ಗುಂಡ್ಲುಪೇಟೆ: ಹೊಸದಾಗಿ ಇ ಟೆಂಡರ್ ಕರೆದು ಮೀನುಗಾರರಿಗೆ ಅವಕಾಶ ಮಾಡಿಕೊಡಬೇಕು ಎಂಬ ಸರ್ಕಾರದ ಆದೇಶದಿಂದ ರಾಜ್ಯದಲ್ಲಿ ಮೀನುಗಾರರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಹೇಳಿದರು.
ಪಟ್ಟಣದ ದೊಡ್ಡಕೆರೆ ಅಂಗಳದಲ್ಲಿ ₹ 31 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮೀನುಗಾರಿಕೆ ಸಹಾಯಕ ನಿರ್ದೇಶಕರ ನೂತನ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರ ಬಳಿ ಚರ್ಚಿಸಲಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿಯೂ ತಡೆಯಾಜ್ಞೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ ಕಾನೂನು ಪ್ರಕಾರ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿರುವ ಮೀನುಗಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ವರ್ಷದ ಹಿಂದೆಯೇ ಮನೆಗಳನ್ನು ನೀಡುವಂತೆ ಮನವಿ ಮಾಡಲಾಗಿತ್ತು. ಅದರನ್ವಯ ವಿಧಾನ ಸಭಾ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ 30 ಮನೆಗಳು ಮಂಜೂರಾಗಿದ್ದು, ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ. ಜೊತೆಗೆ ಮೀನುಗಾರಿಕೆಗೆ ಅನುಕೂಲವಾಗಲೆಂದು ಸರ್ಕಾರ ಹೊಸ ಯೋಜನೆಗಳನ್ನು ಕೂಡ ಜಾರಿಗೆ ತರಲು ಉದ್ದೇಶಿಸಿದೆ ಎಂದು ಹೇಳಿದರು.
ಉಪ್ಪಾರ ಸಮುದಾಯ ಮುಖಂಡ ಕೃಷ್ಣಸ್ವಾಮಿ ಮಾತನಾಡಿ, ಮೀನುಗಾರರ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಬರುವ ಸಣ್ಣಪುಟ್ಟ, ಮಳೆಯಾಶ್ರಿತ ಮತ್ತು ಏತನೀರಾವರಿ ಕೆರೆಗಳನ್ನು ಈ ಹಿಂದೆ ಇದ್ದ ನಿಯಮದಂತೆ ಸಹಕಾರ ಸಂಘದವರಿಗೆ ನೀಡಬೇಕು. ಇ ಟೆಂಡರ್ ಮೂಲಕ ಏತ ನೀರಾವರಿ ಕೆರೆಗಳನ್ನು ಹರಾಜು ಮಾಡುವಂತೆ ಸರ್ಕಾರ ಹೊರಡಿಸಿರುವ ಆದೇಶದಿಂದ ಮೀನುಗಾರರಿಗೆ ಬಹಳ ತೊಂದರೆಯಾಗಲಿದೆ. ಮೀನುಗಾರಿಕೆಯನ್ನೇ ನಂಬಿ ಹಲವು ಮಂದಿ ಜೀವನ ನಡೆಸುತ್ತಿದ್ದು, ಏತ ನೀರಾವರಿ ಕೆರೆಗಳನ್ನು ಇ ಟೆಂಡರ್ ಮಾಡುವುದರಿಂದ ಅವುಗಳು ಹಣವಂತರ ಪಾಲಾಗಿ ನಮ್ಮ ಕುಟುಂಬಗಳು ಬೀದಿಗೆ ಬೀಳಲಿವೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮೀನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಯಮ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಮೀನುಗಾರಿಕೆ ಇಲಾಖೆ ವತಿಯಿಂದ 11 ಫಲಾನುಭವಿಗಳಿಗೆ ಮೀನುಗಾರಿಕೆಯ ಸಲಕರಣೆಗಳ ಕಿಟ್‌ಗಳನ್ನು ಶಾಸಕ ವಿತರಿಸಿದರು.
ಪುರಸಭೆ ಅಧ್ಯಕ್ಷ ಮಧುಸೂಧನ್, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಎಪಿಎಂಸಿ ಅಧ್ಯಕ್ಷ ರಂಗೂಪುರ ನಾಗರಾಜು, ಹಾಪ್ ಕಾಮ್ಸ್ ಅಧ್ಯಕ್ಷ ನಾಗೇಶ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿವೇಕ್, ಪಿಆರ್‌ಐಡಿ ಸಹಾಯಕ ನಿರ್ದೇಶಕಿ ಸಿಂಧೂ, ಅಣ್ಣೂರುಕೇರಿ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ಮೂರ್ತಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಉಮಾಪತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಮೀನುಗಾರಿಕೆ ಸಹಕಾರ ಸಂಘದ ಅಧ್ಯಕ್ಷೆ ಸರಸ್ವತಿ, ಯೂತ್ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.