ADVERTISEMENT

ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ತಾಯಿ, ಮಗಳು ಸಾವು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 13:56 IST
Last Updated 12 ಏಪ್ರಿಲ್ 2019, 13:56 IST
ಮಂಜುಳಾ
ಮಂಜುಳಾ   

ಚಾಮರಾಜನಗರ: ತಾಲ್ಲೂಕಿನ ಹೆಬ್ಬಸೂರು ಗ್ರಾಮದ ಸಮೀಪದ ಸುವರ್ಣಾವತಿ ಹೊಳೆಯಲ್ಲಿ ಶುಕ್ರವಾರ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್‌ ತಂತಿ ತುಂಡಾಗಿ ಬಿದ್ದು ತಾಯಿ ಮತ್ತು ಮಗಳು ದಾರುಣವಾಗಿ ಮೃತಪಟ್ಟಿದ್ದಾರೆ.

ನಗರದಲ್ಲಿ ವಾಸವಿದ್ದ ಹೆಬ್ಬಸೂರು ಗ್ರಾಮದ ನಿವಾಸಿ ಕಣ್ಣನ್‌ ಎಂಬುವವರ ಪತ್ನಿ ಮಂಜುಳಾ (40) ಮತ್ತು ಮಗಳು ಯಶಶ್ರೀ (9) ಮೃತಪಟ್ಟವರು. ದಂಪತಿಯ ಮತ್ತೊಬ್ಬ ಮಗಳು ಶ್ರಾವ್ಯಶ್ರೀ (14) ತೀವ್ರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾತ್ರೆಗೆ ಹೋಗಿದ್ದರು: ಕುಂಭೇಶ್ವರ ಕಾಲೊನಿಯಲ್ಲಿ ಶುಕ್ರವಾರ ಕೊಂಡೋತ್ಸವ ಇತ್ತು. ಮಕ್ಕಳಿಗೆ ರಜ ಇದ್ದುದರಿಂದ ಊರ ಜಾತ್ರೆಗೆ ಎಂದುಕಣ್ಣನ್‌ ಹಾಗೂ ಭಾವ (ಮಂಜುಳಾ ಅಣ್ಣ) ಸುಬ್ರಹ್ಮಣ್ಯ ಕುಟುಂಬದ ಎಂಟು ಮಂದಿ ತೆರಳಿದ್ದರು.

ADVERTISEMENT

‘ಮಧ್ಯಾಹ್ನದ ಪೂಜೆಗೆ ಸಮಯ ಇದ್ದುದರಿಂದ ಮಕ್ಕಳು ಹಟ ಮಾಡಿದರು ಎಂದು ಸಮೀಪದಲ್ಲೇ ಇದ್ದ ಹೊಳೆಗೆ ಸ್ನಾನಕ್ಕಾಗಿ ಇಳಿದಿದ್ದೆವು. ನನ್ನೊಂದಿಗೆ ನನ್ನ ಹಾಗೂ ಅಣ್ಣನ ಮಕ್ಕಳೂ ನೀರಿನಲ್ಲಿದ್ದರು. ಆಗ ಹೊಳೆ ಮೇಲೆ ಹಾದು ಹೋಗಿದ್ದ ವಿದ್ಯುತ್‌ ತಂತಿ ಕಡಿದು ಮಂಜುಳಾ, ಯಶಶ್ರೀ, ಶ್ರಾವ್ಯಶ್ರೀ ಮತ್ತು ಅಕ್ಕ ನಾಗಮ್ಮ ಅವರ ಮೇಲೆ ಬಿತ್ತು. ತಂತಿ ನೀರನ್ನು ಸ್ಪರ್ಶಿಸಿದಾಗ ಎಲ್ಲರಿಗೂ ವಿದ್ಯುತ್‌ ಶಾಕ್‌ ಹೊಡೆಯಿತು’ ಎಂದು ಸುಬ್ರಹ್ಮಣ್ಯ ‌‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾರಿ ಸದ್ದಾಯಿತು. ಶಾಕ್‌ ಹೊಡೆದಾಗ ಜೋರಾಗಿ ಕಿರುಚಿಕೊಂಡೆ. ಧೈರ್ಯದಿಂದ ಶ್ರಾವ್ಯಶ್ರೀಯನ್ನು ದಡಕ್ಕೆ ಎಳೆದು ತಂದು ಪ್ರಥಮ ಚಿಕಿತ್ಸೆ ನೀಡಿದೆ. ಉಸಿರಾಡುವುದಕ್ಕೆ ಆರಂಭಿಸಿದಳು. ಅಕ್ಕ ನಾಗಮ್ಮನನ್ನೂ ದಡಕ್ಕೆ ತಂದು ಪ್ರಥಮ ಚಿಕಿತ್ಸೆ ನೀಡಿ ಉಳಿಸಿಕೊಂಡೆ. ಆದರೆ, ವಿದ್ಯುತ್‌ ತಂತಿಯುಮಂಜುಳಾ ಮತ್ತು ಶ್ರಾವ್ಯಶ್ರೀಯನ್ನು ದೂರಕ್ಕೆ ಎಳೆದುಕೊಂಡು ಹೋಯಿತು. ಉಳಿಸಿಕೊಳ್ಳುವುದಕ್ಕೆ ಆಗಲಿಲ್ಲ’ ಎಂದು ಅವರು ದುಃಖಿಸಿದರು.

ಹಿಂದೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದ ಮಂಜುಳಾ ಅವರು ವಿವಿಧ ಸಂಘ–ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ವಿಷಯ ತಿಳಿಯುತ್ತಲೇ ಗ್ರಾಮದವರು, ಸ್ನೇಹಿತರು, ಸಂಬಂಧಿಕರು ಆಸ್ಪತ್ರೆ ಮುಂದೆ ಜಮಾಯಿಸಿದರು.

ಈ ಸಂಬಂಧ ರಾಮಸಮುದ್ರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಲಾ ₹5 ಲಕ್ಷ ಪರಿಹಾರದ ಭರವಸೆ

ಆಸ್ಪತ್ರೆಗೆ ಭೇಟಿ ನೀಡಿದ ಸೆಸ್ಕ್‌ ಅಧಿಕಾರಿಗಳು ಕುಟುಂಬದವರನ್ನು, ಗ್ರಾಮಸ್ಥರನ್ನು ಸಮಾಧಾನಪಡಿಸಿದರು. ಆಕಸ್ಮಿಕವಾಗಿ ಈ ಘಟನೆ ನಡೆದಿದೆ ಎಂದು ಹೇಳಿದರು.

ಸೆಸ್ಕ್ ಚಾಮರಾಜನಗರ ವಿಭಾಗದ ಲೆಕ್ಕಾಧಿಕಾರಿ ಭಾಸ್ಕರ್‌ ಮಾತನಾಡಿ, ‘ಇಲಾಖೆಯಿಂದ ಮೃತರ ಕುಟುಂಬಕ್ಕೆ ತಲಾ ₹ 5 ಲಕ್ಷದಂತೆ ₹ 10 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಗ್ರಾಮೀಣ ಭಾಗದಲ್ಲಿ ಹಲವು ಕಡೆಗಳಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದಿದ್ದು, ತುಂಡಾಗುವ ಸ್ಥಿತಿಯಲ್ಲಿವೆ. ಅಧಿಕಾರಿಗಳು ತಕ್ಷಣವೇ ಅದನ್ನು ಸರಿಪಡಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದರು.

‘ಬೇಸಿಗೆಯಲ್ಲಿ ಸಾಮಾನ್ಯವಾಗಿ ಬಿಸಿಲಿನ ತಾಪಕ್ಕೆ ವಿದ್ಯುತ್‌ ತಂತಿಗಳು ಜೋತುಬೀಳುತ್ತವೆ ಮತ್ತು ತುಂಡಾಗುತ್ತವೆ’ ಎಂದು ಸೆಸ್ಕ್ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.