ADVERTISEMENT

ಚಾಮರಾಜನಗರ |ಮಳೆ ಕೊರತೆ; ಬಾಡುತ್ತಿದೆ 20 ಸಾವಿರ ಹೆಕ್ಟೇರ್‌ ಬೆಳೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 15:48 IST
Last Updated 1 ಜುಲೈ 2023, 15:48 IST
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯಿತು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಗಣೇಶ್‌ ಪ್ರಸಾದ್, ವಿಧಾನಪರಿಷತ್‌ ಸದಸ್ಯ ಡಿ.ತಿಮ್ಮಯ್ಯ ಇದ್ದರು
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯಿತು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಗಣೇಶ್‌ ಪ್ರಸಾದ್, ವಿಧಾನಪರಿಷತ್‌ ಸದಸ್ಯ ಡಿ.ತಿಮ್ಮಯ್ಯ ಇದ್ದರು   

ಚಾಮರಾಜನಗರ: ‘ಜಿಲ್ಲೆಯಲ್ಲಿ ಈವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ, ಅಗತ್ಯವಿದ್ದಾಗ ಬಾರದಿರುವುದರಿಂದ ಮುಂಗಾರು ಪೂರ್ವ ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ 20 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳು ಬಾಡಲು ಆರಂಭಿಸಿವೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಧುಸೂದನ್‌ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌, ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರ ಗಮನಕ್ಕೆ ತಂದರು. 

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಳೆ ಬೆಳೆ ಸ್ಥಿತಿಗತಿಗಳ ಬಗ್ಗೆ ಸಚಿವ ವೆಂಕಟೇಶ್‌ ಅವರು ಮಾಹಿತಿ ಕೇಳಿದ ಸಂದರ್ಭದಲ್ಲಿ ಮಧುಸೂದನ್‌ ವಿವರಣೆ ನೀಡಿದರು.  

‘ಈವರೆಗೆ ಜಿಲ್ಲೆಯಲ್ಲಿ 26.2 ಸೆಂ.ಮೀ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 5ರಷ್ಟು ಹೆಚ್ಚು ಮಳೆಯಾಗಿದೆ. ಆದರೆ, ಬೆಳೆಗಳಿಗೆ ಬೇಕಾದಾಗ ಮಳೆ ಬಂದಿಲ್ಲ. ಮುಂಗಾರು ಪೂರ್ವ ಅವಧಿಯಲ್ಲಿ 54 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. 42 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜೂನ್‌ ತಿಂಗಳಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗಿಲ್ಲ. ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರಾಥಮಿಕ ಅಂದಾಜಿನ ಪ್ರಕಾರ 20 ಸಾವಿರ ಹೆಕ್ಟೇರ್‌ನಷ್ಟು ಅಂದರೆ, ಬಿತ್ತನೆಯಾದ ಶೇ 40ರಿಂದ ಶೇ 50ರಷ್ಟು ಪ್ರದೇಶದಲ್ಲಿ ಮಳೆ ಕೊರತೆ ತೀವ್ರವಾಗಿದ್ದು, ಬೆಳೆ ನಷ್ಟವಾಗುವ ಸಾಧ್ಯತೆ ಇದೆ’ ಎಂದು ಮಾಹಿತಿ ನೀಡಿದರು. 

ADVERTISEMENT

ಸಚಿವ ಕೆ.ವೆಂಕಟೇಶ್‌ ಮಾತನಾಡಿ, ‘ಮಳೆ ಕೊರತೆ, ಬೆಳೆ ನಷ್ಟ ಸಾಧ್ಯತೆಯ ಬಗ್ಗೆ ನಿಖರವಾದ ಮಾಹಿತಿ ಕೊಡಿ. ಮಳೆ ಬಂದರೆ ಮತ್ತು ಬಾರದೇ ಇದ್ದರೆ ಎದುರಾಗುವ ಪರಿಸ್ಥಿತಿಗಳನ್ನು ಎದುರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮಳೆ ಬಂದರೆ ಬಿತ್ತನೆ ಬೀಜ, ರಸಗೊಬ್ಬರದ ಅವಶ್ಯಕತೆ ಇರುತ್ತದೆ. ಅವುಗಳನ್ನು ಸಾಕಷ್ಟು ದಾಸ್ತಾನು ಮಾಡಿಟ್ಟುಕೊಳ್ಳಬೇಕು’ ಎಂದು ಸೂಚಿಸಿದರು. 

ಬೆಳೆ ವಿಮೆಗೆ 6000 ನೋಂದಣಿ: ಶಾಸಕ ಸಿ.ಪುಟ್ಟರಂಗಶೆಟ್ಟಿ ಬೆಳೆವಿಮೆ ಬಗ್ಗೆ ಪ್ರಸ್ತಾಪಿಸಿದರು. ‘ಬೆಳೆ ನಷ್ಟವಾಗುವ ಸಾಧ್ಯತೆ ಇರುವುದರಿಂದ ರೈತರು ಬೆಳೆ ವಿಮೆ ಮಾಡಿಸಿಕೊಂಡರೆ ಅನುಕೂಲವಾಗುತ್ತದೆ. ಎಷ್ಟು ಪ್ರಗತಿಯಾಗಿದೆ’ ಎಂದು ಪ್ರಶ್ನಿಸಿದರು. 

ಮಧುಸೂದನ್‌ ಪ್ರತಿಕ್ರಿಯಿಸಿ, ‘ವಿವಿಧ ಬೆಳೆಗಳಿಗೆ ವಿಮೆ ಕಂತು ಕಟ್ಟಲು ಜುಲೈ 31ರವರೆಗೆ ಅವಕಾಶ ಇದೆ. ಸೂರ್ಯಕಾಂತಿ ಉದ್ದು, ಅಲಸಂದೆ, ಈರುಳ್ಳಿ ಸೇರಿದಂತೆ ಕೆಲವು ಬೆಳೆಗಳಿಗೆ ವಿಮೆ ಕಟ್ಟಲು ಇಂದು (ಶನಿವಾರ) ಕೊನೆಯ ದಿನ. ಉಳಿದವುಗಳಿಗೆ ಅವಕಾಶ ಇದೆ. ಈವರೆಗೆ 6000 ರೈತರು ನೋಂದಣಿ ಮಾಡಿಕೊಂಡಿದ್ದಾರೆ’ ಎಂದರು. 

ಪ್ರಚಾರ ಮಾಡಿ: ಸಚಿವ ವೆಂಕಟೇಶ್‌ ಮಾತನಾಡಿ, ‘ಇಂತಹ ಯೋಜನೆ ಇದೆ ಎಂದು ಜನರಿಗೆ ಗೊತ್ತಾಗಬೇಕು. ಹಾಗಾಗಿ, ಬೆಳೆ ವಿಮೆ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು. ಗ್ರಾಮೀಣ ಭಾಗಗಳಲ್ಲೂ ಧ್ವನಿ ವರ್ಧಕ,  ಕರಪತ್ರಗಳನ್ನು ಹಂಚಿ ಜನರಿಗೆ ವಿಷಯ ತಿಳಿಸಬೇಕು’ ಎಂದು ಸೂಚಿಸಿದರು. 

ಕುಡಿಯುವ ನೀರಿಗೆ ಗಮನಹರಿಸಿ: ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ‘ಮಳೆ ಕೊರತೆ ಉಂಟಾದರೆ, ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಕಂಡು ಬರದಂತೆ ನೋಡಿಕೊಳ್ಳಬೇಕು. ಅದಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಈಗಲೇ ಮಾಡಿಕೊಳ್ಳಬೇಕು. 

ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದೆಂಬ ಬಗ್ಗೆ ಪೂರ್ವ ಪರಿಶೀಲನೆ ಮಾಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಈಗ ಇರುವ ಹಣವನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಕೆ ಮಾಡಲು ಸಿದ್ಧವಾಗಿಟ್ಟುಕೊಳ್ಳಬೇಕು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕು’ ಎಂದು ಜಿ.ಪಂ.ಸಿಇಒ, ಪ್ರಭಾರ ಜಿಲ್ಲಾಧಿಕಾರಿ ಪೂವಿತಾ ಎಸ್‌. ಅವರಿಗೆ ಸೂಚಿಸಿದರು. 

ಪೂವಿತಾ ಮಾತನಾಡಿ, ‘ಈವರೆಗೆ ನಾವು ಎಲ್ಲೂ ಟ್ಯಾಂಕರ್‌ ನೀರು ಪೂರೈಸುವ ಸ್ಥಿತಿ ಬಂದಿಲ್ಲ. ಮಳೆ ಕಡಿಮೆಯಾದರೆ, ಹನೂರು ತಾಲ್ಲೂಕಿನ 15 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ನಿರೀಕ್ಷೆ ಇದೆ. ಅಲ್ಲಿಗೆ ನೀರು ಪೂರೈಸಲು ಖಾಸಗಿಯವರ ಕೊಳವೆಬಾವಿಗಳನ್ನು ಗುರುತಿಸಲಾಗಿದೆ’ ಎಂದರು. 

ಗುಂಡ್ಲುಪೇಟೆ ಶಾಸಕ ಎಚ್‌.ಎಂ.ಗಣೇಶ್‌ ಪ್ರಸಾದ್‌, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್‌ ಕುಮಾರ್, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ದೀಪ್‌ ಜೆ.ಕಾಂಟ್ರ್ಯಾಕ್ಟರ್, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು

ಬಡವರನ್ನು ಹಿಂಡುತ್ತಿರುವ ವೈದ್ಯರು!

ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್‌.ಕೃಷ್ಣಮೂರ್ತಿ ‘ಸರ್ಕಾರಿ ಆಸ್ಪತ್ರೆಗಳ ವೈದ್ಯರು ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ. ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಕೆಲವು ವೈದ್ಯರು ಪ್ರತಿ ದಿನ ಬೆಂಗಳೂರಿನಿಂದ ಕೊಳ್ಳೇಗಾಲಕ್ಕೆ ಬರುತ್ತಿದ್ದಾರೆ’ ಎಂದು ಸಚಿವರ ಗಮನಕ್ಕೆ ತಂದರು.  ‘ವೈದ್ಯರು ಬಡವರನ್ನು ಹಿಂಡುತ್ತಿದ್ದಾರೆ.

ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಔಷಧಗಳನ್ನು ಹೊರಗಡೆಯಿಂದ ನಿರ್ದಿಷ್ಟ ಮೆಡಿಕಲ್‌ನಿಂದ ಖರೀದಿಸುವಂತೆ ಸೂಚಿಸುತ್ತಾರೆ. ಸಣ್ಣ ಪುಟ್ಟ ಪರೀಕ್ಷೆಗಳನ್ನೂ ಖಾಸಗಿ ಪ್ರಯೋಗಾಲಯಗಳಲ್ಲಿ ಮಾಡುವಂತೆ ಸೂಚಿಸುತ್ತಿದ್ದಾರೆ’ ಎಂದು ದೂರಿದರು. 

ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರು ‘ರಕ್ತೊದತ್ತಡ ಮಧುಮೇಹದ ಮಾತ್ರೆಗಳನ್ನು ಹೊರಗಡೆಯಿಂದ ಖರೀದಿಸುವಂತೆ ವೈದ್ಯರು ಹೇಳುತ್ತಿದ್ದಾರೆ ಎಂದು ಜನರು ದೂರುತ್ತಿದ್ದಾರೆ’ ಎಂದು ಹೇಳಿದರು.  ಡಿಎಚ್‌ಒ ಡಾ.ವಿಶ್ವೇಶ್ವರಯ್ಯ ಪ್ರತಿಕ್ರಿಯಿಸಿ ‘ವೈದ್ಯರು ಕೇಂದ್ರ ಸ್ಥಾನದಲ್ಲೇ ಇರಬೇಕು ಎಂದು ಸೂಚಿಸಲಾಗಿದೆ. ಔಷಧ ಪರೀಕ್ಷೆಗಳನ್ನು ಹೊರಗಡೆಗೆ ಬರೆದುಕೊಡುವಂತಿಲ್ಲ’ ಎಂದು ಸಮಜಾಯಿಷಿ ನೀಡಿದರು. 

‘ಜನರನ್ನು ಅಲೆದಾಡಿಸದಿರಿ’

ಸಚಿವ ಕೆ.ವೆಂಕಟೇಶ್ ಅವರು ವಿವಿಧ ಇಲಾಖೆಗಳ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.  ಸಭೆಯ ಕೊನೆಗೆ ಮಾತನಾಡಿದ ಅವರು ‘ಅಧಿಕಾರಿಗಳು ಸ್ಪಂದನಾಶೀಲರಾಗಿ ಕಾರ್ಯನಿರ್ವಹಿಸಬೇಕು. ಜನರನ್ನು ಕಚೇರಿಗೆ ಅಲೆದಾಡಿಸದೆ ಅವರ ಕೆಲಸಗಳನ್ನು ಮಾಡಿಕೊಡಬೇಕು. ಚೆನ್ನಾಗಿಕೆಲಸ ಮಾಡಿದರೆ ಇಲ್ಲಿ ಇರುತ್ತೀರಿ. ಇಲ್ಲದಿದ್ದರೆ ಇಲ್ಲ. ಉತ್ತಮವಾಗಿ ಕೆಲಸ ಮಾಡುವವರೊಂದಿಗೆ ಸರ್ಕಾರ ಸದಾ ಇರಲಿದೆ. ಸರ್ಕಾರ ಇರುವುದೇ ಜನರ ಕೆಲಸಕ್ಕಾಗಿ. ಸಾರ್ವಜನಿಕರ ಒಳಿತಿಗೆ ಕಾರ್ಯನಿರ್ವಹಿಸಿದರೆ ಅಧಿಕಾರಿಗಳಿಗೂ ಶಾಸಕರಿಗೂ ಮತ್ತು ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ’ ಎಂದು ತಿಳಿಸಿದರು.

ಡಯಾಲಿಸಿಸ್‌ ಕೇಂದ್ರಕ್ಕೆ ಅನುದಾನ

ಹನೂರು ತಾಲ್ಲೂಕಿನ ಆರೋಗ್ಯ ಸೇವೆಯ ಸ್ಥಿತಿಗತಿಗಳ ಬಗ್ಗೆ ಶಾಸಕ ಎಂ.ಆರ್.ಮಂಜುನಾಥ್‌ ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಪ್ರಸ್ತಾಪಿಸಿದರು. ಮಹದೇಶ್ವರ ಬೆಟ್ಟದ ಕಾಡಿನ ಒಳಗಡೆ ಹಾಗೂ ಅಂಚಿನಲ್ಲಿರುವ ಗ್ರಾಮಗಳ ಜನರಿಗೆ ಆರೋಗ್ಯ ಸೇವೆ ಸಿಗದಿರುವ ಬಗ್ಗೆ ಮರಿತಿಬ್ಬೇಗೌಡ ಅಸಮಾಧಾನ ವ್ಯಕ್ತಪಡಿಸಿದರು.   

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಮಾತನಾಡಿ ‘ಹನೂರು ತಾಲ್ಲೂಕು ಕೇಂದ್ರದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವ ಬಗ್ಗೆ ಪ್ರಸ್ತಾವ ಇದೆ. ನಿರ್ಧಾರ ಇನ್ನೂ ಆಗಿಲ್ಲ. ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಶೀಘ್ರ ಆರಂಭವಾಗಲಿದೆ.

ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಿಗೆ ಅರಣ್ಯ ಇಲಾಖೆ ಜನರ ಸಹಕಾರದಲ್ಲಿ ಆರಂಭಿಸಿದ್ದ ಜನವನ ಸೇತುವೆ ಸಾರಿಗೆ ಸ್ಥಗಿತಗೊಂಡಿದೆ. ಈ ಭಾಗದ ಎರಡು ಸಂಚಾರಿ ಆರೋಗ್ಯ ಘಟಕವೂ ಸ್ಥಗಿತಗೊಂಡಿವೆ. ಅವುಗಳನ್ನು ಪುನಃ ಆರಂಭಿಸಿದರೆ ಅನುಕೂಲವಾಗಲಿದೆ. ಹನೂರಿನಲ್ಲಿ ಡಯಾಲಿಸಿಸ್ ಕೇಂದ್ರ ಇಲ್ಲ. ಅದಕ್ಕೆ ತುಂಬಾ ಬೇಡಿಕೆ ಇದೆ. ಸರ್ಕಾರ ಮಟ್ಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ’ ಎಂದರು.  ಮರಿತಿಬ್ಬೇಗೌಡ ಮಾತನಾಡಿ ‘ಕಾಡಂಚಿನ ಭಾಗಗಳಲ್ಲಿ ಜನರಿಗೆ ಆರೋಗ್ಯ ಸೇವೆ ನೀಡಲು ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಯವರು ಈ ಬಗ್ಗೆ ಗಮನ ಹರಿಸಬೇಕು. ಹನೂರಿನಲ್ಲಿ ಡಯಾಲಿಸಿಸ್‌ ಕೇಂದ್ರ ಸ್ಥಾಪನೆಗೆ ನನ್ನ ಕ್ಷೇತ್ರದ ಅನುದಾನದಲ್ಲಿ ಹಣ ನೀಡುತ್ತೇನೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.