ADVERTISEMENT

ಗುಂಡ್ಲುಪೇಟೆ | ‘ಧರ್ಮಸ್ಥಳಕ್ಕೆ ಕಳಂಕ ಪ್ರಯತ್ನ ಸ್ವಯಂ ವಿಫಲ’

ಧಾರ್ಮಿಕ ಸಭೆಯಲ್ಲಿ ಅರ್ಚಕ ಕೆ.ವಿ.ಗೋಪಾಲಕೃಷ್ಣ ಭಟ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 2:59 IST
Last Updated 15 ಡಿಸೆಂಬರ್ 2025, 2:59 IST
ಗುಂಡ್ಲಪೇಟೆ ಪಟ್ಟಣದ ಶ್ರೀ ಕೋಟೆ ವಿಜಯನಾರಾಯಣಸ್ವಾಮಿ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಧಾರ್ಮಿಕ ಸಭೆ ನಡೆಯಿತು.
ಗುಂಡ್ಲಪೇಟೆ ಪಟ್ಟಣದ ಶ್ರೀ ಕೋಟೆ ವಿಜಯನಾರಾಯಣಸ್ವಾಮಿ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಧಾರ್ಮಿಕ ಸಭೆ ನಡೆಯಿತು.   

ಗುಂಡ್ಲುಪೇಟೆ: ಧರ್ಮಸ್ಥಳವು ಧರ್ಮ ಕಾರ್ಯಗಳ ಮೂಲಕ ನಾಡಲ್ಲದೇ ದೇಶ, ವಿದೇಶದಲ್ಲೂ ಕೀರ್ತಿ ಗಳಿಸಿದೆ. ಶ್ರೀಕ್ಷೇತ್ರಕ್ಕೆ ಕಳಂಕ ತರುವ ಕೆಲಸ ತನ್ನಿಂದ ತಾನೇ ವಿಫಲವಾಯಿತು ಎಂದು ಹಿಮವದ್ ಗೋಪಾಲಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಕೆ.ವಿ.ಗೋಪಾಲಕೃಷ್ಣ ಭಟ್ ತಿಳಿಸಿದರು.

ಪಟ್ಟಣದ ಕೋಟೆ ವಿಜಯ ನಾರಾಯಣ ಸ್ವಾಮಿ ದೇವಾಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ   ಗ್ರಾಮಾಭಿವೃದ್ಧಿ ಸಂಸ್ಥೆಯ  ಬಿ.ಸಿ. ಟ್ರಸ್ಟ್  ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

 ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂಲಕ ಈಗ ರಾಜ್ಯಾದ್ಯಂತ ಶ್ರೀನಿವಾಸ ದೇವಾಲಯಗಳಲ್ಲಿ ಕಲ್ಯಾಣೋತ್ಸವ ನೆರವೇರುತ್ತಿದೆ. ಶ್ರೀನಿವಾಸನ ಕೃಪಾಕಟಾಕ್ಷದಿಂದ ಜನರಿಗೆ ಸಂತಸ ಉಂಟಾಗಲಿದೆ ಎಂದರು.

ADVERTISEMENT

ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಹೂರದಳ್ಳಿ ಪ್ರಸಾದ್ ಮಾತನಾಡಿ,  ತಾಲ್ಲೂಕಿನಲ್ಲಿ 13 ವರ್ಷಗಳಿಂದ ಧರ್ಮಸ್ಥಳ  ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ನಿರುದ್ಯೋಗಿ ಮಹಿಳೆಯರ ಸ್ವಉದ್ಯೋಗಕ್ಕೆ ಬ್ಯಾಂಕ್ ಮೂಲಕ ಕಿರು ಸಾಲ ಕಲ್ಪಿಸಿದ್ದರಿಂದ ಅವರು ಉದ್ಯೋಗ ನಡೆಸಿ, ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ , ಹಿಂದೂ ಸ್ಮಶಾನ ಅಭಿವೃದ್ಧಿ ,  ಪುರಾತನ ದೇವಾಲಯಗಳ  ಜೀರ್ಣೋದ್ಧಾರ, ಕರೋನ ಸಂದರ್ಭ ಜನರಿಗೆ ಆರ್ಥಿಕ, ವೈದ್ಯಕೀಯ ನೆರವನ್ನು ಸಂಸ್ಥೆ ನೀಡಿದೆ. ಕೆರೆ  ಅಭಿವೃದ್ಧಿ ಆಗಿದ್ದು,  ಜನ, ಜಾನುವಾರು, ಕಾಡು ಪ್ರಾಣಿಗಳು ಮತ್ತು ರೈತರಿಗೆ ಅನುಕೂಲ ಕಲ್ಪಿಸಿದೆ. ವಿದ್ಯಾರ್ಥಿಗಳಿಗೂ ಆರ್ಥಿಕ ನೆರವು ನೀಡುತ್ತಿದೆ ಎಂದರು.

ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಚಂದ್ರಶೇಖರ್ ಮಾತನಾಡಿದರು.  ಶ್ರೀನಿವಾಸ ಕಲ್ಯಾಣೋತ್ಸವ ಅದ್ದೂರಿಯಾಗಿ ನೆರವೇರಿತು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ನಾಗೇಶ್, ಪುರಸಭೆಯ ಮುಖ್ಯಾಧಿಕಾರಿ ಶರವಣ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಬಿ.ಕುಮಾರಸ್ವಾಮಿ, ಉದ್ಯಮಿ ದೊರೆಸ್ವಾಮಿ,  ಧರ್ಮಸ್ಥಳ  ಸಂಸ್ಥೆಯ ತಾಲ್ಲೂಕು ನಿರ್ದೇಶಕ ಮಂಜುನಾಥ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.