ADVERTISEMENT

ಜಿಲ್ಲಾಸ್ಪತ್ರೆ, ನಿರಾಶ್ರಿತರ ಕೇಂದ್ರಕ್ಕೆ ನ್ಯಾಯಾಧೀಶರ ಭೇಟಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 14:40 IST
Last Updated 10 ಏಪ್ರಿಲ್ 2020, 14:40 IST
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿ.ಪಾಟೀಲ ಅವರು ಶುಕ್ರವಾರ ಚಾಮರಾಜನಗರ ಭ್ರಮರಾಂಭ ಬಡಾವಣೆಯಲ್ಲಿ  ನಿವಾಸಿಗಳೊಂದಿಗೆ ಕೋವಿಡ್‌–19ರ ಬಗ್ಗೆ ಜಾಗೃತಿ ಮೂಡಿಸಿದರು 
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿ.ಪಾಟೀಲ ಅವರು ಶುಕ್ರವಾರ ಚಾಮರಾಜನಗರ ಭ್ರಮರಾಂಭ ಬಡಾವಣೆಯಲ್ಲಿ  ನಿವಾಸಿಗಳೊಂದಿಗೆ ಕೋವಿಡ್‌–19ರ ಬಗ್ಗೆ ಜಾಗೃತಿ ಮೂಡಿಸಿದರು    

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್-19 ತಡೆಗೆ ಕೈಗೊಂಡಿರುವಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶ ಡಿ.ವಿ.ಪಾಟೀಲ ಅವರು ಶುಕ್ರವಾರ ನಗರದ ವಿವಿಧ ಸ್ಥಳಗಳೀಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಚಿಕಿತ್ಸಾ ಕ್ರಮಗಳು, ವ್ಯವಸ್ಥೆಗೊಳಿಸಲಾಗಿರುವ ವಾರ್ಡ್‌ಗಳ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಮಕ್ಕಳ ಹಾಗೂ ಹೆರಿಗೆ ವಾರ್ಡ್‌ಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ರೋಗಿಗಳೊಂದಿಗೆ ಮಾತನಾಡಿದ ಅವರು, ‘ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯಗಳು ಸರಿಯಾಗಿ ತಲುಪುತ್ತಿವೆಯೇ? ವೈದ್ಯರ ಸೇವೆ ಸಮರ್ಪಕವಾಗಿ ಸಿಗುತ್ತಿದೆಯೇ’ ಎಂದು ಪ್ರಶ್ನಿಸಿದರು.

ADVERTISEMENT

ಹಣ್ಣು ಮಾರಾಟ ಮಳಿಗೆ, ಬೇಕರಿಗಳಿಗೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಗ್ರಾಹಕರಿಗೆ ಸೂಚಿಸಬೇಕು ಎಂದು ಸಲಹೆ ನೀಡಿದರು.

ಭ್ರಮರಾಂಭ ಬಡಾವಣೆಯಲ್ಲಿರುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ‘ಸಾಮಾಜಿಕ ಅಂತರ ಕುರಿತ ಮಹತ್ವವನ್ನು ತಿಳಿಸುವಂತೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಚಿಸಿದರು. ತೂಕ, ಅಳತೆಯಲ್ಲಿ ವ್ಯತ್ಯಾಸವಾಗಬಾರದು. ಪಡಿತರ ನೀಡಲು ಯಾವುದೇ ಹಣ ಪಡೆಯಬಾರದು’ ಎಂದು ನಿರ್ದೇಶನ ನೀಡಿದರು.

ನಗರದ ಸಿಡಿಎಸ್ ಭವನದಲ್ಲಿರುವ ನಿರ್ಗತಿಕರ ಕೇಂದ್ರಕ್ಕೆ ಭೇಟಿ ಕೊಟ್ಟು ಅಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ವಿ.ಪಾಟೀಲ ಅವರು, ‘ಹೈಕೋರ್ಟ್ ನಿರ್ದೇಶನದ ಮೇರೆಗೆ ಕೋವಿಡ್ ಸಂಬಂಧ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸಾರ್ವಜನಿಕರಿಗೆ ಲಭ್ಯವಾಗುತ್ತಿರುವ ಅಗತ್ಯ ವಸ್ತುಗಳ ಸೇವೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಆಸ್ಪತ್ರೆಯಲ್ಲಿ ಯಾವುದೇ ತೊಂದರೆ ಇಲ್ಲವೆಂದು ಅಲ್ಲಿ ದಾಖಲಾಗಿರುವವರು ತಿಳಿಸಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪ್ರಕರಣ ವರದಿಯಾಗಿಲ್ಲ. ಸರ್ಕಾರ ನೀಡಿರುವ ಸೂಚನೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಮನೆಯಿಂದ ಹೊರಗೆ ಬರಬಾರದು. ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಗೆ ಪ್ರತಿ ನಾಗರಿಕರು ಸಹಕರಿಸುವ ಮೂಲಕ ವೈರಾಣು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಕಾರ್ಯದರ್ಶಿ ಮುಂಜು ಹರವೆ, ಸಾಧನಾ ಸಂಸ್ಥೆಯ ಟಿ.ಜೆ. ಸುರೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.