ADVERTISEMENT

‘ಹೊಸ ರಥ: 15 ದಿನಗಳಲ್ಲಿ ಕ್ರಿಯಾಯೋಜನೆ’

ಚೆನ್ನಪ್ಪನಪುರ ವೀರಭದ್ರೇಶ್ವರಸ್ವಾಮಿ ದೇವಾಲಯಕ್ಕೆ ಸಚಿವ ಸೋಮಣ್ಣ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 5:39 IST
Last Updated 3 ನವೆಂಬರ್ 2022, 5:39 IST
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ರಥದ ಚಕ್ರದ ದೂರಿ ತುಂಡಾಗಿರುವುದನ್ನು ವೀಕ್ಷಿಸಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಜಿ.ಪಂ. ಸಿಇಒ ಕೆ.ಎಂ.ಗಾಯಿತ್ರಿ ಇದ್ದರು
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ರಥದ ಚಕ್ರದ ದೂರಿ ತುಂಡಾಗಿರುವುದನ್ನು ವೀಕ್ಷಿಸಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಜಿ.ಪಂ. ಸಿಇಒ ಕೆ.ಎಂ.ಗಾಯಿತ್ರಿ ಇದ್ದರು   

ಚಾಮರಾಜನಗರ: ರಥೋತ್ಸವದ ವೇಳೆ ತೇರು ಉರುಳಿಬಿದ್ದ ತಾಲ್ಲೂಕಿನ ಚೆನ್ನಪ್ಪನಪುರದ ಅಮಚವಾಡಿ ಗುಡ್ಡದ ವೀರಭದ್ರೇಶ್ವರಸ್ವಾಮಿ ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಬುಧವಾರ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ರಥದ ಪಟ್ಟಿ ತುಂಡಾಗಿರುವುದನ್ನು ಪರಿಶೀಲಿಸಿದರು.

ಮುಂದಿನ ಜಾತ್ರೆಯ ಒಳಗಾಗಿ ಹೊಸ ರಥ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ತಹಶೀಲ್ದಾರ್‌ ಬಸವರಾಜು, ಗ್ರಾಮದ 19 ಕೋಮುಗಳ ಅಧ್ಯಕ್ಷ ಶ್ರೀಕಾಂತ್‌ ಅರಸ್‌ ಸೆರಿದಂತೆ ಊರ ಮುಖಂಡರು, ಗ್ರಾಮಸ್ಥರು ಇದ್ದರು.

ADVERTISEMENT

ದೇವಾಲಯದ ಒಳಾಂಗಣದಲ್ಲಿ ಇರಿಸಲಾಗಿದ್ದ ರಥದ ಚಕ್ರಗಳು ಹಾಗೂ ದೂರಿ ತುಂಡಾದ ಚಕ್ರವನ್ನು ವೀಕ್ಷಿಸಿದ ಸೋಮಣ್ಣ, ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು.

ದೇವಾಲಯದ ಆವರಣದಲ್ಲಿ ಸುತ್ತು ಹಾಕಿ ವಸ್ತುಸ್ಥಿತಿ ಪರಿಶೀಲಿಸಿದ ಸಚಿವರು ನಂತರ ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಣ್ಣ, ‘ಮುಮ್ಮುಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಈ ದೇವಾಲಯ ಅಭಿವೃದ್ಧಿಗೊಂಡಿದೆ. ಕೆಲವು ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ. ರಥೋತ್ಸವದ ವೇಳೆ ಈ ಘಟನೆ ನಡೆದಿರುವುದು ವಿಷಾದನೀಯ’ ಎಂದು ಹೇಳಿದರು.

‘ಘಟನೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೊಂದಿಗೆ ಮಂಗಳವಾರ ಚರ್ಚಿಸಿದ್ದೆ. ಅವರು ಸೂಚನೆ ನೀಡಿದ ಬಳಿಕ ಇಲ್ಲಿಗೆ ಬಂದಿದ್ದೇನೆ. ಮುಂದಿನ ಜಾತ್ರೆಯ ವೇಳೆಗೆ ಹೊಸ ರಥ ನಿರ್ಮಿಸಲು ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

‘ಚಿಕ್ಕ ರಥ ಆಗಿರುವುದರಿಂದ ಹೆಚ್ಚು ಹಣದ ಅಗತ್ಯವಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಬೆಂಗಳೂರಿನಿಂದ ರಥ ನಿರ್ಮಿಸುವ ತಜ್ಞರು ಬರಲಿದ್ದಾರೆ.15 ದಿನಗಳೊಳಗೆ ಹೊಸ ತೇರು ನಿರ್ಮಿಸಲು ಕ್ರಿಯಾ ಯೋಜನೆ ತಯಾರಿಸಲು ಜಿಲ್ಲಾಧಿಕಾರಿ ಅವರಿಗೆ ಸೂಚಿಸಲಾಗಿದೆ. ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಚರ್ಚಿಸಿ ಸಾಧಕ ಬಾಧಕಗಳನ್ನು ಪರಿಶೀಲಿಸಿ ಮುಂದಿನ ರಥೋತ್ಸವ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ಸಂಪ್ರದಾಯದಂತೆ ತೇರನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಮುಂದೆ ಯಾವುದೇ ರೀತಿಯ ಅನಾಹುತಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ರಥ ನಿರ್ಮಾಣ ಮತ್ತು ದೇವಸ್ಥಾನ ಜೀರ್ಣೋದ್ಧಾರ ಸಂಬಂಧ ಮುಖ್ಯಮಂತ್ರಿಗಳ ಜೊತೆ ಸಹ ಚರ್ಚಿಸಲಾಗುವುದು’ ಎಂದು ವಿ. ಸೋಮಣ್ಣ ತಿಳಿಸಿದರು.

ದೇವಾಲಯದ ಸುತ್ತಮುತ್ತಲಿನ ಸ್ಥಳ ಒತ್ತುವರಿ ತೆರವು ಹಾಗೂ ದೇವಾಲಯದ ಜೀರ್ಣೋದ್ದಾರ ಮಾಡಿಕೊಡುವಂತೆ ಎಂದು ಗ್ರಾಮಸ್ಥರು, ಸ್ಥಳೀಯ ಮುಖಂಡರು ಮನವಿ ಮಾಡಿದರು. ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಉಸ್ತುವಾರಿ ಸಚಿವರು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಇನ್ನಿತರ ಅಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.

ಮಹದೇಶ್ವರ ಬೆಟ್ಟ: ನವೀಕೃತ ದ್ವಾರ ಉದ್ಘಾಟನೆ
ಮಹದೇಶ್ವರ ಬೆಟ್ಟ:
ಮಲೆ ಮಹದೇಶ್ವರಸ್ವಾಮಿ ದೇವಾಲಯದ ಮುಂಭಾಗದ ನವೀಕೃತ ದ್ವಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬುಧವಾರ ಉದ್ಘಾಟಿಸಿದರು.

ದೇವಾಲಯದ ದಕ್ಷಿಣ ದ್ವಾರವನ್ನು ಪ್ರಾಧಿಕಾರದ ನೌಕರ ಹಾಗೂ ನೌಕರ ಸಂಘದ ಗೌರವಾಧ್ಯಕ್ಷ ಕೆ.ಮಹದೇವಸ್ವಾಮಿ ಅವರು ತಮ್ಮ ಸ್ವಂತ ಹಣದಿಂದ ನವೀಕರಣ ಮಾಡಿಸಿದ್ದರು. ಚಿಕ್ಕಗೋಪುರದ ಮುಂಭಾಗ ಈ ಹಿಂದೆ ಇದ್ದ ಶೀಟ್‌ಗಳನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಹೆಂಚಿನ ಚಿಕ್ಕ ಗೋಪುರದ ಆಕಾರವುಳ್ಳ ಚಾವಣಿ ನಿರ್ಮಿಸಲಾಗಿದೆ.

ಸ್ವಾಮಿಯ ದರ್ಶನ: ಸಂಜೆ ದೇವಾಲಯಕ್ಕೆ ಭೇಟಿ ನೀಡಿದ ಸೋಮಣ್ಣ ಅವರು ಸುರಿಯುತ್ತಿದ್ದ ಮಳೆಯ ನಡುವೆಯೂ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿ ಸ್ವಾಮಿಯ ದರ್ಶನ ಪಡೆದರು.

ನಂತರ ದೇವಾಲಯದ ಒಳಭಾಗದಲ್ಲಿ ನಡೆಯುತ್ತಿರುವ ಬೆಳ್ಳಿ ರಥದ ಕಾಮಗಾರಿ ವೀಕ್ಷಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.