ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳು ಮತ್ತು ಪಟ್ಟಣದಲ್ಲಿ ಶುಕ್ರವಾರ ಪ್ರವಾದಿ ಮುಹಮ್ಮದರ ಜನ್ಮದಿನದ ನೆಪದಲ್ಲಿ ಮುಸ್ಲಿಮರು ಈದ್-ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಬಡವಾಣೆಗಳ ಮನೆಗಳ ಮುಂದೆ ಮುಸ್ಲಿಮರು ಮೆಕ್ಕಾ ಮಸೀದಿ ಪ್ರತಿಕೃತಿಗಳನ್ನು ಕಟ್ಟಿ, ವಿದ್ಯುತ್ ದೀಪಗಳಿಂದ ಮನಮೋಹಕವಾಗಿ ಅಲಂಕರಿಸಿ ಸಂತಸಪಟ್ಟರು. ಮಸೀದಿಯ ಮೀನಾರುಗಳಲ್ಲಿ ಬಣ್ಣಬಣ್ಣದ ಬಲ್ಬಗಳಿಂದ ಮಾಡಿದ್ದ ದೀಪಾಲಂಕಾರ ಗಮನ ಸೆಳೆಯಿತು. ಬೆಳಿಗ್ಗೆ ಮತ್ತು ಸಂಜೆ ಜಾಮೀಯಾ ಮಸೀದಿಯಲ್ಲಿ ಪವಿತ್ರ ಕುರಾನ್ ಪಠಣ ನಡೆಯಿತು.
ಮೌಲ್ವಿ ಅಬ್ರಾರ್ ಅಹಮ್ಮದ್ ಮಾತನಾಡಿ, ‘ಮಾನವೀಯ ಸಾಕಾರಮೂರ್ತಿ ಪ್ರವಾದಿ ಮುಹಮ್ಮದರು 570ನೇ ಇಸವಿಯಲ್ಲಿ ಸೌದಿ ಅರೆಬಿಯಾದ ಮೆಕ್ಕಾ ನಗರದಲ್ಲಿ ಜನಿಸಿದರು. ಹಿಂಸೆ, ಅನ್ಯಾಯ, ದೌರ್ಜನ್ಯ, ಕಪಟತನ ಮತ್ತು ಮೋಸದಿಂದ ಮನುಕುಲ ಸ್ವನಾಶ ಆಗಲಿರುವ ಬಗ್ಗೆ ಎಚ್ಚರಿಸಿದರು. ತಾವೇ ಸ್ವತಃ ಮಾದರಿ ಎಂಬಂತೆ ಬದುಕಿ ತೋರಿಸಿದರು. ಅವರ ಜನ್ಮ ದಿನವೇ ಅವರು ಇಹಲೋಕ ತ್ಯಜಿಸಿದ ದಿನವೂ ಆಗಿರುವುದು ಮತ್ತೊಂದು ವಿಶೇಷ’ ಎಂದರು.
ಇಸ್ಲಾಮಿಕ್ ಕ್ಯಾಲೆಂಡರ್‌ನ 3ನೇ ಮಾಸ ರಬೀವುಲ್ ಅವ್ವಲ್ನ 12ನೇ ದಿನ. ಮುಸ್ಲಿಮರ ಪಾಲಿಗೆ ಸಡಗರದ ದಿನ. ಅಂದು ಪ್ರವಾದಿ ಜನ್ಮದಿನದ ಅಂಗವಾಗಿ ಮುಹಮ್ಮದ್ ಅವರನ್ನು ಸ್ಮರಿಸುತ್ತ ಹೊಸ ಬಟ್ಟೆ ಧರಿಸಿ, ಘೋಷಣೆ ಕೂಗುತ್ತ, ದಾನ ಮಾಡಿ, ಸಿಹಿ ಹಂಚುವ ಮೂಲಕ ಹಬ್ಬದ ಹಿಗ್ಗು ಹೆಚ್ಚುತ್ತದೆ ಎನ್ನುತ್ತಾರೆ ಮಾಂಬಳ್ಳಿ ಮುಸ್ಲಿಂ ಮುಖಂಡ ಶಕೀಲ್ ಅಹ್ಮದ್.
ರೋಗಿಗಳಿಗೆ ಹಣ್ಣು ವಿತರಣೆ:
ಮುಖಂಡ ನಯಾಜ್ ಖಾನ್ ಮಾತನಾಡಿ, ‘ಮಸೀದಿ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಸರ್ವರ ಏಳಿಗೆ ಮತ್ತು ಸಹಮತದಲ್ಲಿ ಒಳಿತನ್ನು ಬಯಸಬೇಕು. ಎಲ್ಲ ಮತ ಧರ್ಮಗಳನ್ನು ಗೌರವಿಸಬೇಕು ಎಂಬುದು ಹಬ್ಬದ ಆಚರಣೆಯ ಭಾಗವಾಗಿದೆ’ ಎಂದರು.
ಪ.ಪಂ. ಸದಸ್ಯ ಮುನವ್ವರ್ ಬೇಗ್, ಮುಖಂಡರಾದ ಇರ್ಫಾನ್, ಜಮೀರ್ ಜಾವೀದ್, ರಿಜ್ವಾನ್, ಇಲಿಯಾಜ್ ಅಹಮ್ಮದ್, ಜಮೀರ್, ಫಯಾಜ್ ಬೇಗ್, ನವಾಬ್ ಬೇಗ್, ಸಲೀಂ, ಆಜಮ್, ತನ್ವೀರ್ ಷರೀಫ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.