ADVERTISEMENT

ಚಾಮರಾಜನಗರ: ಜಿಲ್ಲೆಯಾದ್ಯಂತ ಈದ್ ಸಂಭ್ರಮ, ಸಾಮೂಹಿಕ ಪ್ರಾರ್ಥನೆ

ತಿಂಗಳ ಉಪವಾಸಕ್ಕೆ ತೆರೆ; ಅಲ್ಲಾಹುವಿನ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2025, 15:21 IST
Last Updated 31 ಮಾರ್ಚ್ 2025, 15:21 IST
ಚಾಮರಾಜನಗರದ ಸೋಮವಾರಪೇಟೆಯ ಅಹಲೆ ಹದೀಶ ಈದ್ಗಾ ಮೈದಾನದಲ್ಲಿ ಸೋಮವಾರ ಈದ್ ಉಲ್‌ ಫಿತ್ರ್ ಅಂಗವಾಗಿ ಮುಸ್ಲಿಮರು ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು
ಚಾಮರಾಜನಗರದ ಸೋಮವಾರಪೇಟೆಯ ಅಹಲೆ ಹದೀಶ ಈದ್ಗಾ ಮೈದಾನದಲ್ಲಿ ಸೋಮವಾರ ಈದ್ ಉಲ್‌ ಫಿತ್ರ್ ಅಂಗವಾಗಿ ಮುಸ್ಲಿಮರು ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು   

ಚಾಮರಾಜನಗರ: ಜಿಲ್ಲೆಯಾದ್ಯಂತ ಸೋಮವಾರ ಈದ್‌ ಉಲ್ ಫಿತ್ರ್ ಸಂಭ್ರಮ ಮನೆ ಮಾಡಿತ್ತು. ಒಂದು ತಿಂಗಳು ಕಠಿಣ ಉಪವಾಸ ಆಚರಿಸಿದ್ದ ಮುಸ್ಲಿಮರು ಉಪವಾಸಕ್ಕೆ ತೆರೆ ಎಳೆದು ಸಂಭ್ರಮದಿಂದ ಹಬ್ಬ ಆಚರಿಸಿದರು.

ಬೆಳಿಗ್ಗೆ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಗರದ ಎಲ್ಲ ಮಸೀದಿಗಳಲ್ಲಿ ಈದ್‌ ನಿಮಿತ್ತ ವಿಶೇಷ ನಮಾಜ್ ಸಲ್ಲಿಸಲಾಯಿತು.

ಧರ್ಮಗುರುಗಳು ರಂಜಾನ್ ಮಾಸದ ಮಹತ್ವವನ್ನು ತಿಳಿಸಿದರು.

ADVERTISEMENT

‘ಅಲ್ಲಾಹುವಿನ ಅಣತಿಯಂತೆ ಜೀವನದಲ್ಲಿ ಉತ್ತಮ ಕಾರ್ಯಗಳಲ್ಲಿ ನಿರತರಾಗಬೇಕು, ನೆರೆ ಹೊರೆಯವರು ಸಹಿತ ಸಮಾಜದ ಪ್ರತಿಯೊಬ್ಬರ ಜೊತೆ ಸೌಹಾರ್ದಯುತವಾಗಿ ಬದುಕಬೇಕು. ನಡೆ– ನುಡಿ ಶುದ್ಧವಾಗಿರಬೇಕು, ಪ್ರೀತಿ– ವಿಶ್ವಾಸ ತೋರಬೇಕು, ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು’ ಎಂದು ಮೌಲ್ವಿಗಳು ಕರೆ ನೀಡಿದರು.

ಸಾಮೂಹಿಕ ಪ್ರಾರ್ಥನೆ ವೇಳೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಹಾಜರಿದ್ದು ಹಬ್ಬದ ಶುಭಾಶಯ ಕೋರಿದರು.

ಈ ಸಂದರ್ಭ ಶಾಸಕರನ್ನು ಈದ್ಗಾ ನಿರ್ವಹಣಾ ಸಮಿತಿ ವತಿಯಿಂದ ಗೌರವಿಸಿ, ಹೆಚ್ಚಿನ ಅನುದಾನ ಮಂಜೂರಾತಿ ಕೋರಿ ಈದ್ಗಾ ಅಭಿವೃದ್ಧಿ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಮಹಿಳೆಯರಿಗೂ ನಮಾಜ್‌ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭ ಜಾಮಿಯಾ ಮಸೀದಿ ಅಧ್ಯಕ್ಷ ಅಕ್ರಂ ಪಾಷಾ, ಕಾರ್ಯದರ್ಶಿ ಆಸೀಫ್ ಉಲ್ಲಾ, ಮುಖಂಡರಾದ ನಯಾಜ್ ಅಹ್ಮದ್, ಮಹಮ್ಮದ್, ಜಾವೀದ್ ಸೇರಿದಂತೆ ಹಲವರು ಇದ್ದರು.

ಖರೀದಿ ಭರಾಟೆ ಜೋರು: ಈದ್‌ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ಮುನ್ನಾ ದಿನವಾದ ಭಾನುವಾರ ನಗರದ ಬಟ್ಟೆ ಮಾರಾಟ ಮಳಿಗೆಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಿದರು.

ಮಾಂಸಕ್ಕೆ ಬೇಡಿಕೆ: ಹಬ್ಬಕ್ಕೆ ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿತ್ತು, ನಗರದ ಮಾಂಸದ ಅಂಗಡಿಗಳಲ್ಲಿ ಖರೀದಿ ಜೋರಾಗಿತ್ತು. ಹೆಚ್ಚಿನವರು ಮುಂಚಿತವಾಗಿ ಗ್ರಾಮಾಂತರ ಭಾಗಗಳಿಂದ ಕುರಿ,‌ ಮೇಕೆ, ಟಗರು ಖರೀದಿಸಿದ್ದರು.

ತರಹೇವಾರಿ ಖಾದ್ಯಗಳು: ಹಬ್ಬಕ್ಕೆ ಬಿರಿಯಾನಿ ಸಹಿತ ತರಹೇವಾರಿ ಮಾಂಸದ ಖಾದ್ಯಗಳನ್ನು ಸಿದ್ಧಪಡಿಸಿದ್ದ ಮುಸ್ಲಿಮರು ನೆರೆಹೊರೆಯವರೊಂದಿಗೆ ಸೇರಿ ಭೋಜನ ಸವಿದರು.

ಬಡವರಿಗೆ, ಅಶಕ್ತರಿಗೆ ಜಕಾತ್ ಸಹಿತ, ಆಹಾರ ಪದಾರ್ಥಗಳ ಕಿಟ್ ಹಂಚಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.