ADVERTISEMENT

ಮಹದೇಶ್ವರನಿಗೆ ಭಕ್ತಿಯ ಸುಮ: ಪಂಕ್ತಿಯೂಟದ ಘಮ

ಸುಮಂಗಲಿಯರಿಂದ ಜೋತಿರ್ಭೀಮೇಶ್ವರ ವ್ರತ: ಗಮನ ಸೆಳೆದ ಮಾದಪ್ಪ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 16:54 IST
Last Updated 4 ಆಗಸ್ಟ್ 2024, 16:54 IST
ಯಳಂದೂರು ತಾಲ್ಲೂಕಿನ ಕಂದಹಳ್ಳಿ ಮಹದೇಶ್ವರ ಭೀಮನ ಅಮಾವಾಸ್ಯೆ ಜಾತ್ರೆಯಲ್ಲಿ ಭಕ್ತರು ಮಾದೇಶನ ರಥ ಎಳೆದು ಸಂಭ್ರಮಿಸಿದರು
ಯಳಂದೂರು ತಾಲ್ಲೂಕಿನ ಕಂದಹಳ್ಳಿ ಮಹದೇಶ್ವರ ಭೀಮನ ಅಮಾವಾಸ್ಯೆ ಜಾತ್ರೆಯಲ್ಲಿ ಭಕ್ತರು ಮಾದೇಶನ ರಥ ಎಳೆದು ಸಂಭ್ರಮಿಸಿದರು   

ಯಳಂದೂರು: ತಾಲ್ಲೂಕಿನ ಕಂದಹಳ್ಳಿ ಮಾದಪ್ಪ ಜಾತ್ರೋತ್ಸವವು ಅಪಾರ ಭಕ್ತರ ಸಡಗರದ ನಡುವೆ ಭಾನುವಾರ ಜರುಗಿತು.

ಮುಂಜಾನೆಯಿಂದಲೇ ದೇಗುಲದಲ್ಲಿ ಮಹದೇಶ್ವರರ ಕೀರ್ತನೆ ಮೊಳಗಿತು, ಗುಡಿಯಲ್ಲಿ ಅಭಿಷೇಕ, ಹೋಮ– ಹವನ ಪೂರೈಸಿ ಮಂಗಳಾರತಿ ಮಾಡಲಾಯಿತು. ಶಿವಲಿಂಗಕ್ಕೆ ವಿಭೂತಿ, ಹೂಹಾರ, ಚಿನ್ನದ ಆಭರಣ ಹಾಕಿ ಸ್ತೋತ್ರ ಪಠಿಸಲಾಯಿತು. ಮಹಾ ಮಂಗಳಾರತಿ ನಂತರ ಭಕ್ತರಿಗೆ ದೇವಾಲಯ ತೆರೆದು ಪೂಜಾ ಕೈಂಕರ್ಯಕ್ಕೆ ಚಾಲನೆ ನೀಡಲಾಯಿತು.

ಆಷಾಢ ಬಹುಳ ಅಮಾವಾಸ್ಯೆ ಪುಷ್ಯ ನಕ್ಷತ್ರದಲ್ಲಿ ಇಲ್ಲಿ ಉತ್ಸವ ನಡೆಯುತ್ತದೆ. ಭಕ್ತರು ಗುಡಿಯ ಸುತ್ತ ತಳಿರು ತೋರಣಗಳಿಂದ ಅಲಂಕರಿಸಿದ್ದರು ಚಂಡು ಹೂ, ಸುಗಂಧಪುಷ್ಪ, ಮರಲೆ, ಜಾಜಿ ಹೂಗಳಿಂದ ದೇವರನ್ನು ಸಿಂಗರಿಸಿ, ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಲಾಯಿತು. ಮಂಗಳವಾದ್ಯದ ನಡುವೆ ಸ್ತ್ರೀಯರು ಮತ್ತು ಮಕ್ಕಳು ದೇವಳದ ಸುತ್ತಲೂ ಪ್ರದಕ್ಷಿಣಾ ಪಥದಲ್ಲಿ ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು. ಈ ವೇಳೆ ‘ಉಘೇ ಮಾದಪ್ಪ’ ಭಕ್ತಿ ನಮನ ಗುಡಿಯಲ್ಲಿ ಪ್ರತಿಧ್ವನಿಸಿತು.

ADVERTISEMENT

ಭಕ್ತರು ಗುಡಿ ಮುಂಭಾಗ ಊದಿನಕಡ್ಡಿ ಹಚ್ಚಿ, ಸುಗಂಧ ತುಂಬಿದರು. ಕರ್ಪೂರದ ಮಂದಾರತಿ ಹಾಗೂ ಧೂಪದ ಘಮಲು ಆಲಯ ತುಂಬಿತ್ತು. ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದವರು ಹೂ ಪ್ರಸಾದ ಸ್ವೀಕರಿಸಿ, ತೀರ್ಥ ಚಿಮುಕಿಸಿಕೊಂಡು ಪುನೀತರಾದರು.

ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಸಂಜೆ ತನಕ ಅನ್ನ ಪ್ರಸಾದ ಸ್ವೀಕರಿಸಿದರು. ಪಂಕ್ತಿ ಸೇವೆಯಲ್ಲಿ ನೂರಾರು ಕರ ಸೇವಕರು ಪಾಯಸ, ಕಡಲೆಹುಳಿ, ಅನ್ನಸಾರು ಬಡಿಸಿದರು. ಹತ್ತಾರು ಕೊಪ್ಪರಿಗೆಗಳಲ್ಲಿ ಸಿದ್ಧಗೊಂಡ ಭೂರಿ ಭೋಜನವನ್ನು ಸಿದ್ಧಪಡಿಸಲು ದೇವಳ ಆಡಳಿತ ಸಮಿತಿ ಮೂರು ತಿಂಗಳಿಂದ ಶ್ರಮಿಸಿದ್ದರು. ಅಕ್ಕಪಕ್ಕದ ಗ್ರಾಮಸ್ಥರು ಭಕ್ತಾಧಿಗಳ ಸೇವೆಗೆ ಸಹಕಾರ ನೀಡಿದರು ತಂಪು ತುಂಬಿದ ವಾತಾವರಣ ಭಕ್ತರ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿತು ಎಂದು ಮುಖಂಡರು ಹೇಳಿದರು.

ಆಟಿಕೆ ಸಾಮಾನು, ಪೂಜಾ ಸಾಮಗ್ರಿ, ಕಾಯಿಹಣ್ಣು ವ್ಯಾಪಾರ ತುರುಸಿನಿಂದ ನಡೆಯಿತು. ಕಡ್ಲೇಪುರಿ, ಬೆಂಡು ಬತ್ತಾಸುಗಳನ್ನು ಭಕ್ತರು ಕೊಂಡರು. ಯಳಂದೂರು ಪಟ್ಟಣದಿಂದ 2 ಕಿ.ಮೀ ಸಾಗುವ ರಾಷ್ಟ್ರೀಯ ಹೆದ್ದಾರಿ ಸುತ್ತಮುತ್ತ ಜನಜಂಗುಳಿ ಮತ್ತು ವಾಹನಗಳ ದಟ್ಟಣೆ ಕಂಡುಬಂದಿತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ದೇವರಿಗೆ ಫಲ ಪುಷ್ಪಗಳ ಅಲಂಕಾರ ಮಾಡಲಾಗಿತ್ತು.
ಪಂಕ್ತಿಯೂಟದಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹ
ದೇವರ ದರ್ಶನಕ್ಕೆ ಭಕ್ತಾಧಿಗಳ ದಟ್ಟಣೆ ಕಂಡುಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.