆ ಎಂಬುದು ತಿಳಿದಿದೆಯೇ? ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅರಿವು ಇದೆಯೇ? ತಡವಾಗಿ ಬರಲು ನಾಚಿಕೆ ಆಗುವುದಿಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.

ತಡವಾಗಿ ಬಂದವರಿಗೆ ನೋಟಿಸ್‌ ಜಾರಿ ಮಾಡುವಂತೆ ಆಯುಕ್ತರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.