ADVERTISEMENT

ಹರದನಹಳ್ಳಿ: ದಿವ್ಯಲಿಂಗೇಶ್ವರ ರಥೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 4:27 IST
Last Updated 1 ಏಪ್ರಿಲ್ 2024, 4:27 IST
ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿಯ ದಿವ್ಯಲಿಂಗೇಶ್ವರ ಸ್ವಾಮಿಯ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು
ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿಯ ದಿವ್ಯಲಿಂಗೇಶ್ವರ ಸ್ವಾಮಿಯ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು   

ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿ ಗ್ರಾಮದ ಕಾಮಾಕ್ಷಾಂಬಾ ಸಮೇತ ದಿವ್ಯಲಿಂಗೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವ ಭಾನುವಾರ ಮಧ್ಯಾಹ್ನ ವಿಜೃಂಭಣೆಯಿಂದ ನಡೆಯಿತು. 

ಸುತ್ತಮುತ್ತಲ ಊರುಗಳ, ಈ ದೇವಾಲಯಕ್ಕೆ ನಡೆದುಕೊಳ್ಳುವ ತಮಿಳುನಾಡಿನಿಂದ ಬಂದಿದ್ದ ಸಾವಿರಾರು ರಥೋತ್ಸವವನ್ನು ಕಣ್ತುಂಬಿಕೊಂಡರು. 

ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಗಣಪ‍ತಿ ಪೂಜೆ, ಪುಣ್ಯಾಹ, ಶಿವಯಾಗ, ರಥ ಸಂಪೋಕ್ಷಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. 

ADVERTISEMENT

ದಿವ್ಯಲಿಂಗೇಶ್ವರಸ್ವಾಮಿಯ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ, ನಂತರ ಅರವಟ್ಟಿಗೆಗಳಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು. ನಂತರ ತೇರು ಸಾಗುವ ಮಾರ್ಗದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ಉತ್ಸವ ಮುಗಿಸಿ ತೇರಿನ ಬಳಿ ಉತ್ಸವ ಮೂರ್ತಿಯನ್ನು ತಂದು ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಮಾಡಲಾಯಿತು. 

ಮಧ್ಯಾಹ್ನ 12.13ರ ಬಳಿಕ ಮಿಥುನ ಲಗ್ನದ ಅಭಿಜಿನ್‌ ಮುಹೂರ್ತದಲ್ಲಿ ದಿವ್ಯಲಿಂಗೇಶ್ವರ ಸ್ವಾಮಿಯ ಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಆ ನಂತರ ತೇರು ಎಳೆಯುವುದಕ್ಕೆ ಚಾಲನೆ ನೀಡಲಾಯಿತು. ನೂರಾರು ಭಕ್ತರು ಪ್ರಮುಖ ಬೀದಿಗಳಲ್ಲಿ ತೇರನ್ನು ಎಳೆಸರು. 2.30ರ ಹೊತ್ತಿಗೆ ರಥ ಸ್ವಸ್ಥಾನ ತಲುಪಿತು. 

ಹರದನಹಳ್ಳಿ, ಬಂಡಿಗೆರೆ, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲಿನ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರು, ತೇರಿಗೆ ಹಣ್ಣು, ಧವಸ ಎಸೆದು ಹರಕೆ ತೀರಿಸಿದರು. 

ಹುಲಿ ವೇಷಗಳು, ಕಂಸಾಳೆ ನೃತ್ಯ, ನಂದಿ ಕಂಬ, ಡೊಳ್ಳು ಕುಣಿತ, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾತಂಡಗಳು ತೇರಿನೊಂದಿಗೆ ಸಾಗಿದವು. ರಥಸಾಗುವ ಮಾರ್ಗದಲ್ಲಿರುವ ಮನೆಗಳ ಮುಂದೆ ವಿಶೇಷ ರಂಗೋಲಿ ಹಾಕಲಾಗಿತ್ತು. ಭಕ್ತರಿಗೆ ಮಜ್ಜಿಗೆ ಪಾನಕ, ಕೊಸಂಬರಿಯನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.