ADVERTISEMENT

ಮಹದೇಶ್ವರ ಬೆಟ್ಟ: ಅದ್ಧೂರಿ ರಥೋತ್ಸವ, ಸಾವಿರಾರು ಭಕ್ತರು ಸಾಕ್ಷಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2022, 6:49 IST
Last Updated 26 ಅಕ್ಟೋಬರ್ 2022, 6:49 IST
ದೀಪಾವಳಿ ಜಾತ್ರಾ ಮಹೋತ್ಸವ
ದೀಪಾವಳಿ ಜಾತ್ರಾ ಮಹೋತ್ಸವ    

ಮಹದೇಶ್ವರಬೆಟ್ಟ:ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಇಲ್ಲಿನ ಮಲೆ‌ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಮಹದೇಶ್ವರ ಸ್ವಾಮಿಯ ಮಹಾರಥೋತ್ಸವ ಬುಧವಾರ ಬೆಳಿಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೇಡ ಗಂಪಣ ಸಂಪ್ರದಾಯದಂತೆ ರಥಕ್ಕೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ ಬಳಿಕ ಸಮುದಾಯದ ಪುಟ್ಟ ಬಾಲಕಿಯರು ರಥಕ್ಕೆ ಬೆಲ್ಲದ ಆರತಿ ಬೆಳಗಿದರು.

ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುಸ್ವಾಮಿ ನೇತೃತ್ವದಲ್ಲಿ ರಥ ಮುಂಭಾಗ ಬೂದುಗುಂಬಳ ಕಾಯಿಯನ್ನು ಒಡೆಯುವ ಮೂಲಕ ಬೆಳಗ್ಗೆ 9.15ಕ್ಕೆ ಮಹಾರಥೋತ್ಸವಕ್ಕೆ ಚಾಲನೆ ಸಿಕ್ಕಿತು.

ADVERTISEMENT

ನೂರಾರು ಭಕ್ತರು ಉಘೇ ಮಾದಪ್ಪ ಎಂಬ ಘೋಷಣೆಯೊಂದಿಗೆ ರಥವನ್ನು ಎಳೆದರು.

ದೇವಾಲಯ ಆವರಣ ಸೇರಿದಂತೆ ಸುತ್ತಮುತ್ತ‌ ನೆರೆದಿದ್ದ ಸಾವಿರಾರು ಭಕ್ತರು ಮೊಳಗಿಸಿದ 'ಉಘೇ ಮಾದಪ್ಪ, ಉಘೇ ಮಾಯ್ಕಾರ.. ಉಘೇ ಉಘೇ..' ಎಂಬ ಉದ್ಗಾರ ಬೆಟ್ಟದಾದ್ಯಂತ ಅನುರಣಿಸಿತು.

ಹೂವು,ಬಾಳೆ ಕಂದು, ಬಣ್ಣ ಬಣ್ಣಗಳ ವಸ್ತ್ರಗಳಿಂದ ಅಲಂಕೃತಗೊಂಡಿದ್ದ ರಥವು ದೇವಾಲಯದ ಸುತ್ತ ಒಂದು ಸುತ್ತು ಸಾಗಿತು. ರಥ ಸಾಗಿದ ಬಳಿಕ ಪಲ್ಲಕ್ಕಿ ಉತ್ಸವ ಜರುಗಿತು.

ನವ ವಧುವರರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ರಥಕ್ಕೆ ಹಣ್ಣು ಜವನ, ಧವಸ ಧಾನ್ಯ, ನಾಣ್ಯಗಳನ್ನು ಎಸೆದು ಹರಕೆ ತೀರಿಸಿದರು.

ರಥ ಸಾಗುವ ಹಾದಿಯಲ್ಲಿ ವಾದ್ಯಮೇಳ, ಛತ್ರಿ ಚಾಮರಗಳು, ವೀರಗಾಸೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಸಾಗಿ ಉತ್ಸವದ ಮೆರುಗು ಹೆಚ್ಚಿಸಿದವು.

ಉತ್ಸಾಹದಲ್ಲಿ ರಥ ಎಳೆದ ಅಧಿಕಾರಿಗಳು: ರಥೋತ್ಸವಕ್ಕ ಚಾಲನೆ ದೊರೆಯುತ್ತಿದ್ದಂತೆ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ, ಉಪ ಕಾರ್ಯದರ್ಶಿ ಬಸವರಾಜಪ್ಪ, ಲೆಕ್ಕ ಅಧೀಕ್ಷಕ ಪ್ರವೀಣ್ ಪಾಟೀಲ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡ ರಥ ಎಳೆದರು.

ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರಿಂದ ಯಾವುದೇ ಗೊಂದಲ ಉಂಟಾಗಲಿಲ್ಲ.

ರಥೋತ್ಸವದೊಂದಿಗೆ ಐದು ದಿನಗಳ ದೀಪಾವಳಿ ಜಾತ್ರೆಗೆ ತೆರೆ ಬಿದ್ದಿದೆ.

ಭಕ್ತರ ಸರತಿ ಸಾಲು: ರಥೋತ್ಸವದ ಬಳಿಕ ಭಕ್ತರು ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು.

ಕೆಲವರು ವಿಶೇಷ ಟಿಕೆಟ್ ಖರೀದಿಸಿ ದರ್ಶನ ಪಡೆದರೆ, ಹಲವರು ಸರತಿ ಸಾಲಿನಲ್ಲಿ ಸಾಗಿ ಮಾದಪ್ಪನ ದರ್ಶನ ಪಡೆದರು. ದಾಸೋಹ, ಲಾಡು ಪ್ರಸಾದವನ್ನು ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.