ADVERTISEMENT

ಚಾಮರಾಜನಗರ: ₹500ಕ್ಕೆ ತಯಾರಾಯಿತು ದೂರದರ್ಶಕ!

200 ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿತರಿಸಲಿರುವ ದೀನಬಂಧು ಸಂಸ್ಥೆ

ಸೂರ್ಯನಾರಾಯಣ ವಿ
Published 29 ಸೆಪ್ಟೆಂಬರ್ 2020, 12:29 IST
Last Updated 29 ಸೆಪ್ಟೆಂಬರ್ 2020, 12:29 IST
ದೂರದರ್ಶಕದ ತಯಾರಿಕೆಗೆ ಬಳಕೆಯಾದ ಸಲಕರಣೆಗಳು
ದೂರದರ್ಶಕದ ತಯಾರಿಕೆಗೆ ಬಳಕೆಯಾದ ಸಲಕರಣೆಗಳು   

ಚಾಮರಾಜನಗರ: ಮಕ್ಕಳ ಸೃಜನಶೀಲ ಕಲಿಕೆಗೆ ಉತ್ತೇಜನಾ ನೀಡುತ್ತಾ ಬಂದಿರುವ ಇಲ್ಲಿ‌ನ ದೀನಬಂಧು ಸಂಸ್ಥೆ, ಪಿವಿಸಿ ಪೈಪ್‌ಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ದೂರದರ್ಶಕವನ್ನು ತಯಾರಿಸಿದೆ.

ಸಂಸ್ಥೆಯು ಜಿಲ್ಲೆಯ ಗ್ರಾಮೀಣ ಭಾಗದ 200 ಶಾಲೆಗಳಿಗೆ ಈ ದೂರದರ್ಶಕವನ್ನು ಉಚಿತವಾಗಿ ನೀಡಲಿದೆ.

ಸಂಸ್ಥೆಯ ಶಿಕ್ಷಕರ ಸಂಪನ್ಮೂಲ ಕೇಂದ್ರದ ಸಿಬ್ಬಂದಿ ಇದನ್ನು ತಯಾರಿಸಿದ್ದಾರೆ. ಕೆಪ್ಲೇರಿಯನ್ ಮಾದರಿಯ, ವಕ್ರೀಭವಿತ ದೂರದರ್ಶಕವನ್ನು (ರಿಫ್ರಾಕ್ಷನ್ ಟೆಲಿಸ್ಕೋಪ್) ತಯಾರಿಸಲು ಕಾರ್ಮಿಕ ವೆಚ್ಚ ಸೇರಿದಂತೆ ₹500 ಖರ್ಚಾಗಿದೆ. ವಸ್ತುವನ್ನು 30ಪಟ್ಟು ದೊಡ್ಡದಾಗಿ ತೋರಿಸುವ ಸಾಮರ್ಥ್ಯ (ಮ್ಯಾಗ್ನಿಫಿಕೇಷನ್) ಇದಕ್ಕಿದೆ.

ADVERTISEMENT

'ಗುರುಗ್ರಹ ಹಾಗೂ ಅದರ ಕೆಲವು ಉಪಗ್ರಹಗಳನ್ನು ಇದರಲ್ಲಿ ಗುರುತಿಸಿದ್ದೇನೆ. ಸೂಕ್ಷ್ಮವಾಗಿ ಗಮನಿಸಿದರೆ ಶನಿ ಗ್ರಹದ ಉಂಗುರವೂ ಕಾಣುತ್ತದೆ. ಈ ಸಾಮರ್ಥ್ಯದ ದೂರದರ್ಶಕಕ್ಕೆಮಾರುಕಟ್ಟೆಯಲ್ಲಿ ₹6,000-₹7,000 ಬೆಲೆ ಇದೆ' ಎಂದು ಹೇಳುತ್ತಾರೆ ಶಿಕ್ಷಕ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಭರತ್.

ಪಿವಿಸಿ ಪೈಪ್ ಬಳಕೆ: ದೂರದರ್ಶಕಕ್ಕೆ ಅಗತ್ಯವಾದ ಎರಡು ಮಸೂರಗಳನ್ನು ಮಾತ್ರ (ಆಬ್ಜೆಕ್ಟಿವ್ ಲೆನ್ಸ್ ಹಾಗೂ ಐ ಪೀಸ್) ಹೊರಗಡೆಯಿಂದ ತರಿಸಿಕೊಳ್ಳಲಾಗಿದೆ. ಪಿವಿಸಿ ಪೈಪ್‌ಗಳನ್ನು ಹೆಚ್ಚು ಬಳಸಲಾಗಿದೆ. ಸ್ಟ್ಯಾಂಡ್‌ಗಾಗಿ ಪ್ಲೈವುಡ್‌ ಬಳಸಲಾಗಿದೆ. ದೂರದರ್ಶಕದ ಒಳಭಾಗದಲ್ಲಿ ಬೆಳಕಿನ ಪ್ರತಿಫಲನ ತಡೆಯಲು ಕಪ್ಪು ಬಣ್ಣದ ಶೀಟ್ ಅನ್ನು ಹಾಕಲಾಗಿದೆ. ಈ ದೂರದರ್ಶಕವನ್ನು ಸುಲಭವಾಗಿ ಬಿಚ್ಚಿ, ಬೇಕಾದಾಗ ಜೋಡಿಸಬಹುದು.

'ದೊಡ್ಡ ಮಸೂರವನ್ನು (ಆಬ್ಜೆಕ್ಟಿವ್ ಲೆನ್ಸ್) ಮುಂಬೈನ ತೇಜರಾಜ್ ಸಂಸ್ಥೆಯಿಂದ ಖರೀದಿಸಲಾಗಿದೆ. ಐ ಪೀಸ್ ಅನ್ನು ಪುಣೆಯ ಸಂಸ್ಥೆಯೊಂದು‌ ಪೂರೈಸಿದೆ. ನಮ್ಮ ಅಗತ್ಯಕ್ಕೆ‌ ತಕ್ಕಂತಹ ಮಸೂರವನ್ನು ಪೂರೈಸುವಂತೆ ಮನವಿ‌ ಮಾಡಿದ್ದಕ್ಕೆ ಸಂಸ್ಥೆಗಳು ಸ್ಪಂದಿಸಿವೆ. ತಯಾರಿಸುವಾಗ ಕೆಲವು ತಜ್ಞರ ಅಭಿಪ್ರಾಯವನ್ನೂ ಕೇಳಿದ್ದೇವೆ' ಎಂದು ಸಂಪನ್ಮೂಲ ಕೇಂದ್ರದ ಕೇತನ್ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಕಾರ್ಯಾಗಾರ: ದೀನ ಬಂಧು ಸಂಸ್ಥೆ ಪ್ರತಿ ವರ್ಷ ಜಿಲ್ಲೆಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ 200 ವಿಜ್ಞಾನ/ ಗಣಿತ ಶಿಕ್ಷಕರಿಗೆ ಕಾರ್ಯಾಗಾರ ಏರ್ಪಡಿಸುತ್ತದೆ. ಇದಕ್ಕೆ ಐಟಿ ಕ್ಷೇತ್ರದ ಒರಾಕಲ್ ಸಂಸ್ಥೆ ನೆರವು ನೀಡುತ್ತದೆ.

'ಈ ಬಾರಿಯ ಕಾರ್ಯಾಗಾರದಲ್ಲಿ ವಕ್ರೀಭವಿತ ದೂರದರ್ಶಕವನ್ನು ತಯಾರಿಸುವ ವಿಧಾನವನ್ನು ತಿಳಿಸಿಕೊಡಲಾಗುತ್ತಿದೆ. ಒಂದು ಬ್ಯಾಚ್‌ನಲ್ಲಿ 25 ಶಿಕ್ಷಕರು ಭಾಗವಹಿಸಲಿದ್ದಾರೆ. ಕೋವಿಡ್ ಕಾರಣದಿಂದ ಗೂಗಲ್ ಮೀಟ್ ಮೂಲಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ' ಎಂದು ದೀನಬಂದು‌ ಸಂಸ್ಥೆಯ ಆಡಳಿತಾಧಿಕಾರಿ ಪ್ರಜ್ಞಾ ಅವರು ತಿಳಿಸಿದರು.

ದೂರದರ್ಶಕದ ತಯಾರಿಗೆ ಬೇಕಾದ ವಸ್ತುಗಳನ್ನು ಸಂಸ್ಥೆಯೇ ಶಿಕ್ಷಕರಿಗೆ ಪೂರೈಸುತ್ತದೆ.‌ ಕಾರ್ಯಾಗಾರದಲ್ಲಿ ಸಿದ್ಧಪಡಿಸಿದ ದೂರದರ್ಶಕಗಳು ನಂತರ ಆಯಾ ಶಾಲೆಗಳ ವಿಜ್ಞಾನ ಪ್ರಯೋಗಾಲಯ ಸೇರಲಿದೆ.

'ಮಸೂರಗಳು, ದೂರದರ್ಶಕ ಅದರ ಕಾರ್ಯನಿರ್ವಹಣೆ ಸೇರಿದಂತೆ ಎಲ್ಲ ವಿವರಗಳನ್ನು ಕಾರ್ಯಾಗಾರದಲ್ಲಿ ತಿಳಿಸಿಕೊಡುತ್ತೇವೆ. ಇದರಿಂದ ಮಕ್ಕಳಿಗೆ‌ ಬೋಧಿಸಲು ಶಿಕ್ಷಕರಿಗೆ ಅನುಕೂಲವಾಗಲಿದೆ. ದೂರದರ್ಶಕವನ್ನು ಬಿಡಿಸಿ, ನಂತರ ಜೋಡಿಸಲು ಸಾಧ್ಯವಿರುವುದರಿಂದ ಮಕ್ಕಳಿಗೂ ಸುಲಭವಾಗಿ ಅರ್ಥವಾಗುತ್ತದೆ' ಎಂದು ಸಂಪನ್ಮೂಲ ಕೇಂದ್ರದ‌ ಮತ್ತೊಬ್ಬ ಸದಸ್ಯ ರಘು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.