ADVERTISEMENT

ಚಾಮರಾಜನಗರ | ಧರ್ಮಸ್ಥಳ ಚಲೋ: ಜಿಲ್ಲೆಯಿಂದ ಸಾವಿರ ಮಂದಿ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ನಿರಂಜನ ಕುಮಾರ್

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:19 IST
Last Updated 30 ಆಗಸ್ಟ್ 2025, 5:19 IST
ಸೆ.1ರಂದು ಆಯೋಜಿಸಿರುವ ಧರ್ಮ ರಕ್ಷಣೆಗಾಗಿ ಧರ್ಮಸ್ಥಳ ಚಲೋ ಕಾರ್ಯಕ್ರಮದ ಪೂರ್ವಭಾವಿಯಾಗಿ ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪ್ರಮುಖ ಪದಾಧಿಕಾರಿಗಳ ಸಭೆ ನಡೆಯಿತು
ಸೆ.1ರಂದು ಆಯೋಜಿಸಿರುವ ಧರ್ಮ ರಕ್ಷಣೆಗಾಗಿ ಧರ್ಮಸ್ಥಳ ಚಲೋ ಕಾರ್ಯಕ್ರಮದ ಪೂರ್ವಭಾವಿಯಾಗಿ ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪ್ರಮುಖ ಪದಾಧಿಕಾರಿಗಳ ಸಭೆ ನಡೆಯಿತು   

ಚಾಮರಾಜನಗರ: ಹಿಂದೂ ಧರ್ಮ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಪಿತೂರಿ ಖಂಡಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸೆ.1ರಂದು ಆಯೋಜಿಸಿರುವ ಧರ್ಮ ರಕ್ಷಣೆಗಾಗಿ ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಮುಖಂಡರು ತೆರಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ ಕುಮಾರ್ ತಿಳಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪ್ರಮುಖ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹಿಂದೂಗಳ ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳದ ವಿರುದ್ದ ಪಿತೂರಿ, ಸಂಚು ನಡೆಯುತ್ತಿದೆ. ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ವಿರುದ್ದ ಸುಳ್ಳು ಸುದ್ದಿ ಹಬ್ಬಿಸಸಲಾಗುತ್ತಿದೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಪ್ರಮುಖರು ಭಾಗವಹಿಸಲಿದ್ದಾರೆ ಎಂದು ನಿರಂಜನ ಕುಮಾರ್ ತಿಳಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಬಹುಸಂಖ್ಯಾತ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಒಂದು ಸಮುದಾಯದ ತುಷ್ಟೀಕರಣ ನಡೆಯುತ್ತಿದ್ದು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಹಿಂದೂಗಳ ಹಬ್ಬಗಳಿಗೆ ಕಟ್ಟುಪಾಡು ವಿಧಿಸಲಾಗುತ್ತಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ ಎಂದು ದೂರಿದರು.

ADVERTISEMENT

ಬಡವರ ವಿರೋಧಿ ಹಾಗೂ ಹಿಂದೂಗಳ ವಿರೋಧಿಯಾಗಿರುವ ಕಾಂಗ್ರೆಸ್ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು ಹಿಂದೂಗಳನ್ನು ಜಾಗೃತಿಗೊಳಿಸಲು ಸಮಾವೇಶ ಮಹತ್ವ ಪಡೆದುಕೊಂಡಿದೆ. ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಿ, ದೇವಸ್ಥಾನಗಳ ಅಸ್ಮಿತೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌.ಮಹೇಶ್ ಮಾತನಾಡಿ, ಲೇಖಕಿ ಬಾನು ಮುಷ್ತಾಕ್ ಅವರನ್ನು ಸರ್ಕಾರ ನಾಡಹಬ್ಬ ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ತಪ್ಪಲ್ಲ, ಆದರೆ, ಹಿಂದೂ ಸಂಪ್ರದಾಯದಂತೆ ದಸರಾ ಉದ್ಘಾಟಿಸಲಿ, ಹಿಂದೂ ಧರ್ಮದ ಸಂಪ್ರದಾಯದಂತೆ ಉದ್ಘಾಟನಾ ಕಾರ್ಯಕ್ರಮಕ್ಕೆ ‌ಆಗಮಿಸಲಿ ಎಂದರು.

ಕನ್ನಡ ಹಾಗೂ ತಾಯಿ ಭುವನೇಶ್ವರಿಗೆ ಬಾನು ಮುಷ್ತಾಕ್ ಅಪಮಾನ ಮಾಡಿದ್ದು ಮೊದಲು ಕನ್ನಡಿಗರ ಕ್ಷಮೆ ಕೇಳಬೇಕು, ಬಳಿಕ ತಾಯಿ ಚಾಮುಂಡೇಶ್ವರಿಯನ್ನು ಸಂಪೂರ್ಣ ಒಪ್ಪಿಕೊಂಡು ದಸರಾ ಉದ್ಘಾಟನೆ ಮಾಡಬೇಕು ಎಂದರು.

ಕಾಂಗ್ರೆಸ್ ಸರ್ಕಾರ ನಾಡ ಹಬ್ಬ ದಸರಾದಲ್ಲೂ ವೋಟ್‌ ಬ್ಯಾಂಕ್ ರಾಜಕಾರಣ ಮಾಡುತ್ತಿದೆ, ಮುಸ್ಲಿಂ ಮಹಿಳೆಯನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿ ಹಿಂದೂಗಳ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ. ಸರ್ಕಾರ ನಿರ್ಧಾರ ಪುನರ್ ಪರಿಶೀಲಿಸಬೇಕು ಎಂದು ಮಹೇಶ್ ಒತ್ತಾಯಿಸಿದರು.

ಸಭೆಯಲ್ಲಿ ಧರ್ಮಸ್ಥಳ ಚಲೋ ವಿಭಾಗೀಯ ಸಂಚಾಲಕ ವಿ.ಫಣೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ವೃಷಬೇಂದ್ರಪ್ಪ, ಹೊನ್ನೂರು ಮಹದೇವಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್, ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ನೂರೊಂದುಶೆಟ್ಟಿ, ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಜಯಸುಂದರ್, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಲೆಯೂರು ಕಮಲಮ್ಮ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯ ಬಾಲರಾಜ್, ಮಂಡಲ ಅಧ್ಯಕ್ಷರಾದ ಶಿವರಾಜು, ಕೊಳ್ಳೇಗಾಲ ಮಹೇಶ್, ಹನೂರು ವೃಷಬೇಂದ್ರ ಇದ್ದರು.

‘ಬಹುಸಂಖ್ಯಾತ ಹಿಂದೂಗಳ ಮೇಲೆ ದಬ್ಬಾಳಿಕೆ’ ‘ದೇವಸ್ಥಾನಗಳ ಅಸ್ಮಿತೆ, ಹಿಂದೂಗಳ ನಂಬಿಕೆ ಮೇಲೆ ಪ್ರಹಾರ’ ‘ಭಾನುಮುಷ್ತಾಕ್ ಹಿಂದೂ ಸಂಪ್ರದಾಯದಂತೆ ದಸರಾ ಉದ್ಘಾಟಿಸಲಿ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.