ಚಾಮರಾಜನಗರ: ನಗರದ ಜಿಲ್ಲಾಸ್ಪತ್ರೆಯ ಎದುರುಗಡೆ ಇದ್ದ ಒಣಗಿದ ನೀಲಗಿರಿ ಮರವನ್ನು ಭಾನುವಾರ ತೆರವುಗೊಳಿಸಲಾಗಿದೆ.
‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ಒಣಗಿದ ಮರದ ಚಿತ್ರವನ್ನು ಪ್ರಕಟಿಸಿ, ತೆರವುಗೊಳಿಸಲು ಸ್ಥಳೀಯರು ಒತ್ತಾಯ ಮಾಡಿರುವ ಬಗ್ಗೆ ಪ್ರಸ್ತಾಪಿಸಲಾಗಿತ್ತು.
ಹಲವು ಸಮಯದಿಂದ ಒಣಗಿದ ಸ್ಥಿತಿಯಲ್ಲಿದ್ದ ಮರವು ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು. ಮರದ ರೆಂಬೆಗಳು ಆಗಾಗ ಮುರಿದು ಬೀಳುತ್ತಿದ್ದವು. ಮರ ಯಾವಾಗ ಬೀಳುತ್ತದೋ ಎಂಬ ಭಯ ಆಸ್ಪತ್ರೆಗೆ ತೆರಳುವ ರೋಗಿಗಳು, ಅವರ ಸಂಬಂಧಿಕರು, ಸುತ್ತಮುತ್ತಲಿನ ಅಂಗಡಿಗಳಲ್ಲಿರುವವರು, ರಸ್ತೆ ಬದಿ ವ್ಯಾಪಾರಿಗಳು ಹಾಗೂ ಪಾದಚಾರಿಗಳನ್ನು ಕಾಡುತ್ತಿತ್ತು.
ಮರದ ಪಕ್ಕದಲ್ಲೇ ವಿದ್ಯುತ್ ತಂತಿಗಳೂ ಹಾದು ಹೋಗಿದ್ದರಿಂದ ಜನರ ಆತಂಕ ಮತ್ತಷ್ಟು ಹೆಚ್ಚಿತ್ತು.
ಪತ್ರಿಕೆಯಲ್ಲಿ ಬಂದ ಚಿತ್ರವನ್ನು ಕಂಡು ಎಚ್ಚೆತ್ತುಕೊಂಡ ಅರಣ್ಯ ಇಲಾಖೆ, ಸೆಸ್ಕ್ ಸಿಬ್ಬಂದಿಯ ನೆರವಿನಿಂದ ಭಾನುವಾರವೇ ಮರವನ್ನು ತೆರವುಗೊಳಿಸಿದೆ. ಇದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಹಸಿಮರವೂ ತೆರವು: ಒಣಗಿದ ಮರದ ಜೊತೆಗೆ ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಹಸಿಮರವನ್ನೂ ಸಿಬ್ಬಂದಿ ತೆರವುಗೊಳಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.