
ಗುಂಡ್ಲುಪೇಟೆ: ತಾಲ್ಲೂಕಿನ ಕೋಟೆಕೆರೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಶಾಸಕ ಎಚ್.ಎಂ.ಗಣೇಶಪ್ರಸಾದ್ ಉದ್ಘಾಟನೆ ಮಾಡಿದರು.
ಕೋಟೆಕೆರೆ ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯದ ಆವರಣದಲ್ಲಿ ನಡೆದ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಪ್ರತಿಮೆ ಮಾಡುವುದಕ್ಕಿಂತ ಮಿಗಿಲಾಗಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದರು.
ಅಂಬೇಡ್ಕರ್ ಸಂವಿಧಾನ ಇಡೀ ಜಗತ್ತಿಗೆ ಮಾದರಿ. ಸಂವಿಧಾನ ಅರ್ಪಿಸಿ ಎಲ್ಲರೂ ಒಂದೇ ಎಂದು ಸಾರಿದ ಮಹಾನ್ ನಾಯಕರನ್ನು ಸ್ಮರಿಸುವ ಭಾಗ್ಯ ಎಲ್ಲರದ್ದಾಗಿದೆ. ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟ ಬಾಬಾ ಸಾಹೇಬರ ಆಶಯದಂತೆ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಎಸ್‌ಸಿಎಸ್‌ಪಿಯಲ್ಲಿ ಹೆಚ್ಚಿನ ಅನುದಾನ ಕೋರಿದ್ದು, ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಅಂಬೇಡ್ಕರ್ ಬಗ್ಗೆ ಎಷ್ಟು ಅಧ್ಯಯನ ಮಾಡಿದರು ಸಾಲದು. ತಮ್ಮ ಜೀವನ ತ್ಯಾಗ ಮಾಡಿ ಸಂವಿಧಾನವನ್ನು ದೇಶಕ್ಕೆ ಅರ್ಪಣೆ ಮಾಡಿದ್ದಾರೆ. ಆಸಂವಿಧಾನದಿಂದಲೆ ಎಲ್ಲರೂ ಒಂದೆಡೆ ಸೇರಿ ಕಾರ್ಯಕ್ರಮ ಮಾಡಲು ಅವಕಾಶ ಸಿಕ್ಕಿದೆ. ಇತ್ತೀಚೆಗೆ ಅಂಬೇಡ್ಕರ್ ಪ್ರತಿಮೆ ಬಹಳಷ್ಟು ಗ್ರಾಮಗಳಲ್ಲಿ ನಿರ್ಮಾಣವಾಗುತ್ತಿವೆ. ಇದು ಮೆಚ್ಚುಗೆಯ ವಿಚಾರ. ಇತಿಹಾಸ ಪುಟಗಳಲ್ಲಿ ಉಳಿದಿರುವ ಬಾಬಾ ಸಾಹೇಬರ ಹಾದಿಯಲ್ಲಿ ಯುವ ಸಮೂಹ ಸಾಗಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಸಮಾಜ ನಿರ್ಮಾಣ ಮಾಡುವ ಕಡೆಗೆ ಹೆಜ್ಜೆ ಹಾಕಬೇಕೆಂದು ಸಲಹೆ ನೀಡಿದರು.
ಅಂಬೇಡ್ಕರ್ ವಿಚಾರವಾದಿ ಶಿವಕುಮಾರ್ ಮಾತನಾಡಿ, ಅಂಬೇಡ್ಕರ್ ಕುರಿತು ಪ್ರತಿಯೊಬ್ಬರು ಓದಬೇಕು. ಯುವಕರು, ಪ್ರಜ್ಞಾವಂತರು ಸೇರಿ ಅಂಬೇಡ್ಕರ್ ಬಗ್ಗೆ ಗ್ರಾಮಸ್ಥರು, ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಬೇಕು. ಬಾಬಾ ಸಾಹೇಬರು ಹೆಚ್ಚು ಓದಿದ ಕಾರಣ ಅವರಿಗೆ ಗೌರವ ಕೊಡುತ್ತಿದ್ದರು. ಜ್ಞಾನಕ್ಕೆ ಮರ್ಯಾದೆ ಜಾಸ್ತಿ ಇರುವ ಕಾರಣ ಹೆಚ್ಚೆಚ್ಚು ಪುಸ್ತಕಗಳನ್ನು ಓದಬೇಕು ಎಂದು ತಿಳಿಸಿದರು.
ಟಿ.ನರಸೀಪುರ ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ ಸಾನ್ನಿಧ್ಯ ವಹಿಸಿದ್ದರು. ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್, ಡಾ.ನವೀನ್ ಮೌರ್ಯ ಇತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಯಜಮಾನರಾದ ರಾಮಕೃಷ್ಣಯ್ಯ, ರಂಗಸ್ವಾಮಿ ಸೇರಿದಂತೆ ಜೈ ಭೀಮ ಯುವಕರು ಸಂಘದವರು ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.