ಗುಂಡ್ಲುಪೇಟೆ: ‘ಡೆಂಗಿ ಜ್ವರ ಒಬ್ಬರಿಂದ ಒಬ್ಬರಿಗೆ ಹರಡುವ ಮಾರಣಾಂತಿಕ ಕಾಯಿಲೆ. ಡೆಂಗಿ ತಡೆಗೆ ಮುಂಜಾಗ್ರತೆಯೇ ಮದ್ದಾಗಿದ್ದು, ಸ್ವಯಂ ರಕ್ಷಣಾ ವಿಧಾನ ಅಳವಡಿಸಿಕೊಳ್ಳಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ ಕಾಲೇಜು)ಯಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಗಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡೆಂಗಿ ಕಾಯಿಲೆಯು ವೈರಸ್‍ನಿಂದ ಬರುತ್ತದೆ. ಈಡಿಸ್ ಈಜಿಪ್ಟ್ ಎಂಬ ಹೆಣ್ಣು ಸೊಳ್ಳೆಯಿಂದ ರೋಗ ಹರಡುತ್ತದೆ. ಈ ಸೊಳ್ಳೆಗಳು ಹಗಲಿನ ವೇಳೆಯಲ್ಲಿ ಕಚ್ಚುವುದರಿಂದ ಎಲ್ಲರೂ ಸ್ವಯಂ ರಕ್ಷಣಾ ವಿಧಾನ ಅಳವಡಿಸಿಕೊಳ್ಳಬೇಕು. ಮನೆಯ ಕಿಟಕಿ ಮತ್ತು ಬಾಗಿಲುಗಳಿಗೆ ಹಾಗೂ ಮಲಗುವಾಗ ಸೊಳ್ಳೆ ಪರದೆ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.
ಈಡಿಸ್ ಈಜಿಪ್ಟ್ ಸೊಳ್ಳೆಗಳು ಕೃತಕವಾಗಿ ನಿರ್ಮಿಸಿರುವ ತಾಣಗಳಲ್ಲಿ ನೀರು ಶೇಖರಣೆಯಾದ ನೀರಿನಲ್ಲಿ ಮೊಟ್ಟೆ ಇಟ್ಟು ನಂತರ ಲಾರ್ವಾಗಳಾಗಿ ಸೊಳ್ಳೆಗಳಾಗುತ್ತದೆ. ಆದ್ದರಿಂದ ಮನೆಯ ಒಳಾಂಗಣ ಮತ್ತು ಹೊರಾಂಗಣದಲ್ಲಿ ನೀರಿನ ತೊಟ್ಟಿ, ಡ್ರಮ್, ಬ್ಯಾರಲ್ ಇವುಗಳನ್ನು ಮುಚ್ಚಬೇಕು. ವಾರಕ್ಕೆ ಒಂದು ಬಾರಿಯಾದರೂ ನೀರನ್ನು ಖಾಲಿ ಮಾಡಿ ನಂತರ ಚೆನ್ನಾಗಿ ಉಜ್ಜಿ ಸ್ವಚ್ಛಗೊಳಿಸಿದ ಬಳಿಕ ಒಣಗಿಸಿ ನೀರು ತುಂಬಿಕೊಳ್ಳಬೇಕು. ಇದರಿಂದ ಸೊಳ್ಳೆಗಳ ಸಂತತಿ ಕಡಿಮೆ ಮಾಡಬಹುದು ಎಂದು ತಿಳಿಸಿದರು.
ವಿಪರೀತ ಜ್ವರ, ಮೈ ಮೇಲೆ ಕೆಂಪು ಗಂದೆಗಳು, ಕಣ್ಣಿನ ಹಿಂಭಾಗ ನೋವು, ತಲೆ ನೋವು, ಮಾಂಸಖಂಡಗಳ ನೋವು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ರೋಗ ಪರಿಣಾಮ ತೀವ್ರಗೊಂಡಾಗ ರೋಗಿಯ ಬಾಯಿ, ಮೂಗು ಹಾಗೂ ವಸಡುಗಳಿಂದ ರಕ್ತಸ್ರಾವವಾಗುತ್ತದೆ. ಅಲ್ಲದೆ ಚರ್ಮದ ಅಲ್ಲಲ್ಲಿ ರಕ್ತಸ್ರಾವದ ಗುರುತು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಆರಂಭಿಕ ಹಂತದಲ್ಲೇ ಡೆಂಗಿ ಜ್ವರದ ಲಕ್ಷಣ ಕಾಣಿಸಿಕೊಂಡರೆ, ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಎಲ್ಲ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಲಭ್ಯವಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಮಳೆ ಪ್ರಾರಂಭವಾಗಿದ್ದು, ಘನತ್ಯಾಜ್ಯಗಳಾದ ಟೈರ್, ಎಳನೀರು ಚಿಪ್ಪು, ಒಡೆದ ಪ್ಲಾಸ್ಟಿಕ್ ವಸ್ತುಗಳು ಹಾಗೂ ಅನುಪಯುಕ್ತ ಒರಳುಕಲ್ಲು ಇವುಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿರುತ್ತದೆ. ಆದ್ದರಿಂದ ನೀರು ನಿಲ್ಲದಂತೆ ನೋಡಿಕೊಳ್ಳುವ ಜೊತೆಗೆ ಮನೆ ಸುತ್ತಲಿನ ಪರಿಸರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಉಪನ್ಯಾಸಕ ರಂಗನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.