ADVERTISEMENT

ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು: ಸಚಿವ

ಮಹದೇಶ್ವರಬೆಟ್ಟದಲ್ಲಿ ಮಲೆ ಮಹದೇಶ್ವರಸ್ವಾಮಿ ಕೃಪಾ ಎಜುಕೇಶನ್ ಸಂಸ್ಥೆಯ ಸಾಂಸ್ಕೃತಿಕೋತ್ಸವ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 5:06 IST
Last Updated 4 ಸೆಪ್ಟೆಂಬರ್ 2022, 5:06 IST
ಮಹದೇಶ್ವರ ಬೆಟ್ಟದಲ್ಲಿ 2022ನೇ ಸಾಲಿನ ಸಾಂಸ್ಕೃತಿಕೋತ್ಸವ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಉದ್ಘಾಟಿಸಿದರು. ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಇತರರು ಇದ್ದಾರೆ
ಮಹದೇಶ್ವರ ಬೆಟ್ಟದಲ್ಲಿ 2022ನೇ ಸಾಲಿನ ಸಾಂಸ್ಕೃತಿಕೋತ್ಸವ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಉದ್ಘಾಟಿಸಿದರು. ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಇತರರು ಇದ್ದಾರೆ   

ಮಹದೇಶ್ವರ ಬೆಟ್ಟ: ‘ಮಕ್ಕಳು ಶಿಕ್ಷಣ ಮೊಟಕುಗೊಳಿಸಿ ದೂಪ ಮಾರಾಟಕ್ಕೆ ಹೋಗುವುದು ಸರಿಯಲ್ಲ. ಎಲ್ಲ ಮಕ್ಕಳು ಶಿಕ್ಷಣ ಪಡೆಯಲು ಮುಂದಾಗಬೇಕು’ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶನಿವಾರ ಹೇಳಿದರು.

ಮಹದೇಶ್ವರ ಬೆಟ್ಟದ ಶ್ರೀ ಮಲೆ ಮಹದೇಶ್ವರಸ್ವಾಮಿ ಕೃಪಾ ಎಜುಕೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2022ನೇ ಸಾಲಿನ ಸಾಂಸ್ಕೃತಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೀಪ (ವಿದ್ಯುತ್), ರಸ್ತೆ, ಮೂಲ ಸೌಕರ್ಯ ಇಲ್ಲದ ಜಾಗದಲ್ಲಿ ಮಹದೇಶ್ವರರು ಪಾದ ಸ್ಪರ್ಶಿಸಿ ತಪಸ್ಸು ಮಾಡಿದ ಫಲವಾಗಿ ಈ ಭಾಗ ಅಭಿವೃದ್ಧಿ ಹೊಂದುತ್ತಿದೆ. ಕಾಡಂಚಿನ ಭಾಗದ ಶಾಲೆಯಲ್ಲಿ ಶಿಕ್ಷಣ ವಿಚಾರದಲ್ಲಿ ಉದಾಸೀನ ಮಾಡಬಾರದು. ಹೀಗಾಗಿ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಶೈಕ್ಷಣಿಕವಾಗಿ ಜ್ಞಾನ ತುಂಬುವ ಕಾರ್ಯವನ್ನು ಸರ್ಕಾರ ಮಾಡಲಿದೆ’ ಎಂದರು.

1932ರಲ್ಲೇ ಶಾಲೆ ಆರಂಭಿಸಿರುವ ಸಾಲೂರು ಮಠ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿದೆ. ಮಠದಿಂದ ಹಲವು ಅಭಿವೃದ್ಧಿ ಕಾರ್ಯಮಾಡುತ್ತಿರುವುದು ಶ್ಲಾಘನೀಯ. ಸಾಮಾಜಿಕ ಕಳಕಳಿಯುಳ್ಳ ಸೇವಾ ಕಾರ್ಯ ಜರುಗುತ್ತಿದ್ದು, ಸಂಸ್ಕೃತ ಪಾಠ ಶಾಲೆ ಆರಂಭಿಸಿರುವುದೂ ಉತ್ತಮ ಬೆಳವಣಿಗೆ’ ಎಂದರು.

ADVERTISEMENT

ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಮಾತನಾಡಿ, ‘ಕಾಡಂಚಿನ ಗ್ರಾಮಗಳಲ್ಲಿರುವ ಶಾಲೆಗಳ ಅಭಿವೃದ್ಧಿ ಪಡಿಸಿ ಶೈಕ್ಷಣಿಕವಾಗಿ ಅಗತ್ಯ ಸೌಕರ್ಯ ಒದಗಿಸಬೇಕು. ಎಲ್ಲರೂ ಶಿಕ್ಷಣ ಪಡೆಯಲು ಮುಂದಾಗಬೇಕು’ ಎಂದರು.

ಶಾಲಾ ವಿದ್ಯಾರ್ಥಿಗಳು ನೃತ್ಯಗಳು, ನಾಟಕ ಪ್ರದರ್ಶನಗಳ ಮೂಲಕ ಸಂಸ್ಕೃತಿಕೋತ್ಸವಕ್ಕೆ ಮೆರಗು ತೆಂದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಹಾಗೂ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.

ಗುಂಡೇಗಾಲ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹೊಂಡರಬಾಳು ಮಠದ ನೀಲಕಂಠಸ್ವಾಮೀಜಿ, ಬರಗೂರು ದ್ರೋಣಗಿರಿ ಮಠದ ಅಶೋಕ ಸ್ವಾಮೀಜಿ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ ದೇವಿ, ಡಿಡಿಪಿಐ ಮಂಜುನಾಥ್, ಡಿಡಿಪಿಯು ನಾಗಮಲ್ಲೇಶ್, ಬಿಇಒ ಶಿವರಾಜು, ಉಪಕಾರ್ಯದರ್ಶಿ ಬಸವರಾಜಪ್ಪ, ಲೆಕ್ಕ ಸೂಪರಿಂಟೆಂಡೆಂಟ್‌ ಪ್ರವೀಣ್ ಪಾಟೇಲ್, ತಹಶೀಲ್ದಾರ್ ಅನಂದಯ್ಯ, ಇನ್‌ಸ್ಪೆಕ್ಟರ್‌ ಬಸವರಾಜು, ಪ್ರಾಂಶುಪಾಲ ಪ್ರಭುಸ್ವಾಮಿ, ಕೊಳ್ಳೇಗಾಲ ಸಂಸ್ಥೆ ಸಂಸ್ಥಾಪಕ ಡಾ.ದತ್ತೇಶ್ ಕುಮಾರ್ ಸೇರಿದಂತೆ ಇತರರು ಇದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವೀಕ್ಷಣೆ: ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುವುದಕ್ಕೂ ಮೊದಲು ಸಚಿವ ನಾಗೇಶ್‌ ಅವರು ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದರು. ಕಚೇರಿ ಆವರಣದಲ್ಲಿರುವ ಬುದ್ದ, ಬಸವ, ಡಾ.ಬಿ.ಆರ್.ಅಂಬೇಡ್ಕರ್, ಜ್ಯೋತಿಬಾಫುಲೆ, ಸಾವಿತ್ರಿ ಬಾಯಿಫುಲೆ ಪುತ್ಥಳಿಗಳನ್ನು ಹಾಗೂ ಅಲ್ಲಿನ ಉದ್ಯಾನವನ್ನು ವೀಕ್ಷಣೆ ಮಾಡಿದರು.

‘ಇಂತಹ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ನಾನು ನೋಡಿಯೇ ಇಲ್ಲ. ಈ ಕಚೇರಿ ಹಾಗೂ ಇಲ್ಲಿನ ಪರಿಸರ ರಾಜ್ಯಕ್ಕೆ ಮಾದರಿಯಾಗಿದೆ. ಅದರಲ್ಲೂ ಸರ್ಕಾರ ಅನುದಾನವನ್ನು ಬಳಸದೆ ಶಿಕ್ಷಕರು ಮತ್ತು ದಾನಿಗಳ ಸಹಾಯದಿಂದ ನಿರ್ಮಾಣ ಮಾಡಿರುವುದು ಬಹಳ ಸಂತೋಷ’ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ದತ್ತೇಶ್ ಕುಮಾರ್, ಡಿಡಿಪಿಐ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್, ಡಯಟ್ ಪ್ರಾಂಶುಪಾಲ ಪಾಂಡು, ಅಕ್ಷರ ದಾಸೋಹ ರಂಗಸ್ವಾಮಿ, ಆದರ್ಶ ಮುಖ್ಯ ಶಿಕ್ಷಕಿ ಮಂಜುಳ, ಪಿ.ಎಸ್.ಐ ಚೇತನ್ ಸೇರಿದಂತೆ ಅನೇಕರು ಇದ್ದರು.

ಮುರುಘಾ ಶ್ರೀ ಪ್ರಕರಣ: ನಿಷ್ಪಕ್ಷಪಾತ ತನಿಖೆ

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾಗೇಶ್‌, ‘ಚಿತ್ರದುರ್ಗದ ಮುರುಘಾ ಶ್ರೀಗಳ ವಿಚಾರದಲ್ಲಿ ಸರ್ಕಾರದಿಂದ ಯಾವುದೇ ಲೋಪ ಆಗುತ್ತಿಲ್ಲ. ಗೃಹ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದೆ. ಕೆಲವರು ಎಲ್ಲದಕ್ಕೂ ಆರೋಪ ಮಾಡುತ್ತಾರೆ’ ಎಂದರು.

‘ತಾಲ್ಲೂಕಿನಲ್ಲಿ ಅನೇಕ ಶಾಲೆಗಳು ದುರಸ್ತಿಯಲ್ಲಿವೆ. ಶಾಲೆಗಳ ದುರಸ್ತಿ ಪಟ್ಟಿ ನೀಡಿದರೆ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು. ಸೈಕಲ್, ಕೊಠಡಿ, ಪೀಠೋಪಕರಣ ಸೇರಿದಂತೆ ಸಾಕಷ್ಟು ಅನುದಾನ ಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.