ADVERTISEMENT

ಚಾಮರಾಜನಗರ ಜಿಲ್ಲಾಧಿಕಾರಿಯಿಂದ ಹಿಟ್ಲರ್‌ ಸಂಸ್ಕೃತಿ ಪ್ರದರ್ಶನ: ಮರಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 16:28 IST
Last Updated 2 ಸೆಪ್ಟೆಂಬರ್ 2021, 16:28 IST
ಪಿ.ಮರಿಸ್ವಾಮಿ
ಪಿ.ಮರಿಸ್ವಾಮಿ   

ಚಾಮರಾಜನಗರ: ‘ಲಸಿಕೆ ಪಡೆಯದವರಿಗೆ ಪಡಿತರ ಇಲ್ಲ, ಪಿಂಚಣಿ ಇಲ್ಲ ಎಂದು ಹೇಳುವ ಮೂಲಕ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ, ಹಿಟ್ಲರ್‌ ಸಂಸ್ಕೃತಿ ಪ್ರದರ್ಶಿಸಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಗುರುವಾರ ದೂರಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸದೆ, ಸರ್ಕಾರದಿಂದ ಆದೇಶ ಬಾರದೇ ಏಕಾಏಕಿ ಜಿಲ್ಲಾಧಿಕಾರಿ ನೀಡಿರುವ ಹೇಳಿಕ ಅಸಂವಿಧಾನಿಕ. ಆಹಾರ ಮೂಲಭೂತ ಹಕ್ಕು. ಅದನ್ನು ಕಸಿಯುವುದಕ್ಕೆ ಯಾರಿಗೂ ಹಕ್ಕಿಲ್ಲ. ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸವನ್ನು ಜಿಲ್ಲಾಧಿಕಾರಿ ಮಾಡಿದ್ದಾರೆ. ಸಚಿವರೊಂದಿಗೆ ಚರ್ಚಿಸಿದೆ ಡಿಸಿ ಇಂತಹ ಹೇಳಿಕೆ ನೀಡಿರುವುದು ಸರ್ಕಾರ ನಿಷ್ಕ್ರಿಯವಾಗಿರುವುದನ್ನು ತೋರಿಸುತ್ತದೆ’ ಎಂದು ಕಿಡಿಕಾರಿದರು.

‘ಇದರ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ನಿರ್ಧರಿಸಿದ್ದೆವು. ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿರುವುದರಿಂದ ಸುದ್ದಿಗೋಷ್ಠಿ ನಡೆಸುತ್ತಿದ್ದೇವೆ. ಲಸಿಕೆಯನ್ನು ಎಲ್ಲರಿಗೂ ನೀಡಬೇಕು. ಜನರ ಮನವೊಲಿಸಿ, ಜಾಗೃತಿ ಮೂಡಿಸಿ ಲಸಿಕೆ ಕೊಡಬೇಕು. ಪಕ್ಷವು ಸಹಾಯ ಹಸ್ತ ಕಾರ್ಯಕ್ರಮದಡಿಯಲ್ಲಿ ಪ್ರತಿ ಹಳ್ಳಿಗೂ ಭೇಟಿ ನೀಡಿ ಕೋವಿಡ್‌ ಹಾಗೂ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ’ ಎಂದರು.

ADVERTISEMENT

‘ಬಿಜೆಪಿ ಸರ್ಕಾರವು ಜಿಲ್ಲೆಯನ್ನು ಕಡೆಗಣಿಸಿದೆ. ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆ ಸಿದ್ದರಾಮಯ್ಯ ಸರ್ಕಾರದ ಅವಧಿಯದ್ದು. ಅಲ್ಲದೇ ಬಿಜೆಪಿ ಸರ್ಕಾರವು ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದರಿಂದ ಜನ ಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದೆ. ಈ ಸರ್ಕಾರಗಳಿಗೆ ಬಡವರ ಬಗ್ಗೆ ಕಾಳಜಿ ಇಲ್ಲ’ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಮುಖಂಡರಾದ ಸಯ್ಯದ್ ರಫಿ, ಸೋಮನಾಯಕ, ಮಾಧ್ಯಮ ಕಾರ್ಯದರ್ಶಿ ಅರುಣಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.