ADVERTISEMENT

ಚಾಮರಾಜನಗರ: ಅನುದಾನ ಬಂದರಷ್ಟೇ ಅದ್ದೂರಿ ರಜತ ಸಂಭ್ರಮ

14ರಂದು ಮಹೋತ್ಸವಕ್ಕೆ ಸಚಿವ ಸೋಮಣ್ಣ ಸೂಚನೆ, ಜಿಲ್ಲಾಡಳಿತದಿಂದ ವಿವಿಧ ಕಾರ್ಯಕ್ರಮಗಳಿಗೆ ಸಿದ್ಧತೆ

ಸೂರ್ಯನಾರಾಯಣ ವಿ
Published 31 ಜುಲೈ 2022, 5:01 IST
Last Updated 31 ಜುಲೈ 2022, 5:01 IST
ಜಿಲ್ಲಾಡಳಿತ ಭವನದ ಆವರಣದಲ್ಲಿರುವ ರಂಗಮಂದಿರದ ಒಳಾಂಗಣ ಕಾಮಗಾರಿ ಭರದಿಂದ ಸಾಗಿದೆ
ಜಿಲ್ಲಾಡಳಿತ ಭವನದ ಆವರಣದಲ್ಲಿರುವ ರಂಗಮಂದಿರದ ಒಳಾಂಗಣ ಕಾಮಗಾರಿ ಭರದಿಂದ ಸಾಗಿದೆ   

ಚಾಮರಾಜನಗರ: ಅವಿಭಜಿತ ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾಗಿ 25 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಜಿಲ್ಲಾಡಳಿತ ರಜತ ಮಹೋತ್ಸವ ಆಚರಿಸಲು ಸಿದ್ಧತೆ ನಡೆಸಿದೆ. ಆದರೆ, ಅದ್ದೂರಿ ಆಚರಣೆಗೆ ಅನುದಾನದ ಕೊರತೆ ಕಾಡುತ್ತಿದೆ.

ಇದೇ 14ರಂದು ವಿಜೃಂಭಣೆಯಿಂದ ರಜತಮಹೋತ್ಸವ ಸಮಾರಂಭ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಅಗತ್ಯ ಸಿದ್ಧತೆಗಳನ್ನು ನಡೆಸುವಂತೆ ಸಲಹೆ ನೀಡಿದ್ದಾರೆ. ಇದಕ್ಕೆ ಬೇಕಾದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ್ದರೂ, ಇನ್ನೂ ಅಧಿಕೃತ ಆದೇಶ ಹೊರಬಿದ್ದಿಲ್ಲ.

ರಜತ ಸಂಭ್ರಮದ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಡುವ ಯೋಚನೆ ಜಿಲ್ಲಾಡಳಿತಕ್ಕೆ ಇದೆ. ಎಂಟು ವರ್ಷಕ್ಕೂ ಹೆಚ್ಚು ಸಮಯದಿಂದ ಪೂರ್ಣಗೊಳ್ಳದ, ಜಿಲ್ಲಾಡಳಿತ ಭವನದ ಆವರಣದಲ್ಲಿರುವ ರಂಗಮಂದಿರ ಉದ್ಘಾಟನೆ, ಕೊಳ್ಳೇಗಾಲದ ತಾಯಿ ಮತ್ತು ಮಗುವಿನ ಆಸ್ಪತ್ರೆ ಉದ್ಘಾಟನೆ ಸೇರಿದಂತೆ ಇತರೆ ಪೂರ್ಣಗೊಂಡ ಯೋಜನೆಗಳನ್ನು ಜಿಲ್ಲೆಗೆ ಅರ್ಪಿಸುವ ಯೋಜನೆಯನ್ನು ಹಾಕಿಕೊಂಡಿದೆ.

ADVERTISEMENT

ವೇದಿಕೆ ಕಾರ್ಯಕ್ರಮ: ರಜತ ಮಹೋತ್ಸವ ಅಂಗವಾಗಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸದ್ಯ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಹಮ್ಮಿಕೊಳ್ಳಲು ಅಧಿಕಾರಿಗಳು ಯೋಚಿಸಿದ್ದಾರೆ. ಪ್ರಗತಿಯಲ್ಲಿರುವ ರಂಗಮಂದಿರ ಕಾಮಗಾರಿ ಮುಕ್ತಾಯಗೊಂಡರೆ ಅಲ್ಲೇ ಕಾರ್ಯಕ್ರಮ ನಡೆಸುವ ಆಯ್ಕೆಯನ್ನೂ ಇಟ್ಟುಕೊಂಡಿದ್ದಾರೆ.

‘ಯಾವುದೇ ಜಿಲ್ಲೆಯ ಇತಿಹಾಸದಲ್ಲಿ 25 ವರ್ಷಗಳು ಆಗುವುದು ದೊಡ್ಡ ಮೈಲಿಗಲ್ಲು. ಹೀಗಿರುವಾಗ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಬೇಕು’ ಎಂಬುದು ಸಾರ್ವಜನಿಕರ ಒತ್ತಾಯ.

‘ಜಿಲ್ಲಾ ಕ್ರೀಡಾಂಗಣ ಅಥವಾ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಕಾರ್ಯಕ್ರಮ ನಡೆಸಬೇಕಾದರೆ ಖರ್ಚು ಹೆಚ್ಚಾಗುತ್ತದೆ. ಜಿಲ್ಲಾಡಳಿತದ ಬಳಿ ಹಣ ಇಲ್ಲ. ಸರ್ಕಾರ ಅನುದಾನ ಕೊಟ್ಟರಷ್ಟೇ ಮಾಡಬಹುದು’ ಎಂದು ಹೇಳುತ್ತಾರೆ ಉನ್ನತ ಅಧಿಕಾರಿಗಳು.

ಮಹೋತ್ಸವ ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣ, ಹೋರಾಟಗಾರರು, ಕಲಾವಿದರನ್ನು ಸನ್ಮಾನಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚಿಸಿದ್ದಾರೆ.

ಸಿದ್ಧತೆಗೆ ಸೂಚನೆ: ಈ ಮಧ್ಯೆ, ಲಭ್ಯವಿರುವ ಅನುದಾನದಲ್ಲಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಮಾಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಸಭೆ ನಡೆಸಿ ವಿವಿಧ ಸಲಹೆ, ಮಾರ್ಗದರ್ಶನಗಳನ್ನು ನೀಡಿದ್ದಾರೆ. ಅದರಂತೆ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಹೇಳಿದರು.

ಕಾಮಗಾರಿಗೆ ವೇಗ: ಈ ಮಧ್ಯೆ, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಂಗಮಂದಿರ ಕಾಮಗಾರಿಗೆ ವೇಗ ಸಿಕ್ಕಿದೆ. ಹತ್ತಾರು ಕಾರ್ಮಿಕರು ಹಲವು ದಿನಗಳಿಂದ ಕೆಲಸ ಮಾಡುತ್ತಿದ್ದಾರೆ. ಒಳಾಂಗಣದಲ್ಲಿ ಆಸನ ಅಳವಡಿಕೆ ಸೇರಿದಂತೆ ಹಲವು ಕೆಲಸಗಳು ಬಾಕಿ ಇದ್ದು, ಇನ್ನು 12 ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆಯೇ ಎಂಬುದು ದೊಡ್ಡ ಪ್ರಶ್ನೆ.

ನಡೆಯಲಿದೆಯೇ ಜಲಪಾತೋತ್ಸವ?

ಮೈದುಂಬಿ ಭೋರ್ಗರೆಯುತ್ತಿರುವ ಶಿವನಸಮುದ್ರದ ಭರಚುಕ್ಕಿಯಲ್ಲಿ ಜಲಪಾತೋತ್ಸವ ಆಯೋಜನೆ ಮಾಡುವ ಸಲಹೆಯನ್ನೂ ಸಚಿವ ಸೋಮಣ್ಣ ಅವರು ಇತ್ತೀಚಿನ ಸಭೆಯಲ್ಲಿ ಜಿಲ್ಲಾಡಳಿತಕ್ಕೆ ನೀಡಿದ್ದಾರೆ.

ಹಿಂದೆ ಎಚ್‌.ಎಸ್‌.ಮಹದೇವ‍‍ ಪ್ರಸಾದ್‌ ಅವರು ಉಸ್ತುವಾರಿ ಸಚಿವರಾಗಿದ್ದಾಗ ಜಲಪಾತೋತ್ಸವ ನಡೆದಿದ್ದು, ಸಾವಿರಾರು ಪ್ರವಾಸಿಗರನ್ನೂ ಈ ಕಾರ್ಯಕ್ರಮ ಆಕರ್ಷಿಸಿತ್ತು.

ರಜತ ಮಹೋತ್ಸವ ಸಂಭ್ರಮದಲ್ಲಿ ಜಲಪಾತೋತ್ಸವ ಆಯೋಜಿಸಿದರೆ, ಜಿಲ್ಲೆಯ ಜನರು ಪ್ರವಾಸಿಗರನ್ನು ಆಕರ್ಷಿಸುವುದು ಖಚಿತ.

ಇದಕ್ಕೂ ಲಕ್ಷಾಂತರ ರೂಪಾಯಿ ಅಗತ್ಯವಿದ್ದು, ಜಿಲ್ಲಾಡಳಿತ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.

––

ರಜತ ಮಹೋತ್ಸವ ಆಚರಣೆ ಸಂಬಂಧ ಸಿದ್ಧತೆ ಕೈಗೊಳ್ಳುವಂತೆ ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದೆ. ಜಲಪಾತೋತ್ಸವಕ್ಕೆ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ
ಚಾರುಲತಾ ಸೋಮಲ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.