
ಸಂತೇಮರಹಳ್ಳಿ: ‘ಸಾಮಾಜಿಕ ಸೇವಾ ಕಾರ್ಯಗಳಲ್ಲಿ ದುಗ್ಗಟ್ಟಿ ವೀರಭದ್ರಪ್ಪನವರ ಕಾರ್ಯ ನಿಷ್ಠೆ ಮೆಚ್ಚುವಂತದ್ದು’ ಎಂದು ಸಾಹಿತಿ ಗುಂಬಳ್ಳಿ ಬಸವರಾಜು ತಿಳಿಸಿದರು.
ಸಮೀಪದ ಗಂಗವಾಡಿಯ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನಪದ ರಂಗಮಂದಿರದಲ್ಲಿ ಗ್ರಾಮಸ್ಥರು ಶನಿವಾರ ಹಮ್ಮಿಕೊಂಡಿದ್ದ ಸಮಾಜ ಸೇವಕ ದುಗ್ಗಟ್ಟಿ ವೀರಭದ್ರಪ್ಪ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ದುಗ್ಗಟ್ಟಿ ವೀರಭದ್ರಪ್ಪ ನುಡಿದಂತೆ ನಡೆದು ಸಾವಿನಲ್ಲೂ ಸಾರ್ಥಕತೆ ಮೆರೆದರು. ಒಳ್ಳೆಯ ಆಲೋಚನೆ ಚಿಂತನೆಗಳೊಂದಿಗೆ ಸದಾ ಸಮಾಜಮುಖಿ ಚಿಂತನೆ ಇವರಲ್ಲಿತ್ತು. ರಸ್ತೆ ಸಂಪರ್ಕಗಳಿಲ್ಲದ ಗ್ರಾಮಗಳನ್ನು ಗುರುತಿಸಿ ಸರ್ಕಾರದ ಗಮನ ಸೆಳೆದು ಹಿಂದುಳಿದ ಗ್ರಾಮಗಳ ಅಭಿವೃದ್ಧಿಪಡಿಸಲು ಶ್ರಮಿಸಿದರು. ಧಾರ್ಮಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸೇರಿದಂತೆ ಶಿಕ್ಷಣ ಸಂಸ್ಥೆ ತೆರೆದು ಅನೇಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ದಾರಿ ದೀಪವಾದರು. ಹೀಗಾಗಿ ಅವರು ಜನ ಮಾನಸದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ’ ಎಂದು ತಿಳಿಸಿದರು.
ಗ್ರಾಮದ ಮುಖಂಡ ರವಿಗೌಡ ಮಾತನಾಡಿ, ದುಗ್ಗಟ್ಟಿ ವೀರಭದ್ರಪ್ಪನವರು ಸರಳತೆಯೊಂದಿಗೆ ಮೌಲ್ಯಯುತ ಜೀವನ ನಡೆಸಿದ್ದರು. ಗಂಗವಾಡಿ ಗ್ರಾಮದ ದೇವಸ್ಥಾನದ ಅಭಿವೃದ್ಧಿಯೊಂದಿಗೆ ಗ್ರಾಮದ ಬೆಳವಣಿಗೆಗೆ ಇವರ ಪ್ರಾಮಣಿಕ ಸೇವೆ ಅನನ್ಯವಾಗಿದೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳಲ್ಲಿ ಇವರ ಸೇವೆ ಜನಮಾನಸದಲ್ಲಿ ಉಳಿದುಕೊಂಡಿದೆ ಎಂದು ತಿಳಿಸಿದರು.
ರೇಚಂಬಳ್ಳಿ ಮಠದ ಚನ್ನಬಸವ ಸ್ವಾಮೀಜಿ, ಮಲ್ಲಿಕಾರ್ಜುನಸ್ವಾಮಿ, ಗಂಗಾಧರಸ್ವಾಮಿ, ಗ್ರಾಮಪಂಚಾಯಿತಿ ಸದಸ್ಯ ನಾಗರಾಜು, ರಾಮಚಂದ್ರ, ಸ್ವಾಮಿ, ಶಿವರುದ್ರಸ್ವಾಮಿ, ಕೃಷ್ಣೇಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.