ಚಾಮರಾಜನಗರ: ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ಅವರು ಬಿಜೆಪಿ ಸೇರ್ಪಡೆಗೆ ಖಚಿತವಾಗುತ್ತಿದ್ದಂತೆಯೇ ಜಿಲ್ಲಾ ಬಿಜೆಪಿ ಮುಖಂಡರಲ್ಲಿ ಅದರಲ್ಲೂ ವಿಶೇಷವಾಗಿ ಕೊಳ್ಳೇಗಾಲ ಕ್ಷೇತ್ರದ ಮುಖಂಡರಲ್ಲಿ ತಳಮಳ ಸೃಷ್ಟಿಯಾಗಿದೆ.
ಮಹೇಶ್ ಅವರು ಬಿಜೆಪಿಗೆ ಸೇರುವುದು ಖಚಿತವಾಗಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯದ ವರಿಷ್ಠರು ಜಿಲ್ಲಾ ಬಿಜೆಪಿ ಘಟಕದ ಮುಖಂಡರಿಗೆ ಈಗಾಗಲೇ ಸಂದೇಶ ರವಾನಿಸಿದ್ದಾರೆ. ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಈಗಾಗಲೇ ಮಹೇಶ್ ಅವರೊಂದಿಗೆ ಸುದೀರ್ಘ ಮಾತುಕತೆಯನ್ನೂ ನಡೆಸಿದ್ದಾರೆ.
ಇದುವರೆಗೆ ಎನ್.ಮಹೇಶ್ ಅವರ ಸೇರ್ಪಡೆ ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು, ಮುಖಂಡರು ಈಗ ಈ ಬಗ್ಗೆ ಮಾತನಾಡುತ್ತಿಲ್ಲ. ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವವರಿಗೆ ಯಾವಾಗಲೂ ಸ್ವಾಗತ ಎಂದು ಹೇಳುತ್ತಿದ್ದಾರೆ.
ವಿಧಾನಪರಿಷತ್ ಚುನಾವಣೆಗೆ ಇನ್ನು ಎರಡು ವರ್ಷಗಳಷ್ಟೇ ಇದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಸಮೀಪದಲ್ಲೇ ಇದೆ. ಯಾವುದೇ ಷರತ್ತುಗಳನ್ನು ಒಡ್ಡದೇ ಬಿಜೆಪಿ ಸೇರುತ್ತಿರುವುದಾಗಿ ಮಹೇಶ್ ಹೇಳುತ್ತಿದ್ದಾರೆ. ಆದರೆ, ಇದನ್ನು ಒಪ್ಪುವ ಸ್ಥಿತಿಯಲ್ಲಿ ಬಿಜೆಪಿ ಮುಖಂಡರು ಇಲ್ಲ.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ತಮ್ಮ ಬೆಂಬಲಿಗರಿಗೆ ಮಹೇಶ್ ಅವರು ಟಿಕೆಟ್ ಕೇಳಿದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲದಿಂದ ಮತ್ತೆ ಸ್ಪರ್ಧಿಸಲು ಪ್ರಯತ್ನ ಪಟ್ಟರೆ... ಎಂಬ ಅನುಮಾನಗಳು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಮೂಡಿದೆ.
ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಕೊಳ್ಳೇಗಾಲದಲ್ಲಿ ಮಹೇಶ್ ಅವರು ಬೆಂಬಲಿಗರ ಸಭೆ ನಡೆಸಿದ್ದಾಗ, ಸಚಿವ ಸ್ಥಾನ ಕೇಳುವಂತೆ ಹಾಗೂ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಅನುಯಾಯಿಗಳಿಗೆ ಟಿಕೆಟ್ ನೀಡುವಂತೆ ಒತ್ತಡ ಹಾಕಬೇಕು ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದರು.
ಹೊಂದಾಣಿಕೆ ಸಾಧ್ಯವೇ?: ರಾಜಕೀಯಕ್ಕೆ ಸೇರಿದಾಗಿನಿಂದ ಬಿಜೆಪಿ ಹಾಗೂ ಅದರ ಸಿದ್ಧಾಂತವನ್ನು ಟೀಕಿಸುತ್ತಲೇ ಬಂದಿರುವ ಎನ್.ಮಹೇಶ್ ಅವರು ಬಿಜೆಪಿಗೆ ಹೊಂದಿಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆ ಸ್ಥಳೀಯ ಮುಖಂಡರನ್ನು ಕಾಡುತ್ತಿದೆ.
ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿರುವ ಎನ್.ಮಹೇಶ್ ಅವರು ಯಡಿಯೂರಪ್ಪ ಹಾಗೂ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಕೊಳ್ಳೇಗಾಲದ ನಗರಸಭೆಯಲ್ಲಿ ಅವರ ಬೆಂಬಲಿಗರು ಬಿಜೆಪಿ ಸದಸ್ಯರೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರವನ್ನೂ ಹಿಡಿದಿದ್ದಾರೆ. ಈ ಎರಡು ವರ್ಷಗಳ ಅವಧಿಯಲ್ಲಿ ಬಿಜೆಪಿಯ ಒಳ ಹೊರಗನ್ನು ಚೆನ್ನಾಗಿ ಅರಿತಿದ್ದಾರೆ. ಮಾಸಿಕವಾಗಿ ಅವರು ಕಮಲ ಪಾಳಯಕ್ಕೆ ಯಾವಾಗಲೋ ಸೇರಿದ್ದಾರೆ. ಹಾಗಾಗಿ ಅದರೊಂದಿಗೆ ಹೊಂದಾಣಿಕೆ ಕಷ್ಟವಾಗದು ಎಂಬುದು ಅವರ ಬೆಂಬಲಿಗರ ಅಭಿಪ್ರಾಯ.
ಪರ ವಿರೋಧ ಚರ್ಚೆ, ವಿಡಿಯೊ ವೈರಲ್
ಎನ್.ಮಹೇಶ್ ಅವರು ಬಿಜೆಪಿ ಸೇರ್ಪಡೆ ದೃಢಪಡುತ್ತಲೇ, ಈ ಬಗ್ಗೆ ವಾಟ್ಸ್‌ಆ್ಯಪ್, ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗುತ್ತಾರೆ ಎಂಬ ಖುಷಿಯಲ್ಲಿರುವ ಅವರ ಬೆಂಬಲಿಗರು ಬಿಜೆಪಿಗೆ ಸೇರುವುದನ್ನು ಬೆಂಬಲಿಸಿದ್ದಾರೆ.
ಬಿಎಸ್‌ಪಿ, ಕಾಂಗ್ರೆಸ್‌ನವರು ಹಾಗೂ ಅವರ ವಿರೋಧಿ ಬಣ ಮಹೇಶ್ ನಿರ್ಧಾರವನ್ನು ಟೀಕಿಸಿದ್ದು, ‘ಅವರೊಬ್ಬ ಅವಕಾಶವಾದಿ’ ಜರಿದಿದ್ದಾರೆ.
ಇದರ ನಡುವೆಯೇ,ಎನ್.ಮಹೇಶ್ ಅವರು ಚರ್ಚ್ ಒಂದರ ಎದುರು ನಿಂತು ‘ಜೇಸಸ್ ನನಗೆ ಸಹಾಯ ಮಾಡು’ ಎಂದು ಅಳುತ್ತಾ ಜೋರಾಗಿ ಅರಚುವ ವಿಡಿಯೊ ತುಣುಕು ವೈರಲ್ ಆಗಿದೆ.
ಇದು 2018ರ ಚುನಾವಣೆಗೂ ಮೊದಲು ಪ್ರಚಾರದ ಸಂದರ್ಭದಲ್ಲಿ ಕೊಳ್ಳೇಗಾಲದ ಸಂತ ಫ್ರಾನ್ಸಿಸ್ ಅಸಿಸ್ಸಿ ಚರ್ಚ್‌ನಲ್ಲಿ ಕ್ರಿಶ್ಚಿಯನ್ನರ ಸಭೆಯಲ್ಲಿ ನಡೆದ ಘಟನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.