ADVERTISEMENT

ಗೌರಿ ಹಬ್ಬ: ಮೊರಕ್ಕೆ ಹೆಚ್ಚಿದ ಬೇಡಿಕೆ

ಬಾಗಿನದ ಮೊರ ತಯಾರಿಕೆಗೆ ಮಡಿಕೇರಿಯ ಬಿದಿರು ಬಳಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 3:40 IST
Last Updated 9 ಸೆಪ್ಟೆಂಬರ್ 2021, 3:40 IST
ಚಾಮರಾಜನಗರದ ಮೇದಾರ ಬೀದಿಯಲ್ಲಿ ಮೊರ ತಯಾರಿಸುವುದರಲ್ಲಿ ನಿರತರಾಗಿದ್ದ ಮಹಿಳೆಯರು
ಚಾಮರಾಜನಗರದ ಮೇದಾರ ಬೀದಿಯಲ್ಲಿ ಮೊರ ತಯಾರಿಸುವುದರಲ್ಲಿ ನಿರತರಾಗಿದ್ದ ಮಹಿಳೆಯರು   

ಚಾಮರಾಜನಗರ: ಕೋವಿಡ್‌ನ ಸಂಕಷ್ಟದ ನಡುವೆಯೇ ಗೌರಿ–ಗಣೇಶ ಹಬ್ಬವನ್ನು ಆಚರಿಸಲು ಜಿಲ್ಲೆಯ ಜನರು ಸಜ್ಜುಗೊಂಡಿದ್ದು, ಹೂವು–ಹಣ್ಣು, ಪೂಜಾ ಸಾಮಗ್ರಿ ಖರೀದಿಸಿದರು.

ಗೌರಿ ಹಬ್ಬದಲ್ಲಿ ಬಿದಿರಿನಿಂದ ಮಾಡಿರುವ ಮೊರಕ್ಕೆ ಹೆಚ್ಚು ಮಹತ್ವವಿದೆ. ಗೌರಿ ಹಬ್ಬದಂದು ಸ್ವರ್ಣಗೌರಿಗೆ ಬಾಗಿನ ಅರ್ಪಿಸಲು ಮೊರವನ್ನು ಬಳಸುತ್ತಾರೆ.ಸ್ವರ್ಣಗೌರಿಗೆ ಬಾಗಿನ ಅರ್ಪಿಸಿದ ಮೊರಗಳನ್ನು ಮುತ್ತೈದೆಯರಿಗೆ ನೀಡುವುದು ಸಂಪ್ರದಾಯ. ಹಾಗಾಗಿ, ಹಬ್ಬ ಆಚರಿಸುವವರೆಲ್ಲರೂ ಮೊರಗಳನ್ನು ಖರೀದಿಸುತ್ತಾರೆ.

ನಗರದಲ್ಲಿ ಮೇದಾರ ಸಮು ದಾಯದವರು ಬಿದಿರಿನಿಂದ ಮೊರ ವನ್ನು ತಯಾರಿಸುವ ಕಸುಬನ್ನು ಮಾಡುತ್ತಿದ್ದಾರೆ. ವರ್ಷದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಮಾತ್ರ ಅವರಿಗೆ ಕೈತುಂಬಾ ಕೆಲಸ.ನಗರದಲ್ಲಿ 40 ಮೇದಾರರ ಕುಟುಂಬಗಳು ಈಗಲೂ ಮೊರಗಳನ್ನು ತಯಾರಿಸುತ್ತವೆ.

ADVERTISEMENT

ಕಳೆದ ವರ್ಷ ಕೋವಿಡ್‌ ಕಾರಣಕ್ಕೆ ಹಬ್ಬದ ಆಚರಣೆ ಸರಳವಾಗಿತ್ತು. ಹೆಚ್ಚು ಮೊರಗಳು ಮಾರಾಟವಾಗಿರಲಿಲ್ಲ. ಈ ವರ್ಷವೂ ಕೋವಿಡ್‌ ಹಾವಳಿ ಮುಂದುವರಿದಿದ್ದರಿಂದ ಅದೇ ಪರಿಸ್ಥಿತಿ ಇರಬಹುದು ಎಂಬ ಲೆಕ್ಕಾಚಾರದಲ್ಲಿ ಈ ಬಾರಿ ಹೆಚ್ಚು ಮೊರಗಳನ್ನು ತಯಾರಿಸಲು ಅವರು ಮುಂದಾಗಿರಲಿಲ್ಲ.

ಕೋವಿಡ್‌ ನಿರ್ಬಂಧ ಇರಬಹುದು ಎಂಬ ಕಾರಣಕ್ಕೆ ಅವಧಿಗೂ ಮುನ್ನವೇ ಸ್ವಲ್ಪ ಕಡಿಮೆ ಬೆಲೆಗೆ ಸಂಗ್ರಹದಲ್ಲಿದ್ದ ಮೊರಗಳನ್ನು ಮಾರಾಟ ಮಾಡಿದ್ದರು. ಆದರೆ, ಈಗ ಜಿಲ್ಲಾಡಳಿತ ‌ಷರತ್ತುಬದ್ಧ ಅನುಮತಿ ನೀಡಿರುವುದರಿಂದ ಹೆಚ್ಚಿನ ಜನರು ಮೊರಕ್ಕೆ ಬೇಡಿಕೆ ಇಟ್ಟಿದ್ದು, ಮೇದಾರ ಸಮುದಾಯದವರು ತಯಾರಿಕೆಯಲ್ಲಿ ತೊಡಗಿದ್ದಾರೆ.

‘ಗೌರಿ–ಗಣೇಶ ಹಬ್ಬದಲ್ಲಿ ನಮಗೆ ಸ್ವಲ್ಪ ಕೆಲಸ ಹೆಚ್ಚು. ಕಳೆದ ವರ್ಷ ಏನೂ ಇರಲಿಲ್ಲ. ಈ ವರ್ಷವೂ ಅದೇ ಪರಿಸ್ಥಿತಿ ಅಂದುಕೊಂಡಿದ್ದೆವು. ಆದರೆ, ಎರಡು ದಿನದಿಂದ ಬೇಡಿಕೆ ಬರುತ್ತಿದೆ. ಹಾಗಾಗಿ, ಹೆಚ್ಚು ಶ್ರಮ ಹಾಕಿ ಮೊರಗಳನ್ನು ತಯಾರಿಸುತ್ತಿದ್ದೇವೆ’ ಎಂದು ಬಿದಿರಿನಿಂದ ಮೊರವನ್ನು ತಯಾರಿಸುತ್ತಿದ್ದ ಮೇದಾರ ಬೀದಿಯ ಸಣ್ಣತಾಯಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದಿನಿಂದಲೂ ಬಂದ ವೃತ್ತಿಯನ್ನೇ ನೆಚ್ಚಿಕೊಂಡು ಜೀವನ ದೂಡುತ್ತಿದ್ದೇವೆ. ಈಗ ಬಿದಿರಿನ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿದೆ. ಸಂಪಾದನೆ ಹೆಚ್ಚಾಗುತ್ತಿಲ್ಲ. ಹಾಗಾಗಿ ಸಮುದಾಯದವರು ಈ ಕೆಲಸದಿಂದ ವಿಮುಖರಾಗುತ್ತಿದ್ದಾರೆ. ನಾವು ಪಟ್ಟ ಕಷ್ಟ ಮಕ್ಕಳಿಗೆ ಬರುವುದು ಬೇಡ ಎಂದು ಅವರನ್ನು ಈ ಕೆಲಸಕ್ಕೆ ಹಚ್ಚುತ್ತಿಲ್ಲ’ ಎಂದು ಅವರು ಅಳಲು ತೋಡಿಕೊಂಡರು.

₹130ರವರೆಗೂ ಬೆಲೆ: ಮೊರಕ್ಕೆ ಮಾರುಕಟ್ಟೆಯಲ್ಲಿ ₹ 70ರಿಂದ ₹ 130ರವರೆಗೂ ಬೆಲೆ ಇದೆ. ಚಿಕ್ಕ ಮೊರಕ್ಕೆ ₹ 70–₹ 80 ಹೇಳುತ್ತಿದ್ದಾರೆ.ದೊಡ್ಡ ಮೊರಕ್ಕೆ ₹ 100ರಿಂದ ₹ 130ರವರೆಗೂ ಬೆಲೆ ಇದೆ.

‘ನಾವು ಮಡಿಕೇರಿಯಿಂದ ಬಿದಿರನ್ನು ತರುತ್ತೇವೆ. ಅದನ್ನು ಅಗತ್ಯಕ್ಕೆ ಬೇಕಾದಷ್ಟು ಕತ್ತರಿಸಿ ಮೊರ ಹಾಗೂ ಬಿದಿರಿನ ಉತ್ಪನ್ನಗಳನ್ನು ತಯಾರಿಸುತ್ತೇವೆ. ಎರಡು ದಿನಗಳಿಂದ ಮೊರಕ್ಕೆ ದಿಢೀರ್‌ ಬೇಡಿಕೆ ಹೆಚ್ಚಾಗಿದೆ’ ಎಂದು ಮೊರ ತಯಾರಿಸುತ್ತಿದ್ದ ಸುನೀತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.