ADVERTISEMENT

ಅಪೌಷ್ಟಿಕ ಮಕ್ಕಳಿಗೆ ದೀನಬಂಧು ಸಂಸ್ಥೆ ನೆರವು: ಡಿಸಿಗೆ ಜಯದೇವ ಪತ್ರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 12:02 IST
Last Updated 13 ಜೂನ್ 2021, 12:02 IST
ಜಿ.ಎಸ್‌. ಜಯದೇವ
ಜಿ.ಎಸ್‌. ಜಯದೇವ   

ಚಾಮರಾಜನಗರ: ಕೋವಿಡ್‌ನ ಮೂರನೇ ಅಲೆಯ ಸಂದರ್ಭದಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ತಜ್ಞರು ಅಭಿಪ್ರಾಯಪಟ್ಟಿರುವುದರಿಂದ ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವು ನೀಡಲು ನಗರದ ದೀನಬಂಧು ಸಂಸ್ಥೆ ಮುಂದಾಗಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್‌.ಜಯದೇವ ಅವರು ಪತ್ರ ಬರೆದಿದ್ದಾರೆ.

‘ಒಂದು ಸಮೀಕ್ಷೆಯಂತೆ ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ನಾಲ್ಕೂವರೆ ಲಕ್ಷ ಮಕ್ಕಳಿದ್ದಾರೆ. ಕೋವಿಡ್‌ ಮೂರನೇ ಅಲೆಯು ಅಪೌಷ್ಟಿಕ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವರದಿಗಳು ಹೇಳುತ್ತಿವೆ. ಅಪೌಷ್ಟಿಕತೆಯ ಜೊತೆ ಕೋವಿಡ್‌ ಕೂಡ ಮಕ್ಕಳಿಗೆ ಮಾರಣಾಂತಿಕವಾಗಿ ಪರಿಣಮಿಸಬಹುದು. ಹಾಗಾಗಿ, ಚಾಮರಾಜನಗರದ ಸುತ್ತಮುತ್ತ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ, ಅವರಿಗೆ ಪೌಷ್ಟಿಕ ಆಹಾರ ನೀಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತದೆ ಎಂದು ಭಾವಿಸುತ್ತೇನೆ’ ಎಂದು ಜಯದೇವ ಅವರು ಪತ್ರದಲ್ಲಿ ಹೇಳಿದ್ದಾರೆ.

ADVERTISEMENT

‘ಇಂತಹ ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್‌ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ಸಂದರ್ಭದಲ್ಲಿ, ದೀನಬಂಧು ಸಂಸ್ಥೆಯೂ ನಮ್ಮ ಮಿತಿಯಲ್ಲಿ ಸಾಧ್ಯವಾದ ನೆರವನ್ನು ನೀಡಲು ಮುಂದಾಗಿದೆ. ನಾವು ನೆರವು ನೀಡಬಹುದಾದ ಮಕ್ಕಳ ವಿವರವನ್ನು ತಿಳಿಸಿದಲ್ಲಿ ನೇರವಾಗಿ ಅಥವಾ ಜಿಲ್ಲಾಡಳಿತದ ಸಹಯೋಗದಲ್ಲಿ ನೆರವು ನೀಡಲು ದೀನಬಂಧು ಸಂಸ್ಥೆಯು ಕೈಜೋಡಿಸಲು ಸಿದ್ಧವಿದೆ’ ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.