ADVERTISEMENT

ರಾಷ್ಟ್ರಪತಿ ಭೇಟಿ: ಸಿದ್ಧತೆಗೆ ಸಚಿವರ ಸೂಚನೆ

ಬಿಳಿಗಿರಿರಂಗನಬೆಟ್ಟ, ಯಡಬೆ‌ಟ್ಟದ ಹೊಸ ಆಸ್ಪತ್ರೆಗೆ ಸೋಮಶೇಖರ್ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 3:27 IST
Last Updated 1 ಅಕ್ಟೋಬರ್ 2021, 3:27 IST
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಗುರುವಾರ ಶಾಸಕ ಎನ್‌.ಮಹೇಶ್‌ ಹಾಗೂ ಅಧಿಕಾರಿಗಳೊಂದಿಗೆ ಯಳಂದೂರು ತಾಲ್ಲೂಕಿನ ವಡಗೆರೆಗೆ ಭೇಟಿ ನೀಡಿ ರಾಷ್ಟ್ರಪತಿ ಅವರ ಭೇಟಿಗಾಗಿ ನಿರ್ಮಿಸಲಾಗುತ್ತಿರುವ ಹೆಲಿಪ್ಯಾಡ್‌ನ ಕೆಲಸವನ್ನು ಪರಿಶೀಲಿಸಿದರು. ಬಿಜೆಪಿ ಮುಖಂಡ ಜಿ.ಎನ್‌.ನಂಜುಂಡಸ್ವಾಮಿ, ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಇತರರು ಇದ್ದರು
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಗುರುವಾರ ಶಾಸಕ ಎನ್‌.ಮಹೇಶ್‌ ಹಾಗೂ ಅಧಿಕಾರಿಗಳೊಂದಿಗೆ ಯಳಂದೂರು ತಾಲ್ಲೂಕಿನ ವಡಗೆರೆಗೆ ಭೇಟಿ ನೀಡಿ ರಾಷ್ಟ್ರಪತಿ ಅವರ ಭೇಟಿಗಾಗಿ ನಿರ್ಮಿಸಲಾಗುತ್ತಿರುವ ಹೆಲಿಪ್ಯಾಡ್‌ನ ಕೆಲಸವನ್ನು ಪರಿಶೀಲಿಸಿದರು. ಬಿಜೆಪಿ ಮುಖಂಡ ಜಿ.ಎನ್‌.ನಂಜುಂಡಸ್ವಾಮಿ, ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಇತರರು ಇದ್ದರು   

ಯಳಂದೂರು/ಚಾಮರಾಜನಗರ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರುಅಕ್ಟೋಬರ್ 7ರಂದು ಬಿಳಿಗಿರಿರಂಗನಬೆಟ್ಟ ಹಾಗೂ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಗುರುವಾರ ಎರಡೂ ಕಡೆಗಳಿಗೆ ಭೇಟಿ ನೀಡಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.

ಯಳಂದೂರು ತಾಲ್ಲೂಕಿನ ವಡ್ಡಗೆರೆ ಬಳಿ ನಿರ್ಮಾಣ ಮಾಡಲಾಗುತ್ತಿರುವ ಹೆಲಿಪ್ಯಾಡ್ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಪರಿಶೀಲನೆ ನಡೆಸಿದರು. ಅಲ್ಲಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳಿ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದಲ್ಲಿ ಕೈಗೊಂಡಿರುವ ವ್ಯವಸ್ಥೆಗಳನ್ನು ವೀಕ್ಷಿಸಿದರಲ್ಲದೆ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ರಾಷ್ಟ್ರಪತಿ ಅವರು ಸಂಚರಿಸುವ ಮಾರ್ಗದ ಸಮೀಕ್ಷೆ ನಡೆಸಿದರು.ಮೆಟ್ಟಿಲು ಮಾರ್ಗ ಮತ್ತು ರಸ್ತೆ ಹಾದಿಗಳ ಮೂಲಕ ದೇಗುಲವನ್ನು ಏರಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.ರಾಷ್ಟ್ರಪತಿ ಅವರು ನಡೆದಾಡುವ ಮಾರ್ಗದ ಉದ್ದಕ್ಕೂ ಶಾಮಿಯಾನ ಅಳವಡಿಕೆ, ಮ್ಯಾಟ್ ಹಾಕಬೇಕಾದಸ್ಥಳ, ರೈಲಿಂಗ್ಸ್ ಹಾಕಲು ಸಿದ್ಧತೆ ಮಾಡಿಕೊಳ್ಳುವುದು. ಇದಕ್ಕಾಗಿ ಶಾಮಿಯಾನ ವ್ಯವಸ್ಥೆಯ ಮಾಡುವವರನ್ನು ಕರೆಸಿ ಚರ್ಚೆ ನಡೆಸಿದರು. ಭದ್ರತೆಗೆ ಸಂಬಂಧಿಸಿದಂತೆ ಪೊಲೀಸರಅಭಿಪ್ರಾಯಗಳನ್ನು ಪಡೆದರು. ಅತಿ ಗಣ್ಯರ ಕೊಠಡಿಯಲ್ಲಿ ಮೂಲ ಸೌಲಭ್ಯ ಒದಗಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ಬಳಿಕ ಚಾಮರಾಜನಗರ ಯಡ‌ಬೆಟ್ಟ ಬಳಿ ನಿರ್ಮಿಸಲಾಗಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧನಾ ಆಸ್ಪತ್ರೆ ಕಟ್ಟಡಕ್ಕೆ ತೆರಳಿ ಪರಿಶೀಲಿಸಿದರು.

ವೈದ್ಯಕೀಯ ಕಾಲೇಜಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸೋಮಶೇಖರ್‌ ಅವರು, ಕೈಗೊಳ್ಳಲಾಗಿರುವ ಪ್ರತಿ ಸಿದ್ಧತಾ ವ್ಯವಸ್ಥೆಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚಿಸಿದರು.

ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜನೆಗೆ ಎಲ್ಲ ಸಿದ್ದತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರು ಕೈಗೊಳ್ಳಲಾಗಿರುವ ಸಿದ್ಧತೆಗಳ ಬಗ್ಗೆ ವಿವರಿಸಿದರು.

ಶಾಸಕರಾದ ಎನ್.ಮಹೇಶ್, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಮೂರ್ತಿ ಎಂ.ಕುಲಗಾಣ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಬಿ.ಆರ್.ಟಿ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ್‍ಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜು, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಸಂಜೀವ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಶ್ವೇಶ್ವರಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಯ್‍ಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಅಬಕಾರಿ ಇಲಾಖೆ ಉಪ ಆಯುಕ್ತ ಮುರಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.