ADVERTISEMENT

ಪ್ರಾಣೇಶ್ ಹಾಸ್ಯ ರಸಾಯನ: ನಗೆಗಡಲಲ್ಲಿ ತೇಲಿದ ಜನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 9:35 IST
Last Updated 3 ಅಕ್ಟೋಬರ್ 2019, 9:35 IST
ಗಂಗಾವತಿ ಪ್ರಾಣೇಶ್‌ ಅವರು ನಗೆ ಹಬ್ಬ ನಡೆಸಿಕೊಟ್ಟರು
ಗಂಗಾವತಿ ಪ್ರಾಣೇಶ್‌ ಅವರು ನಗೆ ಹಬ್ಬ ನಡೆಸಿಕೊಟ್ಟರು   

ಚಾಮರಾಜನಗರ: 'ಹಿಂದೆ ಕಾಡಲ್ಲಿ ಡಕಾಯಿತರು ಚಾಕು ತೆಗೆದು ಬೆದರಿಸುತ್ತಿದ್ದರು. ಈಗ ಜನರ ಕಾಡಲ್ಲಿರುವ 'ಡಕಾಯಿತರು' ಮೊಬೈಲ್ ತೆಗೆದು ಸೆಲ್ಫಿಕಾಗಿ ಬೆದರಿಸುತ್ತಾರೆ'

'ಎಣ್ಣೆ ನೀರು ಹಾಕಿಕೊಂಡರೆ ವರ್ಷಕ್ಕೊಮ್ಮೆ ಯುಗಾದಿ, ಎಣ್ಣೆಗೆ ನೀರು ಹಾಕಿಕೊಂಡರೆ ದಿನವೂ ಯುಗಾದಿ'

'ಕಾಲಿಗೆ ಮೆಟ್ಟು ಇಲ್ಲದಿದ್ದರೂ ನಡೆಯುತ್ತದೆ, ಮೊಬೈಲ್ ಗೆ ನೆಟ್ ಇಲ್ಲದಿದ್ದರೆ ಏನೂ ನಡೆಯುವುದಿಲ್ಲ'

ADVERTISEMENT

-ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಅವರು ಪುಂಖಾನುಪುಂಕವಾಗಿ ಇಂತಹ ಸಾಲುಗಳನ್ನು ಹೇಳುತ್ತಿದ್ದರೆ, ಸಾವಿರಾರು ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಯನ್ನೇ ಹರಿಸಿದರು.

ಜಿಲ್ಲಾ ದಸರಾ ಅಂಗವಾಗಿ ಹಮ್ಮಿಕೊಂಡಿದ್ದ ನಗೆ ಹಬ್ಬದಲ್ಲಿ ಪ್ರಾಣೇಶ್ ಅವರ ಮಾತುಗಳು ಕೇವಲ ಹಾಸ್ಯಕ್ಕೆ ಸೀಮಿತವಾಗದೆ, ಜೀವನದ ಮೌಲ್ಯಗಳನ್ನು ಪ್ರತಿಪಾದಿಸಿದವು. ಮಾತೃ ಭಾಷಣದ ಶಿಕ್ಷಣದ ಅವಶ್ಯಕತೆ ಹಾಗೂ ಸಾಹಿತ್ಯವನ್ನು ಓದುವುದು ಮುಖ್ಯ ಎಂಬುವುದನ್ನು ಒತ್ತಿ ಹೇಳಿದವು.

ಸಮಾಜದಲ್ಲಿ ದಿನನಿತ್ಯ ನಡೆಯುವ ಘಟನೆಗಳನ್ನು ವಿಡಂಬನೆಯ ಮೂಲಕ ಪ್ರಸ್ತುತ ಪಡಿಸಿ ಜನರನ್ನು ನಗೆ ಗಡಲಲ್ಲಿ ತೇಲುವಂತೆ ಮಾಡಿದರು.

ಇಂಗ್ಲಿಷ್ ಹಾಗೂ ಕನ್ನಡದ ಭಾಷಾ ಶ್ರೀಮಂತಿಕೆಯನ್ನು ತುಲನೆ ಮಾಡಿದ ಅವರು ಸತ್ತರು ಎಂಬುದನ್ನು ಇಂಗ್ಲಿಷ್‌ನಲ್ಲಿ ಕೇವಲ ಐದು ಪದಗಳಿವೆ (ಡೈಡ್, ಡೆಡ್, ನೊ ಮೋರ್, ಸ್ಯಾಡ್ ಡಿಮೈಸ್, ಕಿಲ್ಡ್). ಆದರೆ ಕನ್ನಡದಲ್ಲಿ ಹಲವಾರು ಪದಗಳಿವೆ. ಜನರ ಸಾಮಾಜಿಕ ಸ್ಥಾನಮಾನಕ್ಕೆ ಅನುಗುಣವಾಗಿ ಬೇರೆ ಬೇರೆ ರೀತಿಯಲ್ಲಿ (ಲಿಂಗೈಕ್ಯ, ಶಿವಾಧೀನ, ನಿಧನ, ಮೃತಪಟ್ಟರು, ನೆಗೆದು ಬಿದ್ದ, ಟಿಕೆಟ್ ತಗೊಂಡ ಇತ್ಯಾದಿ) ಹೇಳಬಹದು ಎಂಬುದನ್ನು ವಿವರಿಸಿದರು.

ಇಂಗ್ಲಿಷ್ ನಲ್ಲಿ ಸರಿಯಾಗಿ ಬಯ್ಯುವುದಕ್ಕೂ ಆಗುವುದಿಲ್ಲ‌ ಅದೇ ಕನ್ನಡದಲ್ಲಿ ಎಷ್ಟೊಂದು ಪದಗಳಿವೆ‌. ಪೊಲೀಸರ ಬಳಿ ಬೈಗುಳಗಳ ಡಿಕ್ಷನರಿಯೇ ಇದೆ ಎಂದಾಗ ಇಡೀ ಸಭೆ ಗೊಳ್ಳೆಂದು ನಕ್ಕಿತು. ಅದಕ್ಕೆ ಜಿಲ್ಲಾಧಿಕಾರಿಹಾಗೂ ಪೋಲಿಸ್ ಇನ್ ಸ್ಪೆಕ್ಟರ್ ಅವರು ಜನರೊಂದಿಗೆ ಮಾತನಾಡುವಾಗ ಬಳಸುವ ಭಾಷೆಯನ್ನು ಉದಾಹರಣೆಯನ್ನಾಗಿ ನೀಡಿದರು.

ಟಿವಿ ಧಾರಾವಾಹಿಗಳನ್ನು ವೀಕ್ಷಿಸುವ ಮಹಿಳೆಯರ ಕಾಲೆಳೆಯಲು ಅವರು ಮರೆಯಲಿಲ್ಲ. ಜಡ ಜೀವನ ನಡೆಸುವ ಪುರುಷರನ್ನು ತಮಾಷೆ‌ ಮಾಡದೆ ಅವರು ಬಿಡಲಿಲ್ಲ. 'ಮಹಿಳೆಯರು ಸಕ್ರಿಯರಾಗಿರುತ್ತಾರೆ, ಅದಕ್ಕಾಗಿ ಅವರಿಗೆ ಅನಾರೋಗ್ಯ ಬರುವುದಿಲ್ಲ. ಪುರುಷರು ನಿಷ್ಕ್ರಿಯರಾಗಿರುವುದರಿಂದ ಕಾಯಿಲೆ ಬೇಗ ಕಾಣಿಸಿಕೊಳ್ಳುತ್ತದೆ' ಎಂದರು.

'ಆರೋಗ್ಯಕ್ಕೆ ನಗು ಅತ್ಯಂತ ಮುಖ್ಯ. ಮೊಬೈಲ್, ವಾಟ್ಸ್ ಆ್ಯಪ್ ನಿಂದ ದೂರ ಇರಿ‌ ಮಕ್ಕಳಿಗೆ ಮೊಬೈಲ್ ಕೊಡಬೇಡಿ. ಸಂಜೆ ಹೊತ್ತು ಎಲ್ಲರೂ ಮೊಬೈಲ್ ಗಳಿಂದ ದೂರು ಇರಿ‌‌ ಪುಸ್ತಕವನ್ನು ಕೈ ಹಿಡಿಯಿರಿ‌' ಎಂದು ಸಲಹೆ ನೀಡುತ್ತಾ, ತಮ್ಮ ಮಾತಿನ ಮ್ಯಾರಥಾನ್ ಗೆ ಪೂರ್ಣ ವಿರಾಮ ಹಾಕಿದರು ಪ್ರಾಣೇಶ್.

ಕಾರ್ಯಕ್ರಮ ಆರಂಭ ಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, 'ರಾಜ್ಯದಾದ್ಯಂತ ಕಾರ್ಯಕ್ರಮ ನೀಡಿದ್ದೆ. ಚಾಮರಾಜನಗರಕ್ಕೆ ಬಂದಿರಲಿಲ್ಲ. ಆ ಕೊರಗು ಇಂದು ನೀಗಿದೆ' ಎಂದು ಹೇಳಿದರು‌.

ಪ್ರಾಣೇಶ್ ತಂಡದ ಇಬ್ಬರು ಸದಸ್ಯರಾದ ನರಸಿಂಹ ಜೋಷಿ ಹಾಗೂ ಬಸವರಾಜ ಮಹಾಮನಿ ಅವರೂ ಕಿಕ್ಕಿರಿದು ಸೇರಿದ್ದ ಜನಸ್ತೋಮವನ್ನು ತಮ್ಮ ಮಾತುಗಳಿಂದ ನಗಿಸಲು ಯತ್ನಿಸಿದರು.

ಪ್ರಾಂಶುಪಾಲ ಹಾಗೂ ವಿದ್ಯಾರ್ಥಿಗಳ ನಡುವೆ ನಡೆಯುವಹಾಸ್ಯ ಸಂಭಾಷಣೆಯ ಸನ್ನಿವೇಶವನ್ನು ಪ್ರಸ್ತಾಪಿಸುತ್ತಾ
ಮೋದಿ, ರಜನಿಕಾಂತ್, ತೆಲುಗು ನಟ ಪ್ರಭಾಸ್ ಅವರ ಧ್ವನಿಗಳನ್ನು ಅನುಕರಿಸಿ ಹಾಗೂ ಕನ್ನಡದ ಹೆಸರಾಂತ ಚಲನಚಿತ್ರ ಹಾಡುಗಳನ್ನು ಹಾಡಿದ ನರಸಿಂಹ ಜೋಷಿ ಅವರು ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.