ಕೊಳ್ಳೇಗಾಲ: ಇಲ್ಲಿನ ನಗರ ಸಭೆಯಲ್ಲಿ ‘ಎ’ ಖಾತೆ ಮತ್ತು ‘ಬಿ’ ಖಾತೆ ನೀಡುವಲ್ಲಿ ನಗರಸಭೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆ.ಆರ್.ಎಸ್ ಪಕ್ಷದ ಮುಖಂಡರು ನಗರಸಭೆ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರಸಭೆ ಮುಂದೆ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಕೆ.ಆರ್.ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಣೇಶ್ ಮಾತನಾಡಿ, ‘ಸಾರ್ವಜನಿಕರಿಗೆ ಖಾತೆ ಮಾಡಿಕೊಡುವಲ್ಲಿ ನಗರಸಭೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಮೂರು ತಿಂಗಳ ಅವಧಿಯೊಳಗೆ ಖಾತೆ ಮಾಡಬೇಕು ಎಂಬ ನಿಯಮವಿದ್ದರೂ, ಅಧಿಕಾರಿಗಳು ಸಾರ್ವಜನಿಕರಿಗೆ ಖಾತೆ ಮಾಡಿಕೊಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಪ್ರತಿ ದಿನವೂ ಜನರು ನಗರಸಭೆಗೆ ಅಲೆದಾಡುತ್ತಿದ್ದು, ಇದರಿಂದಾಗಿ ಅಸಮಾಧಾನ ಹೆಚ್ಚಾಗಿದೆ’ ಎಂದರು.
‘ಅಧಿಕಾರಿಗಳಿಗೆ ಈ ಸಂಬಂಧ ಸಮರ್ಪಕ ಮಾಹಿತಿ ಇಲ್ಲ. ನಗರಸಭೆ ಸದಸ್ಯರಿಗೆ ಮಾತ್ರ ಖಾತೆಗಳನ್ನು ಅಲ್ಲಿನ ಅಧಿಕಾರಿಗಳು ಮಾಡಿಕೊಡುತ್ತಿದ್ದಾರೆ. ಅದನ್ನು ಬಿಟ್ಟರೆ ಸಾರ್ವಜನಿಕರಿಗೆ ಯಾರಿಗೂ ಮಾಡುತ್ತಿಲ್ಲ. ಇದರಿಂದಾಗಿ ನಗರಸಭೆ ಅಧಿಕಾರಿಗಳು ಕೂಡಲೇ ಸಾರ್ವಜನಿಕರಿಗೆ ಖಾತೆ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಆರ್.ಎಸ್.ಪಕ್ಷದ ತಾಲ್ಲೂಕು ಅಧ್ಯಕ್ಷ ನವೀನ್, ಜಿಲ್ಲಾ ಕಾರ್ಯದರ್ಶಿ ಮಧು ನಾಯಕ್, ಜಿಲ್ಲಾ ಕಾರ್ಯದರ್ಶಿ ಜಯಶಂಕರ್, ಶಿವಶಂಕರ್, ತಾಲ್ಲೂಕು ಕಾರ್ಯದರ್ಶಿ ಕುಮಾರ್, ಚಂದ್ರಶೇಖರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಶಾಸ್ತ್ರೀ, ಸಿದ್ದಯ್ಯನಪುರ ರಾಜು ಇದ್ದರು.
ಈಗಾಗಲೇ ‘ಎ’ ಖಾತೆ ಹಾಗೂ ‘ಬಿ’ ಖಾತೆ ನೀಡಲಾಗುತ್ತಿದೆ. ಈಗಾಗಲೇ ‘ಬಿ’ ಖಾತೆಗೆ ಸುಮಾರು 500ಕ್ಕೂ ಹೆಚ್ಚು ಅರ್ಜಿಗಳು ಬಂದಿದೆ. 90ರಷ್ಟು ‘ಬಿ’ ಖಾತೆ ನೀಡಿದ್ದೇವೆ. ಇನ್ನು ಕೇವಲ 175 ಮಾತ್ರ ‘ಬಿ’ ಖಾತೆ ಮಾಡಬೇಕು. ಈ ತಿಂಗಳ ಅವಧಿ ಒಳಗೆ ಎಲ್ಲಾ ಖಾತೆಗಳನ್ನು ಮಾಡಿಕೊಡುತ್ತೇವೆ. ಅಧಿಕಾರಿಗಳ ಮೇಲೆ ಸಂಘ ಸಂಸ್ಥೆಯವರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪ್ರತಿನಿತ್ಯ ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಅವಮಾನ ಮಾಡುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ. ದಾಖಲಾತಿ ಇದ್ದರೆ ಮಾತ್ರ ನಾವು ಖಾತೆಗಳನ್ನು ಸರಿಯಾಗಿ ನೀಡುತ್ತಿವೆ ಇಲ್ಲದಿದ್ದರೆ ನೀಡುವುದಿಲ್ಲ. ಹಾಗಾಗಿ ಮುಂದಿನ ದಿನ ಅಧಿಕಾರಿಗಳ ಮೇಲೆ ವೈಯಕ್ತಿಕವಾಗಿ ಫೋಟೋ ಹಾಕಿ ಪ್ರತಿಭಟನೆ ಮಾಡಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಪೌರಾಯುಕ್ತ ರಮೇಶ್ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.