ADVERTISEMENT

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೂಚನೆ

ಮಹದೇಶ್ವರ ಬೆಟ್ಟ: 15 ದಿನಗಳಲ್ಲಿ ಕೊಳವೆ ಬಾವಿ ಕೊರೆಸುವ ಭರವಸೆ ನೀಡಿದ ಶಾಸಕ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 15:46 IST
Last Updated 1 ಫೆಬ್ರುವರಿ 2019, 15:46 IST
ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಯಿತು
ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಯಿತು   

ಮಹದೇಶ್ವರ ಬೆಟ್ಟ: ಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಂಡು ಬಂದಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಶುಕ್ರವಾರ ಅಧಿಕಾರಿಗಳಿಗೆ ಸೂಚಿಸಿದರು.

ಮಹದೇಶ್ವರ ಬೆಟ್ಟದಲ್ಲಿ ನಡೆದ ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ರೈತರೊಂದಿಗಿನ ಸಭೆಯಲ್ಲಿ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು,ಮಹದೇಶ್ವರ ಬೆಟ್ಟದ ಕಾಡಂಚಿನಲ್ಲಿರುವ ಇಂಡಿಗನತ್ತ, ಮೆದಗಣೆ, ಪಡಸಲನತ್ತ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲ. ಮಕ್ಕಳು ಶಾಲೆಗೆ ತೆರಳಲು ಮೂಲ ಸೌಕರ್ಯಗಳಿಲ್ಲ. ಆರೋಗ್ಯ ಹಾಗೂ ಶಿಕ್ಷಣ ಸೌಲಭ್ಯಗಳಿಲ್ಲ. ಸುಡು ಬೇಸಿಗೆ ಬರುವುದಕ್ಕೆ ಮುನ್ನವೇ ನೀರಿಗೆ ಹಾಹಾಕಾರ ಉಂಟಾಗುತ್ತಿದೆ ಎಂದು ದೂರಿದರು.

ADVERTISEMENT

15 ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಿ, ಮೂಲಸೌಕರ್ಯ ಒದಗಿಸದೆ ಇದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಹನೂರು ಶಾಸಕ ಆರ್‌.ನರೇಂದ್ರ ಮಾತನಾಡಿ, ‘ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸಮಸ್ಯೆ ಬಗೆಹರಿಸಲು ಕಳೆದ ಬಾರಿಯೇ ಪ್ರಯತ್ನಿಸಲಾಗಿತ್ತು. ಹಿಂದೆ ಇದ್ದ ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿರಲಿಲ್ಲ. ಇಂಡಿಗನತ್ತ ಗ್ರಾಮದವರೆಗೆ ಮಾತ್ರ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮೂರು ಗ್ರಾಮಗಳಾದಪಡಸಲನತ್ತ, ನಾಗಮಲೆ, ಮೆದಗಣೆಗಳಲ್ಲಿರುವ ಬಾವಿಗಳನ್ನು ಮತ್ತಷ್ಟು ಆಳಮಾಡುವ ಕೆಲಸವನ್ನು ಶನಿವಾರವೇ ಆರಂಭಿಸುವಂತೆ ಸೂಚಿಸಲಾಗಿದೆ. 15 ದಿನಗಳಲ್ಲಿ ಆ ಗ್ರಾಮಗಳಿಗೆ ಕೊಳವೆಬಾವಿಗಳನ್ನು ಹಾಕಿಸುವ ವ್ಯವಸ್ಥೆಯ ಮಾಡಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾಧಿಕಾರಿ ಬಿ.‌ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹರೀಶ್ ಕುಮಾರ್, ತಹಶೀಲ್ದಾರ್ ರಾಯಪ್ಪ ಹುಣಸಗಿ, ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌ ವಿ.ಏಡುಕುಂಡಲು, ಕಾವೇರಿ ವನ್ಯಧಾಮದ ಡಿಸಿಎಫ್‌ ರಮೇಶ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಸಭೆಗೂ ಮುನ್ನ, ನಾಗಮಲೆ ಅತಿಥಿಗೃಹದ ಮುಂದೆ ಜಮಾಯಿಸಿದ ರೈತರು ಧರಣಿ ಕುಳಿತು ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು.

ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ

ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಇಲಾಖೆಯ ಗಾರ್ಡ್‌ ಹಾಗೂ ವಾಚರ್‌ಗಳು ರೈತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಹಿಂದಿನ ಕಾಲದಿಂದಲೂ ವ್ಯವಸಾಯ ಮಾಡುತ್ತಿರುವವರಿಗೆ ನ್ಯಾಯಾ‌ಲಯದಿಂದ ನೋಟಿಸ್‌ ಬರುವಂತೆ ಮಾಡಲಾಗುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿದ ನರೇಂದ್ರ ಅವರು, ‘ದನ ಮೇಯಿಸಲು ಅರಣ್ಯ ಪ್ರವೇಶಿಸುವ ದನಗಾಹಿಗಳು ಹಾಗೂ ಕಟ್ಟಿಗೆಯನ್ನು ತರುವುದಕ್ಕಾಗಿ ಕಾಡನ್ನು ಪ್ರವೇಶಿಸುವವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ಮಾಡಬಾರದು. ಹಲ್ಲೆ ಮಾಡದಂತೆ ಹಿರಿಯ ಅಧಿಕಾರಿಗಳು ಗಾರ್ಡ್‌ ಹಾಗೂ ವಾಚರ್‌ಗಳಿಗೆ ಸೂಚಿಸಬೇಕು. ಜನರು ಅರಣ್ಯದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಿ’ ಎಂದು ಅರಣ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.