ಚಾಮರಾಜನಗರ: ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಜಿಲ್ಲೆಯಲ್ಲೂ ಡೆಂಗಿ ಆತಂಕ ಮೂಡಿಸುತ್ತಿದ್ದು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿದೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಇದುವರೆಗೂ ಜಿಲ್ಲೆಯಲ್ಲಿ 71 ಮಂದಿಯಲ್ಲಿ ಡೆಂಗಿ ದೃಢಪಟ್ಟಿದೆ.
ಚಾಮರಾಜನಗರದಲ್ಲೇ ಹೆಚ್ಚು: ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ಚಾಮರಾಜನಗರ ತಾಲ್ಲೂಕಿನಲ್ಲಿ ಹೆಚ್ಚು 43 ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಗುಂಡ್ಲುಪೇಟೆಯಲ್ಲಿ 18, ಹನೂರಿನಲ್ಲಿ 6, ಕೊಳ್ಳೇಗಾಲ ಹಾಗೂ ಯಳಂದೂರು ತಾಲ್ಲೂಕುಗಳಲ್ಲಿ ತಲಾ ಇಬ್ಬರು ಡೆಂಗಿಗೆ ತುತ್ತಾಗಿದ್ದಾರೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಂ.ಎಸ್.ರಾಜೇಶ್ ಕುಮಾರ್ ಮಾಹಿತಿ ನೀಡಿದರು.
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಚಾಮರಾಜನಗರದಲ್ಲಿ ಪರಿಸ್ಥಿತಿ ಗಂಭೀರವಾಗಿಲ್ಲ. 100 ಮಂದಿ ಶಂಕಿತ ಡೆಂಗಿ ರೋಗ ಲಕ್ಷಣ ಇರುವ ವ್ಯಕ್ತಿಗಳನ್ನು ಪರೀಕ್ಷೆಗೊಳಪಡಿಸಿದಾಗ 10ಕ್ಕಿಂತ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟರೆ ಎಚ್ಚರಿಕೆಯ ಕರೆಗಂಟೆ ಎಂದು ಪರಿಗಣಿಸಲಾಗುತ್ತದೆ. ಒಂದೇ ಜಾಗದಲ್ಲಿ ಹಲವರಿಗೆ ಡೆಂಗಿ ಕಾಣಿಸಿಕೊಂಡರೂ ‘ಕ್ಲಸ್ಟರ್’ ಎಂದು ಘೋಷಿಸಲಾಗುತ್ತದೆ. ಅಂತಹ ಕ್ಲಸ್ಟರ್‌ಗಳು ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿ ಡೆಂಗಿ ಪಾಸಿಟಿವಿಟಿ ದರ ಶೇ 8ರ ಆಸುಪಾಸಿನಲ್ಲಿದೆ ಎನ್ನುತ್ತಾರೆ ಅವರು.
ಕಳೆದ ವರ್ಷಕ್ಕೆ ಹೋಲಿಸಿದರೆ ಏರಿಕೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಡೆಂಗಿ ಹೆಚ್ಚಾಗಿರುವುದು ಕಂಡುಬಂದಿದೆ. 2023ರಲ್ಲಿ ಜುಲೈ ಅಂತ್ಯಕ್ಕೆ 61 ಪ್ರಕರಣಗಳು ಪತ್ತೆಯಾಗಿದ್ದವು. ಈ ವರ್ಷ ಜುಲೈ 12ಕ್ಕೆ 71 ಪ್ರಕರಣಗಳು ಕಾಣಿಸಿಕೊಂಡಿವೆ. ಡೆಂಗಿಯಿಂದ ಯಾರೂ ಮೃತಪಟ್ಟಿಲ್ಲ. ಇಬ್ಬರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಉಳಿದವರು ಡಿಸ್‌ಚಾರ್ಜ್ ಆಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಮೇಲೆ ಸಂಪೂರ್ಣ ನಿಗಾ ಇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆತಂಕ ಬೇಡ; ಮುನ್ನೆಚ್ಚರಿಕೆ ಇರಲಿ:
ಡೆಂಗಿ ಮಾರಣಾಂತಿಕವಾದರೂ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿದರೆ ಸುರಕ್ಷಿತವಾಗಿರಬಹುದು. ಡೆಂಗಿಯನ್ನು ಸಾಮಾನ್ಯ ಜ್ವರ ಎಂದೇ ಪರಿಗಣಿಸಲಾಗುತ್ತದೆ. ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬೇಕು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಹಗಲು ಹೊತ್ತಿನಲ್ಲೂ ಮಲಗುವಾಗ ಸೊಳ್ಳೆಪರದೆ ಬಳಸಬೇಕು, ಸೊಳ್ಳೆಗಳ ಸಂತಾನೋತ್ಪತ್ತಿ ಜಾಗಗಳನ್ನು ನಾಶಗೊಳಿಸಬೇಕು, ಶುದ್ಧವಾದ ನೀರು ಸೇವಿಸಬೇಕು ಎನ್ನುತ್ತಾರೆ ವೈದ್ಯರು.
ರೋಗದ ಲಕ್ಷಣಗಳು:
ಜ್ವರ, ವಿಪರೀತ ಮೈಕೈ ನೋವು, ಅತಿಯಾದ ತಲೆನೋವು, ವಾಕರಿಕೆ ಬರುವುದು ರೋಗದ ಲಕ್ಷಣಗಳು. ಕೆಲವರಿಗೆ ಮೈಮೇಲೆ ಗಂದೆಗಳು ಕಾಣಿಸಿಕೊಂಡು ರಕ್ತಸ್ರಾವವಾಗುತ್ತದೆ. ಡೆಂಗಿ ದೃಢಪಟ್ಟರೂ ಅಗತ್ಯ ಚಿಕಿತ್ಸೆ ಪಡೆದರೆ ಕಾಯಿಲೆ ವಾಸಿಯಾಗುತ್ತದೆ. ಆದರೆ, ಕೆಲವರಲ್ಲಿ ಮಾತ್ರ ರಕ್ತದೊತ್ತಡ ಮಟ್ಟ ಕುಸಿತವಾಗಿ ಹೃದಯಕ್ಕೆ ರಕ್ತಪೂರೈಕೆ ಪ್ರಮಾಣ ಕುಂಠಿತಗೊಂಡು ಬಹು ಅಂಗಾಂಗ ವೈಫಲ್ಯದಿಂದ ಸಾವು ಸಂಭವಿಸುವ ಅಪಾಯ ಇರುತ್ತದೆ. ಸಾರ್ವಜನಿಕರು ನಿರ್ಲಕ್ಷ್ಯ ತೋರದೆ ಯಾವುದೇ ರೀತಿಯ ಜ್ವರ ಕಾಣಿಸಿಕೊಂಡರೂ ಡೆಂಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ ವೈದ್ಯರು.
ಶುದ್ಧ ನೀರಿನಲ್ಲೇ ಡೆಂಗಿ ಸೊಳ್ಳೆ ಹೆಚ್ಚು:
ಡೆಂಗಿ ಹರಡುವ ಸೊಳ್ಳೆಗಳು ಚರಂಡಿ, ಕೊಳಚೆ ನೀರಿಗಿಂತ ಹೆಚ್ಚಾಗಿ ಉತ್ಪತ್ತಿಯಾಗುವುದು ಶುದ್ಧ ನೀರಿನಲ್ಲಿ (ಕಂಟೈನರ್ ಬ್ರೀಡರ್). ಮನೆಯ ಸುತ್ತಮುತ್ತ ಬಿದ್ದಿರುವ ಬಾಟೆಲ್, ತೆಂಗಿನ ಚಿಪ್ಪು, ಟಯರ್, ಡ್ರಮ್ ಹೀಗೆ ನೀರು ನಿಲ್ಲುವ ಯಾವುದೇ ವಸ್ತುವಿನಲ್ಲೂ ಡೆಂಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸೊಳ್ಳೆಗಳು ನೀರಿನ ಮೇಲ್ಮೈನಲ್ಲಿ ಮೊಟ್ಟೆ ಇಟ್ಟು ಮರಿಗಳಾಗಿ ಸೊಳ್ಳೆಗಳಾಗಿ ರೂಪಾಂತರವಾಗುವ ಹಂತದವರೆಗೂ ನೀರು ಅತ್ಯವಶ್ಯಕವಾಗಿರುತ್ತದೆ.
ಹಾಗಾಗಿ, ಖಾಲಿ ವಸ್ತುಗಳಲ್ಲಿ ನೀರು ನಿಲ್ಲದಂತೆ ರೋಗದಿಂದ ರಕ್ಷಣೆ ಪಡೆಬಹುದು. ಸಾರ್ವಜನಿಕರು ಮೂರುದಿನಗಳಿಗೊಮ್ಮೆ ಮನೆಯಲ್ಲಿರುವ ಟ್ಯಾಂಕ್, ತೊಟ್ಟಿ, ಪಾತ್ರೆಗಳು ಸೇರಿದಂತೆ ನೀರಿನ ಸಂಗ್ರಹಾಗಾರಗಳನ್ನು ಶುಚಿಗೊಳಿಸಬೇಕು ಎನ್ನುತ್ತಾರೆ ಡಾ. ಡಾ.ಎಂ.ಎಸ್.ರಾಜೇಶ್ ಕುಮಾರ್.
‘ನಾಲ್ಕು ಮಾದರಿಯ ಡೆಂಗಿ ವೈರಸ್’
ಡೆಂಗಿಯಲ್ಲಿ ನಾಲ್ಕು ಮಾದರಿಯ ವೈರಸ್‌ಗಳಿದ್ದು ಜಿಲ್ಲೆಯಲ್ಲಿ ಡೆಂಗಿ–2 ಮಾದರಿಯ ವೈರಸ್ ಹೆಚ್ಚಿನವರಲ್ಲಿ ಪತ್ತೆಯಾಗಿದೆ. ಮೂರು ಹಾಗೂ ನಾಲ್ಕನೇ ಮಾದರಿಯ ವೈರಸ್ ಇಬ್ಬರಲ್ಲಿ ಮಾತ್ರ ಕಂಡುಬಂದಿದೆ. ಹಿಂದೆ ಡೆಂಗಿ–2 ವೈರಸ್ ಪತ್ತೆಯಾದವರಿಗೆ ಮತ್ತೊಮ್ಮೆ ಡೆಂಗಿ–2 ವೈರಸ್ ಪತ್ತೆಯಾದರೆ ಆರೋಗ್ಯ ಸ್ಥಿತಿ ಗಂಭೀರವಾಗುವುದಿಲ್ಲ. ಕಾರಣ ರೋಗಿಯ ದೇಹದಲ್ಲಿ ಪ್ರತಿಕಾಯ ಕಣಗಳು ಉತ್ಪತ್ತಿಯಾಗಿರುತ್ತವೆ. ಆದರೆ ಹಿಂದೆ ಡೆಂಗಿ 1 3 ಹಾಗೂ 4ನೇ ಮಾದರಿಯ ವೈರಸ್‌ಗೆ ತುತ್ತಾದವರಲ್ಲಿ ಪ್ರಸ್ತುತ ಡೆಂಗಿ–2 ವೈರಸ್ ಕಾಣಿಸಿಕೊಂಡರೆ ಆರೋಗ್ಯ ಸ್ಥಿತಿ ಗಂಭೀರವಾಗುವ ಸಾಧ್ಯತೆಗಳು ಹೆಚ್ಚು. ಬಿಳಿ ರಕ್ತಕಣಗಳು ಗಣನೀಯವಾಗಿ ಕುಸಿಯುವುದು ಚರ್ಚದ ಮೇಲೆ ಗಂಧೆಗಳಾಗಿ ರಕ್ತಸ್ತಾವ ಉಂಟಾಗಿ ಮರಣವೂ ಸಂಭವಿಸುವ ಸಾಧ್ಯತೆಗಳು ಇರುತ್ತವೆ ಎನ್ನುತ್ತಾರೆ ವೈದ್ಯರು.
ಜಿಲ್ಲೆಯ ಶೇ 50ರಷ್ಟು ಶಾಲೆಗಳ ಮಕ್ಕಳಿಗೆ ಡೆಂಗಿ ಮುನ್ನೆಚ್ಚರಿಕಾ ಕ್ರಮಗಳ ಪ್ರಾತ್ಯಕ್ಷಿಕೆ ನೀಡಲಾಗಿದೆ. ಡೆಂಗಿ ನಿಯಂತ್ರಣಕ್ಕೆ ಇದೊಂದು ಪರಿಣಾಮಕಾರಿ ಅಭಿಯಾನವಾಗಿ ಮಾರ್ಪಟ್ಟಿದ್ದು ಎಲ್ಲೆ ಶಾಲೆಗಳಿಗೂ ವಿಸ್ತರಿಸಲಾಗುವುದು.ಡಾ.ಎಂ.ಎಸ್.ರಾಜೇಶ್ ಕುಮಾರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.