ಚಾಮರಾಜನಗರ: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಇದೇ 15ರಿಂದ 17ರವರೆಗೆ ನಡೆಯಲಿರುವ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ಲೆಯ 20 ಮಕ್ಕಳು ಮತ್ತು ವಿವಿಧ ಶಾಲೆಗಳ ನಾಲ್ಕು ತಂಡಗಳು ಆಯ್ಕೆಯಾಗಿವೆ.
ನಗರದ ಸಮೀಪದ ಸಿ.ಆರ್. ಬಾಲರಪಟ್ಟಣ ಶಾಲೆಯಲ್ಲಿ ಬುಧವಾರ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ನಡೆಯಿತು. ವೈಯಕ್ತಿಕ ವಿಭಾಗದಲ್ಲಿ (8–12 ವರ್ಷ) 20 ಸ್ಪರ್ಧೆಗಳು ಹಾಗೂ ಸಾಮೂಹಿಕ ವಿಭಾಗದಲ್ಲಿ (8–12 ವರ್ಷ) ನಾಲ್ಕು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಆಶುಭಾಷಣ, ವಿವಿಧ ಭಾಷೆಗಳಲ್ಲಿ ಭಾಷಣ, ಭರತನಾಟ್ಯ, ಕಂಠಪಾಠ, ರಂಗೋಲಿ, ಚರ್ಚಾ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳು ವೈಯಕ್ತಿಕ ವಿಭಾಗದಲ್ಲಿ ಇದ್ದವು. ಸಾಮೂಹಿಕ ವಿಭಾಗದಲ್ಲಿ ನೃತ್ಯ, ನಾಟಕ, ದೃಶ್ಯಕಲೆ ಮತ್ತು ಸಂಗೀತ ಸ್ಪರ್ಧೆಗಳು ನಡೆದವು. ಈ ಸ್ಪರ್ಧೆಗಳಲ್ಲಿ ಮೊದಲ ಸ್ಥಾನಗಳಿಸಿದ ಮಕ್ಕಳು ಹಾಗೂ ಪ್ರಥಮ ಸ್ಥಾನಗಳಿಸಿದ ತಂಡಗಳು ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿವೆ
ಇದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜೆ.ಯೋಗೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ‘ಶಾಲಾ ಮಕ್ಕಳಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರುವ ಉದ್ದೇಶದಿಂದ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ರೂಪಿಸಿದೆ. ಮಕ್ಕಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
‘ಮಕ್ಕಳು ನಾಲ್ಕು ಗೋಡೆಗಳ ಮಧ್ಯದಲ್ಲಿ ಓದುವುದು, ಬರೆಯುವುದು ಸೇರಿದಂತೆ ಪಠ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಮಗ್ನರಾಗಿತ್ತಾರೆ. ಬಹುತೇಕ ಮಕ್ಕಳಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಗೆಡವಲು ಅವಕಾಶವೇ ಇರುವುದಿಲ್ಲ. ಖಾಸಗಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಅವರಿಗೆ ಸಾಧ್ಯವಾಗುವುದಿಲ್ಲ. ಅಂತಹವರಿಗಾಗಿಶಿಕ್ಷಣ ಇಲಾಖೆ ಶಾಲೆಗಳಲ್ಲೇ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ’ ಎಂದು ಅವರು ಹೇಳಿದರು.
‘ಸ್ಪರ್ಧೆಯಲ್ಲಿ ಸೋಲು ಗೆಲುವು ಇದ್ದದ್ದೆ. ಆದರೆ, ಭಾಗವಹಿಸುವಿಕೆ ಮುಖ್ಯ. ಇಲ್ಲಿ ಗೆದ್ದವರು ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಅಲ್ಲೂ ನಮ್ಮ ಮಕ್ಕಳಿಗೆ ಬಹುಮಾನಗಳು ಬರಲಿ’ ಎಂದು ಶುಭ ಹಾರೈಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ (ಡಿಡಿಪಿಐ) ಮಂಜುಳಾ ಮಾತನಾಡಿ, ‘ಈಗ ಶಿಕ್ಷಣ ವ್ಯವಸ್ಥೆ ಬದಲಾಗುತ್ತಿದೆ. ಪಠ್ಯ ಪುಸ್ತಕದ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಹೇಳಲಾಗುತ್ತಿದೆ. ಯಾವ ತರಗತಿ ಮಕ್ಕಳು ಗರಿಷ್ಠ ಎಷ್ಟು ಕೆಜಿಗಳಷ್ಟು ಪುಸ್ತಕಗಳನ್ನು ಶಾಲೆಗೆ ತರಬಹುದು ಎಂಬುದನ್ನು ನಿಗದಿ ಪಡಿಸಿ ಆದೇಶವೇ ಬಂದಿದೆ’ ಎಂದರು.
‘ಶಾಲೆಗಳಲ್ಲಿ ಪಠ್ಯ ಹಾಗೂ ಸಹ ಪಠ್ಯದ ಚಟುವಟಿಕೆಗಳಿಗೆ ಸಮಾನ ಅವಕಾಶ ಸಿಗಬೇಕು ಎಂಬುದು ಸರ್ಕಾರದ ನಿಲುವು. ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹಾಕಬೇಕು ಎಂಬ ನಿರ್ದೇಶನವೂ ಇದೆ’ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ (ಡಯಟ್) ಪ್ರಾಂಶುಪಾಲರಾದ ಭಾರತಿ, ಸರ್ವ ಶಿಕ್ಷಣ ಅಭಿಯಾನ ಉಪ ಸಮನ್ವಯ ಅಧಿಕಾರಿಸಿ.ಎನ್. ರಾಜು, ಬಾಲರಪಟ್ಟಣ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ರೆವರೆಂಡ್ ಬ್ರದರ್ ಅಲ್ಬನ್ ಪಿಂಟೋ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷರಾದ ರಂಗಸ್ವಾಮಿ, ತಾಲ್ಲೂಕುಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮೀಪತಿ, ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್, ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಇದ್ದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ 10ರೊಳಗಿನ ಸ್ಥಾನದ ಗುರಿ
‘ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯಮಟ್ಟದಲ್ಲೇ 10 ಒಳಗಿನ ಸ್ಥಾನ ಪಡೆಯಬೇಕು ಎಂಬ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ‘ಲ್ಯಾಂಪ್’ ಎನ್ನುವ ಯೋಜನೆಗೆ ಚಾಲನೆ ನೀಡಲಾಗಿದೆ. ಈಗಾಗಲೇ ಈ ಸಂಬಂಧ ಹಲವು ಸಭೆಗಳನ್ನು ನಡೆಸಲಾಗಿದೆ’ ಎಂದು ಜೆ.ಯೋಗೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.