ಚಾಮರಾಜನಗರ: ಅಂಗವಿಕಲರಿಗೆ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ಮೂಲಕ ಸಮಾಜದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವು ನೀಡಬೇಕು ಎಂದು ಸಂಸದ ಸುನಿಲ್ ಬೋಸ್ ಸಲಹೆ ನೀಡಿದರು.
ನಗರದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ನಗರಸಭೆ, ತಾಲ್ಲೂಕು ಪಂಚಾಯಿತಿ ಹಾಗೂ ಕೃತಕ ಅಂಗಾಂಗಗಳ ತಯಾರಿಕಾ ಸಂಸ್ಥೆ ಸಹಯೋಗದಲ್ಲಿ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಸಾಧನ- ಸಲಕರಣೆ ವಿತರಿಸಲು ಪೂರಕವಾಗಿ ಆಯೋಜಿಸಿದ್ದ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಕೃತಕ ಅಂಗಾಂಗ ತಯಾರಿಕಾ ಸಂಸ್ಥೆಯಾದ ಆಲಿಮ್ಕೊ ನೇತೃತ್ವದಲ್ಲಿ ಜಿಲ್ಲೆಯ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಸಾಧನ-ಸಲಕರಣೆಗಳನ್ನು ವಿತರಿಸಲು ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಂಗವಿಕಲರನ್ನು ಸಮಾಜದಲ್ಲಿ ಕಡೆಗಣಿಸಬಾರದು. ಅವರೊಳಗಿರುವ ವಿಶಿಷ್ಟವಾದ ಶಕ್ತಿಯಿದ್ದು ಅನುಕಂಪ ತೋರಿಸುವ ಬದಲು ಅವಕಾಶಗಳನ್ನು ನೀಡಬೇಕು, ಅಂಗವಿಕಲರು ದೈಹಿಕವಾಗಿ ಸವಾಲುಗಳನ್ನು ಎದುರಿಸುತ್ತಿದ್ದರೂ ಮಾನಸಿಕವಾಗಿ ಹೆಚ್ಚು ಸದೃಢರಾಗಿದ್ದಾರೆ. ಅಂಗವಿಕಲತೆ ಶಾಪವಲ್ಲ, ಸಮಾಜದಲ್ಲಿ ಅಂಗವಿಕಲರ ಬಗ್ಗೆ ಇರುವ ಭಾವನೆ ಬದಲಾಗಬೇಕು, ಮೌಢ್ಯವೂ ದೂರವಾಗಬೇಕು, ಸಮಾಜದ ಎಲ್ಲರೂ ಅಂಗವಿಕಲರೊಂದಿಗೆ ಮುಕ್ತವಾಗಿ ಬೆರೆಯಬೇಕು, ಜೀವನ ನಡೆಸಲು ಆತ್ಮಸ್ಥೈರ್ಯ ತುಂಬಬೇಕು ಎಂದರು.
ಅಂಗವಿಕಲರು ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಅಸಮಾನ್ಯ ಸಾಧನೆ ತೋರುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಸಾಮಾನ್ಯರಿಗೆ ಸ್ಪರ್ಧೆಯೊಡ್ಡುತ್ತಿದ್ದಾರೆ. ಇತರರಂತೆ ಅವರೂ ಗೌರವಯುತವಾಗಿ ಜೀವನ ನಡೆಸಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡಿಕೊಡಬೇಕು. ಮಾನಸಿಕವಾಗಿ ಶಕ್ತಿ ತುಂಬಬೇಕು ಎಂದು ಸಲಹೆ ನೀಡಿದರು.
ಚಾಮರಾಜನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಸಾಧನ-ಸಲಕರಣೆಗಾಗಿ 250 ಮಂದಿ ಅಂಗವಿಕಲರು ಹೆಸರು ನೋಂದಾಯಿಸಿಕೊಂಡಿದ್ದು, ಇತರ ತಾಲ್ಲೂಕುಗಳಲ್ಲೂ ಶಿಬಿರಗಳು ನಡೆಯುತ್ತಿದ್ದು ಅಂಗವಿಕಲರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಿ.ಸಿ.ಶೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುರೇಶ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಂಜುನಾಥ್, ಅಂಗವಿಕಲರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಂಸದ ಸುನಿಲ್ ಬೋಸ್ ಶಿಬಿರದಲ್ಲಿ ನೋಂದಣಿ ಪ್ರಕ್ರಿಯೆ ವೀಕ್ಷಿಸಿದರು. ಕಾರ್ಯಕ್ರಮದ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಚಾಮರಾಜನಗರ ತಾಲ್ಲೂಕು: 250 ಮಂದಿ ನೋಂದಣಿ ನೋಂದಾಯಿಸಿಕೊಂಡವರಿಗೆ ಸಾಧನ ಸಲಕರಣೆಗಳ ವಿತರಣೆ ಎಲ್ಲ ತಾಲ್ಲೂಕುಗಳಲ್ಲಿ ತಪಾಸಣಾ ಶಿಬಿರ: ಸದುಪಯೋಗಪಡಿಸಿಕೊಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.