ADVERTISEMENT

ನೇರ ಮಾರುಕಟ್ಟೆಯತ್ತ ರೈತರ ಚಿತ್ತ

ಉತ್ಪಾದಕ, ಮಾರಾಟಗಾರ ಹಾಗೂ ಸಾವಯವ ಬೇಸಾಯದ ಕನಸು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:08 IST
Last Updated 23 ಡಿಸೆಂಬರ್ 2025, 6:08 IST
ಯಳಂದೂರು ತಾಲ್ಲೂಕಿನ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ರೈತ
ಯಳಂದೂರು ತಾಲ್ಲೂಕಿನ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ರೈತ   

ಯಳಂದೂರು: ಬೆಲೆ ಏರಿಳಿತ, ಹವಾಮಾನ ವೈಪರೀತ್ಯ, ಆರ್ಥಿಕ ಸಂಕಷ್ಟಗಳ ನಡುವೆಯೂ ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಚಟುವಟಿಕೆಗಳಿಂದ ವಿಮುಖವಾಗಿಲ್ಲ. ಸವಾಲುಗಳ ಮಧ್ಯೆಯೂ ಕೃಷಿಯಲ್ಲಿ ಅದೃಷ್ಟ ಪರೀಕ್ಷೆಗಿಳಿಯುತ್ತ ಬದುಕು ಕಟ್ಟಿಕೊಂಡಿದ್ದಾನೆ.

ವ್ಯವಸಾಯದಲ್ಲಿ ಏರುತ್ತಿರುವ ಖರ್ಚು ವೆಚ್ಚಗಳ ನಡುವೆಯೂ ಬಿತ್ತುವುದನ್ನು ಬಿಟ್ಟಿಲ್ಲ; ಬೆಳೆಯುವುದನ್ನು ನಿಲ್ಲಿಸಿಲ್ಲ. ಈ ನಡುವೆ ಆಧುನಿಕ ಕೃಷಿಕ ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿರ್ಧರಿಸುವ, ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಪ್ರಯತ್ನಗಳತ್ತಲೂ ಚಿತ್ತಹರಿಸಿ ಆದಾಯ ಹೆಚ್ಚಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ.

ಯಳಂದೂರು ತಾಲ್ಲೂಕಿನ 10,500 ಹೆಕ್ಟೇರ್ ಕೃಷಿ ಭೂಮಿಯಿದ್ದು, 15 ಸಾವಿರ ಬೇಸಾಯಗಾರರಿದ್ದಾರೆ. ಆಹಾರ ಪದಾರ್ಥ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯಲು ಒತ್ತು ನೀಡಿದ್ದಾರೆ. ಶೇ 20 ರೈತರು ಆರ್ಥಿಕ ಹಿಡುವಳಿಯಲ್ಲಿ ಲಾಭದತ್ತ ಮುಖಮಾಡಿದ್ದರೆ. ಉಳಿದವರು ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿದ್ದಾರೆ. ಭತ್ತ, ಮೆಕ್ಕೆಜೋಳ, ರಾಗಿ, ಕಬ್ಬು, ತೆಂಗು, ಅಡಿಕೆ ಮತ್ತು ಬಾಳೆ ತಾಲ್ಲೂಕಿನ ಪ್ರಧಾನ ಬೆಳೆಗಳಾಗಿವೆ. ಆಧುನಿಕ ಕೃಷಿ ಪದ್ಧತಿಗೆ ಶಿಕ್ಷಿತರು ತೊಡಗಿದ್ದು, ಹಲವು ಪ್ರಯೋಗಗಳಲ್ಲಿ ನಿರತರಾಗಿದ್ದಾರೆ.

ADVERTISEMENT

‘ಬೆಲೆ ಮತ್ತು ಬೇಡಿಕೆಗಳ ವ್ಯತ್ಯಯದಿಂದ ಆದಾಯದಲ್ಲೂ ಏರಿಳಿತವಾಗುತ್ತದೆ. ಕಡಿಮೆ ಭೂಮಿಯಲ್ಲಿ ಅಲ್ಪಾವಧಿ ಬೆಳೆಗಳನ್ನು ಬಿತ್ತನೆ ಮಾಡಿ ಲಾಭಗಳಿಸುವತ್ತ ಪ್ರಯೋಗ ನಡೆಸಿದ್ದೇವೆ. ಅವರೆ, ತೊಗರಿ, ಬಾಳೆ, ತೆಂಗು, ಮಾವು, ಪರಂಗಿ ಬೆಳೆದು, ಹೊಲಗಳ ಸಮೀಪದ ರಸ್ತೆಯಲ್ಲಿ, ಪೇಟೆ, ಪಟ್ಟಣದ ಸಂತೆಗಳಿಗೆ ಪೂರೈಸಿ ಉತ್ತಮ ಧಾರಣೆ ಪಡೆಯುತ್ತಿದ್ದೇವೆ. ಇದರಿಂದ ಸಣ್ಣ ರೈತರಿಗೆ ಮೂರರಿಂದ ಆರು ತಿಂಗಳಲ್ಲಿ ಆದಾಯ ಕೈಸೇರುತ್ತದೆ. ಮನೆಯ ವಾರ್ತೆ ನಿರ್ವಹಣೆ ಸುಲಭವಾಗುತ್ತದೆ’ ಎನ್ನುತ್ತಾರೆ ದಾಸನಹುಂಡಿ ಗ್ರಾಮದ ಬೆಳೆಗಾರ ದಿವಾಕರ್.

‘ಪ್ರತಿ ವರ್ಷ ಅನ್ನದಾತರ ವರಮಾನ ಹೆಚ್ಚಿಸಲು ಬಿತ್ತನೆ ಬೀಜ, ಟ್ರ್ಯಾಕ್ಟರ್, ಪವರ್ ಟಿಲ್ಲರ್, ಪೈಪ್, ಗೊಬ್ಬರ, ಸ್ಪ್ರೇಯರ್ ಮತ್ತಿತರ ಯಂತ್ರಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ. ಇದರಿಂದ ಬೆಳೆಗಾರರಿಗೆ ಶ್ರಮಿಕರ ಕೊರತೆ ನೀಗಿದೆ. ಕಡಿಮೆ ಖರ್ಚಿನಲ್ಲಿ ಗರಿಷ್ಠ ಕೆಲಸಗಳು ನಡೆಯುತ್ತಿವೆ. ಇದರಿಂದ ಸಣ್ಣ ರೈತರು ಕಿರು ಯಂತ್ರಗಳನ್ನು ಚಲಾಯಿಸಿಕೊಂಡು ಸಾಗುವಳಿ ಮಾಡಬಹುದು, ಅನುತ್ಪಾದಕ ವೆಚ್ಚ ಕಡಿತಗೊಳಿಸಬಹುದು’ ಎನ್ನುತ್ತಾರೆ ಸಹಾಯಧನದಡಿ ಪವರ್ ಟಿಲ್ಲರ್ ಪಡೆದ ರೈತ ಕೊಮಾನಪುರ ನಾಗರಾಜು,

ಪಿಎಂ ಕುಸುಮ್ ಸೋಲಾರ್: ‘ಕೊಳವೆ/ತೆರೆದ ಬಾವಿಗಳಿಗೆ ಸೋಲಾರ್ ಪಂಪ್‌ಸೆಟ್‌ ಅಳವಡಿಸಿಕೊಳ್ಳಲು ಸಹಾಯಧನ ನೀಡಲಾಗುತ್ತದೆ. ರಾಜ್ಯ ಶೇ 50 ಹಾಗೂ ಕೇಂದ್ರ ಶೇ 30 ಹಾಗೂ ರೈತರ ವಂತಿಗೆ ಶೇ 20 ಬಳಸಿಕೊಂಡು ಆಯ್ದ ಕಂಪನಿಗಳು ಸೋಲಾರ್ ಅಳವಡಿಕೆಗೆ ಅವಕಾಶ ಕಲ್ಪಿಸಿವೆ. ನವೀಕರಿಸಬಹುದಾದ ಇಂಧನದಡಿ ರೈತರು ನೀರಾವರಿ ವ್ಯವಸ್ಥೆ ಮಾಡಿಕೊಳ್ಳಬಹುದು. ಇದರಿಂದ ವಿದ್ಯುತ್ ಮೇಲಿನ ಅವಲಂಬನೆ ತಗ್ಗಿಸಬಹುದು’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ಮಾಹಿತಿ ನೀಡಿದರು.

‘ಪ್ರತಿದಿನ 50 ಕೆಜಿಯಷ್ಟು ಅವರೆಕಾಯಿ ಮಾರಾಟ ಮಾಡಿ ₹1500ರಿಂದ ₹2,000 ಗಳಿಸುತ್ತೇನೆ. ಬೆಲೆ ನಿರ್ಧಾರದಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ಗುಣಮಟ್ಟದ ಪದಾರ್ಥವನ್ನು ಗ್ರಾಹಕರಿಗೆ ನೇರವಾಗಿ ಪೂರೈಸುತ್ತಿದ್ದೇನೆ’ ಎನ್ನುತ್ತಾರೆ ರೈತ ಮೆಲ್ಲಹಳ್ಳಿ ಮರಿಸ್ವಾಮಿ.

ಇಂದು ರೈತ ದಿನ’ 

ಪ್ರತಿವರ್ಷ ಡಿ.23ರಂದು ರೈತದಿನ ಆಚರಿಸಲಾಗುತ್ತದೆ. ಈ ವರ್ಷ ‘ಕೃಷಿಕರ ಕಲ್ಯಾಣ ಹಾಗೂ ಆಹಾರ ಭದ್ರತೆ’ಗೆ ಬಗ್ಗೆ ಭಾರತದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಬರ ನಿರೋಧಕ ತಳಿಗಳ ಪರಿಚಯ ಸಿರಿಧಾನ್ಯಗಳ ಸಂರಕ್ಷಣೆ ದೇಶದ ಅಭಿವೃದ್ಧಿಗೆ ಮಹಿಳಾ ಕೃಷಿಕರಗೆ ಉತ್ತೇಜನ ಆಧುನಿಕ ಕೃಷಿಯಲ್ಲಿ ವಿಜ್ಞಾನ ತಂತ್ರಜ್ಞಾನ ಬಳಸಿ ಗರಿಷ್ಠ ಉತ್ಪಾದನೆಗೆ ನೆರವು ನೀಡುವುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.