ADVERTISEMENT

ಮನಸೋಲಿಸುವ ದುಂಡಮ್ಮನ ತಂಡದ ಕಂಠ ಸಿರಿ

ಯಳಂದೂ‌ರು: ಜಾ‌ತ್ರೆಗಳು, ಎಣ್ಣೆ ಶಾಸ್ತ್ರ, ತೊಟ್ಟಿಲುಶಾಸ್ತ್ರ, ಕಂಕಣ, ಬಳೇಶಾಸ್ತ್ರಗಳಲ್ಲಿ ಗಾಯನ

ನಾ.ಮಂಜುನಾಥ ಸ್ವಾಮಿ
Published 5 ಫೆಬ್ರುವರಿ 2019, 13:52 IST
Last Updated 5 ಫೆಬ್ರುವರಿ 2019, 13:52 IST
ದುಂಡಮ್ಮ
ದುಂಡಮ್ಮ   

ಯಳಂದೂರು: ಮಾದಪ್ಪನ ಜಾತ್ರೆಯಲ್ಲಿ ತಮಟೆ ಸದ್ದು ಕೇಳುತ್ತಿದ್ದರೆ, ನಿಂತಲ್ಲಿಯೇ ಕಾಲು ಅಲುಗಾಡುತ್ತವೆ. ನೋಡ ನೋಡುತ್ತಿದ್ದಂತೆ ನೀರೆಯರು ಒಟ್ಟಾಗಿ ಸದ್ದಿನ ತಾಳಕ್ಕೆ ನರ್ತಿಸುತ್ತಾರೆ.ಜಾತ್ರೆಯ ಸಂಭ್ರಮ ಮತ್ತಷ್ಟು ಕಳೆಗಟ್ಟುತ್ತದೆ. ನಡುವೆ ರಾಗಬದ್ಧವಾಗಿ ಹೊಮ್ಮುವ ಜಾನಪದ ಹಾಡು ಕರ್ಣಾನಂದಉಂಟುಮಾಡುತ್ತದೆ.

– ಇದು 60ರಹರೆಯದ ಮದ್ದೂರು ದುಂಡಮ್ಮನ ತಂಡದ ಗತ್ತು ಗೈರತ್ತು.

ತಾಲ್ಲೂಕಿನ ಮದ್ದೂರು ಶ್ರೀಬಿಸಿಲು ಮಾರಮ್ಮ ಸೋಬಾನೆ ಮತ್ತು ಸಾಂಸ್ಕೃತಿಕ ಕಲಾ ಸಂಘದಮೂಲಕ ಗುರುತಿಸಿಕೊಂಡಿರುವ ದುಂಡಮ್ಮ ಅವರ ತಂಡ ಹಾವೇರಿ, ಮೈಸೂರು ಸೇರಿದಂತೆ ರಾಜ್ಯದಾದ್ಯಂತ ಹಲವು ಕಡೆಗಳಲ್ಲಿ ನೃತ್ಯ ಹಾಗೂ ಜಾನಪದ ಗಾಯನ ಪ್ರದರ್ಶಿಸಿ ಸೈ ಎನಿಸಿಕೊಂಡಿದೆ.

ADVERTISEMENT

ಈಗಾಗಲೇ ಸಾಂಸ್ಕೃತಿಕ ವೇದಿಕೆಗಳಲ್ಲಿ ತಮ್ಮ ಸುಶ್ರಾವ್ಯ ಸಂಗೀತದ ಮೂಲಕ ದುಂಡಮ್ಮನ ಸಂಘ ಮನೆಮಾತಾಗಿದೆ. ಎಣ್ಣೆಶಾಸ್ತ್ರ, ತೊಟ್ಟಿಲುಶಾಸ್ತ್ರ, ಕಂಕಣ,ಬಳೆಶಾಸ್ತ್ರಗಳಲ್ಲೂ ಇವರ ಗಾಯನಕ್ಕೆ ಬೇಡಿಕೆ ಇದೆ.

‘ಎಣ್ಣೆ ಒತ್ತುವರು
ಚೆನ್ನಾಗಿ ಒತ್ತಮ್ಮ
ಚಿನ್ನದ ಕಡಗ ನಿಮ್ಮ ಕೈಲಿ
ಒಂದು ಬೆರಳಿಗೆ ಗಂಧ
ಮತ್ತೊಂದು ಬೆರಳಿಗೆ ಚಂದ್ರ...'

ಎಂದು ವಧು-ವರರ ಮನೆಯ ನೆರೆಹೊರೆ ಮತ್ತು ನೆಂಟರಿಷ್ಟರ ಕರೆಯೋಲೆ ಹಾಡಾಗಿಎಣ್ಣೆಶಾಸ್ತ್ರ ಗ್ರಾಮೀಣ ಭಾಗದಲ್ಲಿ ಇನ್ನೂ ಇದೆ.

ಮುಂದಿನ ಜೀವನ ತಂಪಾಗಿರಲಿ ಎಂದು ಹಾರೈಸುತ್ತಲೇ, ವಿವಾಹಿತರ ಬದುಕು ಹಸನಾಗಲಿ ಎನ್ನುತ್ತಾರೆ.

‘ಮದುವೆ ಮನೆಗೆ ಬಂದು ಅರಿಸಿನ ಮತ್ತುಅಕ್ಷತೆಯನ್ನು ಹೆಣ್ಣು ಇಲ್ಲವೆ ಗಂಡಿಗೆ ಹಾಕುವ ಪರಂಪರೆಯನ್ನು ಈ ಹಾಡುಧ್ವನಿಸುತ್ತದೆ. ಮದುವೆ ಸಂಭ್ರಮ ಮನಃಪಟಲದಲ್ಲಿ ದಾಖಲಾಗುವಂತೆ ಬಂಧು-ಬಾಂಧವರನ್ನು,ಒಡಹುಟ್ಟನ್ನು ನೆನಪಿಸುವ ಸುಂದರ ಕಲ್ಪನೆ ಈ ಗಾಯನದಲ್ಲಿ ಇದೆ’ ಎಂದು ಹೇಳುತ್ತಾರೆ ದುಂಡಮ್ಮಮತ್ತು ಮಹದೇವಮ್ಮ.

‘ನಮ್ಮ ತಂಡದಲ್ಲಿ ಹಾರ್ಮೋನಿಯಂ ಬಳಸಿ ಕತೆ ಮತ್ತು ಸಂಗೀತ ಕಾರ್ಯಕ್ರಮಆಯೋಜಿಸುತ್ತೇವೆ. ಬೆಟ್ಟದ ಜಾತ್ರೆ, ಊರಹಬ್ಬಗಳ ವೇದಿಕೆಯಲ್ಲಿ ಹಾಡುತ್ತೇವೆ. ನವಪೀಳಿಗೆಗೂ ಈ ಕಲೆಯನ್ನು ಕಲಿಸುವ ಉದ್ದೇಶ ನಮ್ಮದು. ಶಾಲಾ ಮಕ್ಕಳು ಮತ್ತು ಆಸಕ್ತ
ವಿದ್ಯಾರ್ಥಿ‌ಗಳಿಗೆ ಕಾಲೇಜು, ಶಾಲೆಗೆ ತೆರಳಿತರಬೇತಿ ನೀಡಿ ಪ್ರೋತ್ಸಾಹಿಸುವ ಉದ್ದೇಶ ಇದೆ ಎನ್ನುತ್ತಾರೆ’ ಸಂಘದ ಸದಸ್ಯೆಯರು.

ಸಮೂಹ ಗಾನದಲ್ಲಿ ತಂಡದ ಸದಸ್ಯರ ಕಂಚಿನ ಕಂಠ ಕೇಳುಗರ ಮನಸ್ಸನ್ನು ಸೆಳೆಯುತ್ತದೆ. ಅಮಾವಾಸ್ಯೆ ಮತ್ತು ಸಂಕ್ರಾಂತಿ ಹಬ್ಬಗಳಿಗೆ ಇವರ ಕಂಠದಿಂದ ಹೊಮ್ಮುವ ಸ್ವರಗಳನ್ನು ಕೇಳಲೇಬೇಕು.

'ತೇರು ಹೊಸ ತೇರು
ಚಿನ್ನದ ನೂಲಗ್ಗ
ಸಾವಿರಾರು ಮಂದಿ ಎಳೆದಾರು
ನಮ್ಮ ಮಾದಪ್ಪನ ತೇರು ಚಿನ್ನದ ತೇರು'

‘ಜಿಲ್ಲೆಯಾದ್ಯಂತ ಈ ಪದ ಮಾರ್ದನಿಸುತ್ತದೆ. ಈ ಪದ ಮಕ್ಕಳಿಗೆ ಜೋಗುಳದ ಲಾಲಿ ಪದವಾಗಿಯೂ ಗಮನಸೆಳೆದಿದೆ. ಗ್ರಾಮೀಣ ಭಾಗಗಳಲ್ಲಿ ಮಾದಪ್ಪನ ಪರಿಷೆಗೆ ಹೊರಟವರು ಈ ಗಾಯನವನ್ನುಕೇಳುತ್ತಲೇ ಹೆಜ್ಜೆ ಹಾಕುತ್ತಾರೆ. ತಾಳಕ್ಕೆ ತಕ್ಕಂತೆ ನರ್ತಿಸುತ್ತಾರೆ.ಜಾತ್ರೆ ಸಡಗರದಲ್ಲಿ ಕಾಣುವ ಜಾನಪದ ಕುಣಿತವನ್ನು ಕಂಡಾಗ ಈಗಲೂ ಹೊಸ ಹುರುಪಿನಿಂದ ನಲಿದಾಡಬೇಕುಎನಿಸುತ್ತಿದೆ' ಎಂದು ಸಂಭ್ರಮದಲ್ಲೇ ಹೇಳುತ್ತಾರೆ 60ರ ಹರೆಯದ ಶಿವನಂಜಮ್ಮ ಮತ್ತು ಮಹದೇವಮ್ಮ.

ಕಲೆ ಒಲಿದ ಬಗೆ

'ಚಿಕ್ಕವರಿದ್ದಾಗ ಸರಸ್ವತಿ ಒಲಿಯಲಿಲ್ಲ. ಆದರೆ, ಹಿರೀಕರು ಮತ್ತು ತಾಯಂದಿರು ಬಿಡುವಿನಸಮಯದಲ್ಲಿ ಏಕಾತಾನತೆ ಹೋಗಲಾಡಿಸಲು ಹಾಡು ಮತ್ತು ಕುಣಿತದಲ್ಲಿ ತೊಡಗುತ್ತಿದ್ದರು. ಇವರಅರಿವಿನ ಮೂಸೆಯಲ್ಲಿ ಅರಳಿದ ಸೋಬಾನೆ, ನಾಟಿಪದ, ಹೊಸ್ತಿಲು ಪೂಜೆಯ ಸಮಯಹಾಡುತ್ತಿದ್ದಾಗ ಅನುಕರಣೆ ಮಾಡುತ್ತ, ವೀಕ್ಷಿಸುತ್ತಲೇ ಕಲೆ ಒಲಿಯಿತು. ಹೊಲಗಳಲ್ಲಿದುಡಿಯುವಾಗ ದುಡಿಮೆಯ ಆಯಾಸ ನೀಗಲು, ಆಸರಿಕೆ-ಬೇಸರಿಕೆ ಕಳೆಯಲು ಇಂತಹ ಪದಗಳನ್ನುಒಲಿಸಿಕೊಳ್ಳಬೇಕಾಯಿತು’ ಎಂದು ಹೇಳುತ್ತಾರೆ ದುಂಡಮ್ಮ.

ಕಲಾಸಂಘದಲ್ಲಿ ಸಕ್ರಿಯಪಾತ್ರವಹಿಸುವ ಯಶೋದಾ, ಮಹದೇವಮ್ಮ, ಶಿವಮ್ಮ, ರಾಣಿ,ಶಿವನಂಜಮ್ಮ, ಸುಮಾ, ಚಿನ್ನಮ್ಮ, ಬೇಬಿ, ಆಶಾ, ಸವಿತಾ, ಬೋರಮ್ಮ ಮತ್ತು ಸಾಕಮ್ಮಒಟ್ಟಾಗಿ ಧ್ವನಿಗೂಡಿಸಿದಾಗ ಅವರ ಕಂಠಕ್ಕೆ ಮನಸೋಲದವರೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.