ಚಾಮರಾಜನಗರ: ಬಿಸಿಲಿನ ಝಳ ಹೆಚ್ಚುತ್ತಿರುವಂತೆಯೇ ಜಿಲ್ಲೆಯಲ್ಲಿ ಬರದ ಸ್ಥಿತಿ ಬಿಗಡಾಯಿಸುವ ಲಕ್ಷಣಗಳು ಕಾಣುತ್ತಿವೆ. ಬರ ಪರಿಸ್ಥಿತಿಯ ನಿರ್ವಹಣೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆಯಾದರೂ, 2016ರಲ್ಲಿನ ಸ್ಥಿತಿ ಪುನರಾವರ್ತನೆಯಾಗಬಹುದೇ ಎಂಬ ಸಣ್ಣ ಆತಂಕ ಜನರನ್ನು ಕಾಡುತ್ತಿದೆ.
ಸದ್ಯದ ಮಟ್ಟಿಗೆ, ಹನೂರು ತಾಲ್ಲೂಕಿನ ಕೆಲವು ಕಡೆ ಅದರಲ್ಲೂ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿದೆ. ಬೇರೆಲ್ಲೂ ಕುಡಿಯುವ ನೀರಿನ ಕೊರತೆ ಆ ಪ್ರಮಾಣದಲ್ಲಿ ಉಂಟಾಗಿಲ್ಲ. ಗ್ರಾಮೀಣ ಭಾಗಗಳಲ್ಲಿ ಟ್ಯಾಂಕರ್ ಮೂಲಕ ಪೂರೈಸುವ ಸ್ಥಿತಿ ನಿರ್ಮಾಣವಾಗಿಲ್ಲ.ಈ ವರ್ಷ ಜಿಲ್ಲೆಯಾದ್ಯಂತ ಸಾಕಷ್ಟು ಮೇವು ಕೂಡ ಲಭ್ಯವಿದೆ. ಹಾಗಾಗಿ, ಗೋಶಾಲೆ ಅಥವಾ ಮೇವು ಬ್ಯಾಂಕ್ ಆರಂಭಿಸುವ ಅಗತ್ಯವೇ ಇಲ್ಲ ಎಂಬ ದೃಢ ವಿಶ್ವಾಸದಲ್ಲಿ ಜಿಲ್ಲಾಡಳಿತ ಇದೆ.
ಹಿಂಗಾರು ಅವಧಿಯಲ್ಲಿ ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಆದರೆ, ಹನೂರನ್ನೂ ಒಳಗೊಂಡಂತೆ ಇರುವ ಕೊಳ್ಳೇಗಾಲ ತಾಲ್ಲೂಕನ್ನು ಬರಪೀಡಿತ ಎಂದುಘೋಷಿಸಲಾಗಿಲ್ಲ. ಆದರೆ, ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರುವುದು ಇದೇ ಭಾಗದಲ್ಲಿ. ಈ ಭಾಗದ 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸುಡು ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಬಹುದು ಎಂದು ಜಿಲ್ಲಾಡಳಿತ ಮೊದಲೇ ಊಹಿಸಿತ್ತು. ಬರ ನಿರ್ವಹಣೆಯ ಕಾರ್ಯಪಡೆಗೆ ನೀಡಿರುವ ಅನುದಾನದಲ್ಲಿ ಅಗತ್ಯ ಇರುವ ಕಡೆ ಕೊಳವೆಬಾವಿ ಕೊರೆಸುವುದು ಸೇರಿದಂತೆ ಇನ್ನಿತರ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ.
ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಭಾಗದ ತೀರಾ ಒಳಪ್ರದೇಶದಲ್ಲಿರುವ ಗ್ರಾಮಗಳಾದ ಪಡಸಲನತ್ತ, ಮೆದಗಣೆ, ನಾಗಮಲೆ, ದೊಡ್ಡಣೆ ಸೇರಿದಂತೆ 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರು ತೆರೆದ ಬಾವಿಯ ತಳಮಟ್ಟಕ್ಕೆ ತಲುಪಿರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ತಕ್ಷಣವೇ ಅಲ್ಲಿಗೆ, ಟ್ಯಾಂಕ್ ಮೂಲಕ ನೀರು ಪೂರೈಸಲು ಕ್ರಮಗಳನ್ನು ಕೈಗೊಂಡಿದೆ. ಸಾಧ್ಯವಿರುವ ಕಡೆ ಕೊಳವೆಬಾವಿ ಕೊರೆಸಲು ಸಿದ್ಧತೆ ನಡೆಸಿದೆ.
ಚಾಮರಾಜನಗರ (166 ಜನವಸತಿ ಪ್ರದೇಶಗಳು) ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ (131 ಗ್ರಾಮಗಳು) ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿರುವುದರಿಂದ ಈ ಎರಡೂ ತಾಲ್ಲೂಕುಗಳಲ್ಲಿ ಇದುವರೆಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿಲ್ಲ.
ಯಳಂದೂರು ಮತ್ತು ಕೊಳ್ಳೇಗಾಲ (ಹನೂರು ಸೇರಿ) ತಾಲ್ಲೂಕುಗಳಿಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ. ಈ ಯೋಜನೆ ಪೂರ್ಣಗೊಂಡರೆ ಜಿಲ್ಲೆಯಲ್ಲಿ ಬರದ ಸಂದರ್ಭದಲ್ಲೂ ಕುಡಿಯುವ ನೀರಿಗೆ ಸಮಸ್ಯೆಯಾಗದು ಎಂದು ಹೇಳುತ್ತಾರೆ ಅಧಿಕಾರಿಗಳು.
ಕೃತಕ ಅಭಾವ: ಜಿಲ್ಲೆಯ ಹಲವು ಕಡೆಗಳಲ್ಲಿ ನೀರಿಗೆ ಕೊರತೆ ಇಲ್ಲದಿದ್ದರೂ, ಕೊಳವೆಬಾವಿ ಪಂಪ್ ದುರಸ್ತಿಯಾಗದೆ, ವಿದ್ಯುತ್ ಕಡಿತ, ಪೈಪ್‌ಗಳು ಒಡೆದು... ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ನೀರಿನ ಕೃತಕ ಅಭಾಯ ಸೃಷ್ಟಿಯಾಗುತ್ತಿದೆ. ಉದಾಹರಣೆಗೆ ಗುಂಡ್ಲುಪೇಟೆ ಪಟ್ಟಣಕ್ಕೆ ಕಬಿನಿಯಿಂದ ನೀರು ತರುವ ಪೈಪ್‌ಲೈನ್ ಹಳೆಯದಾಗಿದ್ದು, ಆಗಾಗ ಒಡೆಯುತ್ತಿರುತ್ತದೆ. ದುರಸ್ತಿಗೊಳಿಸಲು 10ರಿಂದ 15 ದಿನಗಳ ಸಮಯ ತೆಗೆದುಕೊಂಡರೆ ಪಟ್ಟಣಕ್ಕೆ ನೀರು ಇರುವುದಿಲ್ಲ. ಇಂತಹ ಹಲವು ನಿದರ್ಶನಗಳುಕಾಡಂಚಿನ ಗ್ರಾಮ ಹಾಗೂ ಪೋಡುಗಳಲ್ಲಿ ಕಾಣಸಿಗುತ್ತವೆ.
ಬತ್ತುತ್ತಿವೆ ಕೆರೆಗಳು: ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಇರುವ ಕೆರೆಗಳಲ್ಲಿ ನೀರು ಬತ್ತಲು ಆರಂಭಿಸಿರುವುದು ಜನರಲ್ಲಿ ಕೊಂಚ ಆತಂಕ ಸೃಷ್ಟಿಸಿದೆ.
ಚಾಮರಾಜನಗರ ತಾಲ್ಲೂಕಿನಲ್ಲಿರುವ ಸುವರ್ಣಾವತಿ ಜಲಾಶಯದಲ್ಲಿ ಸಾಧಾರಣ ಮಟ್ಟಿನ ನೀರಿದೆ. ಬೆಂಡರವಾಡಿ ಕರೆ, ಮಾಲೆಗೆರೆ ಸೇರಿದಂತೆ ಹಲವು ಕೆರೆಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಿದೆ. ಹಲವು ಕೆರೆಗಳಲ್ಲಿ ನೀರು ತಳಮಟ್ಟಕ್ಕೆ ಸೇರಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಇದೇ ಪರಿಸ್ಥಿತಿ ಇದೆ. ನೀರಾವರಿ ಪ್ರದೇಶಗಳಾದ ಯಳಂದೂರು ಮತ್ತು ಕೊಳ್ಳೇಗಾಲ (ಹನೂರು ಭಾಗ ಬಿಟ್ಟು) ತಾಲ್ಲೂಕುಗಳ ಕೆರೆಯಲ್ಲಿ ಈಗಲೂ ನೀರಿನ ಸಂಗ್ರಹ ಉತ್ತಮವಾಗಿದೆ. ಹಾಗಾಗಿ, ಈ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದಿಲ್ಲ.
ಕಾವೇರಿ ನೀರಾವರಿ ನಿಗಮವು ₹ 7.5 ಕೋಟಿ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಕಬಿನಿಯಿಂದ ಕೆರೆಗಳಿಗೆ ನೀರು ಬಿಡುವುದನ್ನು ಸೆಸ್ಕ್ ನಿಲ್ಲಿಸಿರುವುದರಿಂದ, 11ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಯುತ್ತಿಲ್ಲ.
ಗುಂಡ್ಲುಪೇಟೆ, ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ 30ಕ್ಕೂ ಹೆಚ್ಚು ಕೆರೆಗಳಿಗೆ ಕಬಿನಿ ನದಿ ಮೂಲದಿಂದ ನೀರು ತುಂಬಿಸುವ ವಿವಿಧ ಯೋಜನೆಗಳು ಇನ್ನೂ ಕಾಮಗಾರಿ ಹಂತದಲ್ಲಿವೆ. ಗಡುವು ಮುಗಿದಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಯೋಜನೆಗಳು ಪೂರ್ಣಗೊಂಡರೆ ಬಹುತೇಕ ದೊಡ್ಡ ದೊಡ್ಡ ಕೆರೆಗಳು ತುಂಬಲಿದ್ದು, ಬೇಸಿಗೆಯಲ್ಲಿ ಈ ಪ್ರದೇಶಗಳ ನೀರಿನ ಸಮಸ್ಯೆಯನ್ನು ನೀಗಿಸಲಿವೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳಕ್ಕೂ ನೆರವಾಗಲಿವೆ.
ಕೃಷಿಗೆ ಹೊಡೆತ: ಬರದ ಪರಿಸ್ಥಿತಿಯು ಜಿಲ್ಲೆಯ ಕೃಷಿಗೆ ಸಾಕಷ್ಟು ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅದರಲ್ಲೂ ಗುಂಡ್ಲುಪೇಟೆ, ಚಾಮರಾಜನಗರ ಮತ್ತು ಹನೂರು ಭಾಗದಲ್ಲಿ ಮಳೆಯನ್ನು ನೆಚ್ಚಿಕೊಂಡೇ ಕೃಷಿ ಮಾಡಲಾಗುತ್ತದೆ. ಈ ವರ್ಷ ಹಿಂಗಾರಿನಲ್ಲಿ ಮಳೆ ಕೈಕೊಟ್ಟಿದ್ದರಿಂದ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನೆಲಕಚ್ಚಿದೆ. ನೀರಾವರಿ ಆಶ್ರಿತವಾಗಿರುವ ಯಳಂದೂರು ಮತ್ತು ಕೊಳ್ಳೇಗಾಲದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಕೃಷಿಗೆ ತೊಂದರೆಯಾಗಿಲ್ಲ. ಉಳಿದಂತೆ ಕೊಳವೆ ಬಾವಿ ಹೊಂದಿರುವವರು ಹಾಗೂ ನೀರಿನ ಸೌಲಭ್ಯ ಇರುವವರು ಬಿರು ಬೇಸಿಗೆಯನ್ನು ಲೆಕ್ಕಿಸದೆ ಕೃಷಿಯಲ್ಲಿ ತೊಡಗಿದ್ದಾರೆ.
ಬರವನ್ನು ಶಾಶ್ವತವಾಗಿ ತಡೆಯುವಂತಹ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಬೇಕು ಎಂದು ಹೇಳುತ್ತಾರೆ ರೈತ ಮುಖಂಡ ಹೊನ್ನೂರು ಪ್ರಕಾಶ್. ನಮ್ಮ ಜಿಲ್ಲೆಯಲ್ಲಿ ಮಾತ್ರ ಅಲ್ಲ, ರಾಜ್ಯದಾದ್ಯಂತ ಬರ ಪರಿಸ್ಥಿತಿ ಇದೆ. ಯಾವುದಾದರೂ ಒಂದು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಪ್ರಾಯೋಗಿಕ ಯೋಜನೆ ರೂಪಿಸಲಿ ಎಂಬುದು ಅವರ ಆಶಯ.
ಮಳೆ ಬಂದರೆ ಇರದು ಸಮಸ್ಯೆ: ಕಳೆದ ವರ್ಷ ಫೆಬ್ರುವರಿ ಕೊನೆಯ ವಾರ, ಮಾರ್ಚ್ ಮೊದಲ ವಾರದಲ್ಲಿ ಮುಂಗಾರು ಪೂರ್ವ ಮಳೆ ಬಿದ್ದಿತ್ತು. ಹಾಗಾಗಿ, ಸುಡು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಂಡು ಬರಲಿಲ್ಲ. ಈ ವರ್ಷವೂ ಅದೇ ರೀತಿ ಮಳೆಯಾದರೆ, ಯಾವುದೇ ಸಮಸ್ಯೆ ಉಂಟಾಗದು ಎಂಬ ಲೆಕ್ಕಾಚಾರದಲ್ಲಿ ಜಿಲ್ಲಾಡಳಿತ ಇದೆ.
*
ಜಾನುವಾರುಗಳ ಮೇವು,ನೀರಿಗಿಲ್ಲ ಬರ
2016ರಲ್ಲಿ ಜಿಲ್ಲೆಯಲ್ಲಿ ತೀವ್ರ ಬರಗಾಲ ಇದ್ದಾಗ, ಜಾನುವಾರುಗಳ ಮೇವು ಹಾಗೂ ನೀರಿಗೆ ತತ್ವಾರ ಉಂಟಾಗಿತ್ತು. ನೀರು, ಆಹಾರ ಇಲ್ಲದೆ ಹಲವು ಹಸುಕರುಗಳು ಮೃತಪಟ್ಟಿದ್ದವು. ಆದರೆ, ಈ ಬಾರಿ ಅಂತಹ ಪರಿಸ್ಥಿತಿ ಇಲ್ಲ.
ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯಾದ್ಯಂತ ಕೆರೆ ಕಟ್ಟೆಗಳು ತುಂಬಿದ್ದವು. ಈಗ ಅವುಗಳಲ್ಲಿ ನೀರು ಬತ್ತಲು ಆರಂಭವಾಗಿದ್ದರೂ ಇನ್ನೂ ನೀರು ಇದೆ.
ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಹೆಚ್ಚಾಗಿತ್ತು. ಹಾಗಾಗಿ ಧಾರಾಳ ಮೇವು ಲಭ್ಯವಿದೆ. ಹಿಂಗಾರು ಅವಧಿಯಲ್ಲಿ ನೆಲಕಚ್ಚಿರುವ ಬೆಳೆಗಳನ್ನೂ ಮೇವಿಗೆ ಬಳಸಬಹುದಾಗಿರುವುದರಿಂದ ಮೇ ತಿಂಗಳವರೆಗೆ ಮೇವಿಗೆ ಕೊರತೆಯಾಗದು ಎಂದು ಹೇಳುತ್ತಾರೆಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು.
ಎರಡು ಕಡೆ ಮೇವು ಬ್ಯಾಂಕ್: ‘ಗೋಶಾಲೆ ಹಾಗೂ ಮೇವು ಬ್ಯಾಂಕ್ ಸ್ಥಾಪನೆ ಮಾಡುವ ಅಗತ್ಯವಿಲ್ಲದಿದ್ದರೂ, ಸಂಭಾವ್ಯ ಸವಾಲನ್ನು ಎದುರಿಸಲು ಚಾಮರಾಜನಗರ ಮತ್ತು ಗುಂಡ್ಲುಪೇಟೆಗಳಲ್ಲಿ ಮೇವು ನಿಧಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಅಂದಾಜು ತಲಾ 100 ಟನ್‌ಗಳಷ್ಟು ಮೇವನ್ನು ಸಂಗ್ರಹಿಸಿಡುತ್ತೇವೆ’ ಎಂದು ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ಉಪನಿರ್ದೇಶಕ ಡಾ. ಆನಂದ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಸದ್ಯಕ್ಕೆ ವನ್ಯಜೀವಿಗಳು ನಿಶ್ಚಿಂತ
ಜಿಲ್ಲೆಯಲ್ಲಿರುವ ಬಂಡೀಪುರ, ಬಿಆರ್‌ಟಿ, ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಧಾಮಗಳಲ್ಲಿ ಇದುವರೆಗೆ ನೀರಿನ ಸಮಸ್ಯೆ ಎದುರಾಗಿಲ್ಲ.
ಕಳೆದ ವರ್ಷ ಉತ್ತಮ ಮಳೆಯಾಗಿರುವುದರಿಂದ ಅರಣ್ಯ ಪ್ರದೇಶದಲ್ಲಿರುವ ಬಹುತೇಕ ಎಲ್ಲ ಕೆರೆಕಟ್ಟೆಗಳು ತುಂಬಿವೆ. ಈಗಲೂ ಸಣ್ಣಪುಟ್ಟ ಹೊಳೆಗಳಲ್ಲಿ ನೀರು ಹರಿಯುತ್ತಿವೆ. ತೀವ್ರ ಬೇಸಿಗೆಯಲ್ಲಿ ಕಾಡಂಚಿನ ಪ್ರದೇಶಗಳಲ್ಲಿರುವ ಸಣ್ಣಪುಟ್ಟ ಕೆರೆಗಳು, ಹೊಂಡಗಳು ಬತ್ತುತ್ತವೆ. ಅರಣ್ಯದಲ್ಲಿರುವ ಕೆರೆಗಳು ಆ ಪ್ರಮಾಣದಲ್ಲಿ ಬತ್ತುವುದಿಲ್ಲ. ಹಾಗಾಗಿ ಪ್ರಾಣಿಗಳಿಗೆ ನೀರಿನ ಕೊರತೆ ಉಂಟಾಗುವುದಿಲ್ಲ ಎಂದು ಹೇಳುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.
ಮುಂದಿನ ದಿನಗಳಲ್ಲಿ ನೀರಿನ ಕೊರತೆ ಉಂಟಾದರೆ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ವ್ಯವಸ್ಥೆಗಳನ್ನು ಅರಣ್ಯ ಇಲಾಖೆ ಮಾಡಿದೆ.
ಬಂಡೀಪುರ: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ 350ಕ್ಕೂ ಹೆಚ್ಚಿನ ಕೆರೆಗಳಿದ್ದು, ಕಳೆದ ವರ್ಷ ಮಳೆಗಾಲದಲ್ಲಿ ಶೇ 90ರಷ್ಟು ಕೆರೆಗಳು ತುಂಬಿದ್ದವು. ಹಾಗಾಗಿ, ಈ ಬೇಸಿಗೆಯಲ್ಲಿ ಪ್ರಾಣಿಗಳಿಗೆ ಕುಡಿಯಲು ತೊಂದರೆಯಾಗುವುದಿಲ್ಲ.ಅನೇಕ ಕೆರೆಗಳ ಬಳಿ ಕೊಳವೆಬಾವಿ ಕೊರೆಸಿ ಸೋಲಾರ್ ಪಂಪ್‍ಗಳನ್ನು ಅಳವಡಿಸಿದ್ದೇವೆ. ಕೆರೆ ಬತ್ತಿದ ಸಂದರ್ಭದಲ್ಲಿ ಕೊಳವೆಬಾವಿ ಮೂಲಕ ಕೆರೆ ತುಂಬಿಸುತ್ತೇವೆ ಎಂದು ಹುಲಿಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬಿಆರ್‌ಟಿ: ‘ನಮ್ಮಲ್ಲಿ 150ಕ್ಕೂ ಹೆಚ್ಚು ಕೆರೆಗಳಿವೆ. ಬಿಆರ್‌ಟಿಯು ದಟ್ಟ ಕಾಡಾಗಿದ್ದು, ಸಾಕಷ್ಟು ನೀರಿನ ಲಭ್ಯತೆ ಇದೆ. ಇದುವರೆಗೂ ಕೊರತೆ ಉಂಟಾಗಿಲ್ಲ. ಈ ವರ್ಷವೂ ಮೇವರೆಗೆ ನಮಗೆ ಸಮಸ್ಯೆ ಇಲ್ಲ. ಗ್ರಾಮಗಳಿಗೆ ಹತ್ತಿರದಲ್ಲಿರುವ ಕೆರೆಕಟ್ಟೆಗಳು ಬತ್ತಿದರೂ ಕಾಡಿನ ಒಳಗಡೆ ಇರುವ ಕೆರೆಗಳಲ್ಲಿ ನೀರು ಇದೆ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ. ಶಂಕರ್ ಹೇಳಿದರು.
ಕೊಳ್ಳೇಗಾಲ ಉಪವಿಭಾಗದಲ್ಲಿ ಬರುವ ಕಾವೇರಿ ವನ್ಯಧಾಮ ಹಾಗೂ ಮಲೆ ಮಹದೇಶ್ವರ ವನ್ಯಧಾಮದಲ್ಲೂ ನೀರಿಗೆ ಸಮಸ್ಯೆ ಆಗಿಲ್ಲ. ವನ್ಯಧಾಮದ ನದಿ ತೀರದಲ್ಲಿ ಹಾಗೂ ವನ್ಯಧಾಮಗಳಲ್ಲಿರುವ ಹಳ್ಳಗಳು, ತೊರೆಗಳಲ್ಲಿ ನೀರು ಹರಿಯುತ್ತಿರುವುದರಿಂದ ನೀರಿನ ಅಭಾವ ಸೃಷ್ಟಿಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ಕು ದಿನಗಳಿಗೊಮ್ಮೆ ಕೊಳವೆ ಬಾವಿ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.
ಕೊಳ್ಳೇಗಾಲ: ತಾ.ಪಂ. ಸಹಾಯವಾಣಿ
ಕೊಳ್ಳೇಗಾಲ ತಾಲ್ಲೂಕಿನ ವ್ಯಾಪ್ತಿಗೆ ಬರುವ ಹನೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಿರುವುದರಿಂದ ಜಿಲ್ಲಾ ಪಂಚಾಯಿತಿ ಆ ಪ್ರದೇಶಕ್ಕೆ ಹೆಚ್ಚು ಗಮನ ನೀಡುತ್ತಿದೆ.
‘ತಾಲ್ಲೂಕು ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸಭೆ ನಡೆಸಿ, ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ನೀರಿನ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆಹಾಕಿ ಬಗೆಹರಿಸಲು ಸೂಚಿಸಲಾಗಿದೆ.ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದು ಗಮನಕ್ಕೆ ಬಂದರೆ, ಅದಕ್ಕೆ ಹೆಚ್ಚುವರಿ ಪೈಪ್ ಅಳವಡಿಸಲು, ಆಗಲೂ ನೀರು ಬಾರದಿದ್ದರೆ ಟ್ಯಾಂಕ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಇದರ ಜೊತೆಗೆ, ತಾಲ್ಲೂಕಿನ ಯಾವುದೇ ಭಾಗದಲ್ಲಿ ನೀರಿನ ಸಮಸ್ಯೆ ಕಂಡು ಬಂದರೆ ಆ ಬಗ್ಗೆ ಮಾಹಿತಿ ನೀಡಲು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ.
‘ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ತಮ್ಮ ಗ್ರಾಮಗಳ ಸಮಸ್ಯೆಗಳನ್ನು 08224-252011 ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದಾಗಿದೆ’ ಉಮೇಶ್ ತಿಳಿಸಿದರು.
**
₹ 6.5 ಕೋಟಿ:ಜಿಲ್ಲಾಧಿಕಾರಿ ಅವರ ಪಿ.ಡಿ ಖಾತೆಯಲ್ಲಿ ಇರುವ ಹಣ
₹ 2 ಕೋಟಿ:ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುವ ಹಣ
2.53 ಲಕ್ಷ ಟನ್:ಜಿಲ್ಲೆಯಲ್ಲಿ ಲಭ್ಯವಿರುವ ಮೇವು
**
ಹಿಂಗಾರು ಬೆಳೆ ನಷ್ಟ ಲೆಕ್ಕಾಚಾರ
42,035 ಹೆಕ್ಟೇರ್:ಬಿತ್ತನೆಯಾದ ಪ್ರದೇಶ
17,969 ಹೆಕ್ಟೇರ್:ಬೆಳೆ ನಷ್ಟ ಆದ ಪ್ರದೇಶ
**
ಯಾವ ತಾಲ್ಲೂಕಿನಲ್ಲಿ ಎಷ್ಟು ನಷ್ಟ? (ಹೆಕ್ಟೇರ್‌ಗಳಲ್ಲಿ)
ಚಾಮರಾಜನಗರ–11,124
ಕೊಳ್ಳೇಗಾಲ–6,845
**
ಜಿಲ್ಲೆಯಲ್ಲಿ ಹಿಂಗಾರು ಅವಧಿಯ ಮಳೆಯ ಪ್ರಮಾಣ (ಅ.1ರಿಂದ – ಡಿ.31ರವರೆಗೆ)
257 ಮಿ.ಮೀ:ವಾಡಿಕೆಯ ಮಳೆ
159 ಮಿ.ಮೀ:ಮೂರು ತಿಂಗಳ ಅವಧಿಯಲ್ಲಿ ಬಿದ್ದಿರುವ ಮಳೆ
38%:ಮಳೆ ಕೊರತೆ ಪ್ರಮಾಣ
––––––––––
ಜಿಲ್ಲೆಯಲ್ಲಿ ಕುಡಿಯುವ ನೀರು, ಮೇವಿಗೆ ಯಾವುದೇ ಸಮಸ್ಯೆ ಇಲ್ಲ. ಹನೂರು ಭಾಗದ ಪಡಸಲನತ್ತ, ನಾಗಮಲೆ ಮತ್ತು ಮೆದಗಣೆಗಳಲ್ಲಿ ಸ್ವಲ್ಪ ಮಟ್ಟಿಗೆ ನೀರಿನ ಕೊರತೆ ಕಂಡು ಬಂದಿದೆ. ಜಿಲ್ಲಾ ಪಂಚಾಯಿತಿ ಅದನ್ನು ಬಗೆಹರಿಸುತ್ತಿದೆ. ಶಾಸಕರ ನೇತೃತ್ವದ ಕಾರ್ಯಪಡೆಗೆ ಬಿಡುಗಡೆ ಮಾಡಿರುವ ಅನುದಾನದ ಅಡಿಯಲ್ಲಿ ಕೆಲಸಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಬರಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಇಲ್ಲ.
–ಬಿ.ಬಿ. ಕಾವೇರಿ, ಜಿಲ್ಲಾಧಿಕಾರಿ
**
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ಹನೂರು ಭಾಗದಲ್ಲಿ ನಾವು ಈಗಾಗಲೇ ಗುರುತಿಸಿರುವ ಜಾಗದಲ್ಲಿ ಸ್ವಲ್ಪ ಸಮಸ್ಯೆ ಇದೆ. ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸದ್ಯ ನರೇಗಾದ ಅಡಿಯಲ್ಲಿ ಉದ್ಯೋಗ ಮತ್ತು ಕುಡಿಯುವ ನೀರಿಗೆ ಒತ್ತು ನೀಡುತ್ತಿದ್ದೇವೆ.
–ಡಾ.ಕೆ.ಹರೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ
(ಪೂರಕ ಮಾಹಿತಿ, ಚಿತ್ರ: ಜಿ.ಪ್ರದೀಪ್ ಕುಮಾರ್, ಬಿ.ಬಸವರಾಜು, ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ, ಸಿ.ಆರ್.ವೆಂಕಟರಾಮು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.