ADVERTISEMENT

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗೆ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 29 ಮೇ 2020, 16:56 IST
Last Updated 29 ಮೇ 2020, 16:56 IST
ವಿದ್ಯಾರ್ಥಿನಿಯೊಬ್ಬರ ಮನೆಗೆ ಭೇಟಿ ನೀಡಿ ಸಮಾಲೋಚನೆಯಲ್ಲಿ ತೊಡಗಿರುವ ಅಧಿಕಾರಿಗಳು
ವಿದ್ಯಾರ್ಥಿನಿಯೊಬ್ಬರ ಮನೆಗೆ ಭೇಟಿ ನೀಡಿ ಸಮಾಲೋಚನೆಯಲ್ಲಿ ತೊಡಗಿರುವ ಅಧಿಕಾರಿಗಳು   

ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ಲಕ್ಷ್ಮಿಪತಿ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ, ಪರೀಕ್ಷಾ ಸಿದ್ಧತೆಯಲ್ಲಿ ತೊಡಗಿದ್ದ ಮಕ್ಕಳನ್ನು ಮಾತನಾಡಿಸಿದರು.

ಹರದನಹಳ್ಳಿ ಹಾಗೂ ಬಂಡಿಗೆರೆಯ 10ಕ್ಕೂ ಹೆಚ್ಚು ‌ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಅಧಿಕಾರಿಗಳು, ವಿದ್ಯಾರ್ಥಿಗಳು ಮಾಡುತ್ತಿದ್ದ ವಿದ್ಯಾಭ್ಯಾಸದ ಚಟುವಟಿಕೆಗಳನ್ನು ಗಮನಿಸಿದರು.

ಪರೀಕ್ಷೆ ಹೊಸ ವೇಳಾಪಟ್ಟಿ, ಚಂದನ ವಾಹಿನಿ ಮತ್ತು ಮಕ್ಕಳವಾಣಿಯಲ್ಲಿ ಪ್ರಸಾರವಾಗುತ್ತಿರುವ ಪರೀಕ್ಷಾ ಕೇಂದ್ರಿತ ಪಾಠಗಳ ಕುರಿತು, ರಜಾ ಅವಧಿಯಲ್ಲಿ ಓದಬೇಕಾದ ವಿಷಯಗಳ ಬಗ್ಗೆ ಸಲಹೆ ನೀಡಿದರು.

ADVERTISEMENT

‘ಓದಿದ್ದನ್ನು ಬರೆದು ಅಭ್ಯಾಸ ಮಾಡಲು, ಅರ್ಥವಾಗದ ಮತ್ತು ಕಠಿಣವೆನಿಸುವ ವಿಷಯಗಳ ಬಗ್ಗೆ ತರಗತಿ ವಿಷಯ ಶಿಕ್ಷಕರ ಮಾರ್ಗದರ್ಶನ ಪಡೆಯಿರಿ’ ಎಂದು ಅಧಿಕಾರಿಗಳು ಹೇಳಿದರು.ಯಾವುದೇ ಭಯವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸಿದ್ಧರಾಗುವಂತೆ ಧೈರ್ಯ ತುಂಬಿದರು.

ಮಕ್ಕಳ ವ್ಯಾಸಂಗಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪೋಷಕರಿಗೂ ಅರಿವು ಮೂಡಿಸಿದರು. ಪುನರ್‌ಮನನ ತರಗತಿಗಳಿಗಾಗಿ ಶಾಲೆಗೆ ಹಾಜರಾಗುವ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಹೋಗುವಾಗ ಮಕ್ಕಳ ಆರೋಗ್ಯ ರಕ್ಷಣೆಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಜಾಗೃತಿ ಮೂಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಕನ್ನಡ ವಿಷಯ ಪರಿವೀಕ್ಷಕ ಎ.ಜಿ.ಬಸವಣ್ಣ, ಸಮಗ್ರ ಶಿಕ್ಷಣ ಅಭಿಯಾನದ ವೇದಾವತಿ, ಶಿಕ್ಷಣ ಸಂಯೋಜಕ ಸಿದ್ದಮಲ್ಲಪ್ಪ, ಹರದನಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಜಯಸ್ವಾಮಿ, ಶಿಕ್ಷಕರಾದ ಪರಶಿವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.