ADVERTISEMENT

ಕಾಂಗ್ರೆಸ್‌ ಹಗುರ ಮಾತಿಗೆ ಬೆಳಗಾವಿಯಲ್ಲಿ ಉತ್ತರಿಸುವೆ: ಯಡಿಯೂರಪ್ಪ

ರಘು ಕೌಟಿಲ್ಯ ಪರ ಪ್ರಚಾರ, ಕಾಂಗ್ರೆಸ್‌ ವಿರುದ್ಧ ಬಿ.ಎಸ್‌.ಯಡಿಯೂರಪ್ಪ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 12:51 IST
Last Updated 5 ಡಿಸೆಂಬರ್ 2021, 12:51 IST
ಸಂತೇಮರಹಳ್ಳಿಯಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ರಘು ಕೌಟಿಲ್ಯ ಪರವಾಗಿ ಅಣಕು ಮತದಾನ ಮಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಸೇರಿದಂತೆ ಹಲವು ಮುಖಂಡರು ಇದ್ದರು
ಸಂತೇಮರಹಳ್ಳಿಯಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ರಘು ಕೌಟಿಲ್ಯ ಪರವಾಗಿ ಅಣಕು ಮತದಾನ ಮಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಸೇರಿದಂತೆ ಹಲವು ಮುಖಂಡರು ಇದ್ದರು   

ಸಂತೇಮರಹಳ್ಳಿ: ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹಗುರ ಮಾತುಗಳಿಗೆ ನಾನು ಪ್ರತಿಕ್ರಿಯಿಸಲು ಹೋಗುವುದಿಲ್ಲ. ಇದಕ್ಕೆ ಮತದಾರರಾದ ನೀವು ವಿಧಾನ ಪರಿಷತ್‌ ಚುನಾವಣೆಯಲ್ಲಿ ಇದಕ್ಕೆ ಉತ್ತರ ನೀಡಬೇಕು’ ಎಂದು ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷದ ಬೆಂಬಲಿಗರು, ಕಾರ್ಯಕರ್ತರಿಗೆ ಭಾನುವಾರ ಹೇಳಿದರು.

ಸಂತೇಮರಹಳ್ಳಿಯಲ್ಲಿ ಪಕ್ಷದ ಅಭ್ಯರ್ಥಿ ರಘು ಕೌಟಿಲ್ಯ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ವಿಧಾನ ಪರಿಷತ್ತಿನ 25 ಸ್ಥಾನಗಳ ಪೈಕಿ 20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದೇವೆ. 15ರಿಂದ 16 ಸ್ಥಾನಗಳಲ್ಲಿ ಖಚಿತವಾಗಿ ಗೆಲ್ಲುತ್ತೇವೆ.ರಘು ಕೌಟಿಲ್ಯ ಸೇರಿದಂತೆ ಇತರ 15 ಅಭ್ಯರ್ಥಿಗಳು ಗೆದ್ದ ನಂತರ ಬೆಳಗಾವಿ ಅಧಿವೇಶನದಲ್ಲಿ ನಾನು ಮಾತನಾಡುತ್ತೇನೆ. ಕಾಂಗ್ರೆಸ್‌ನ ರಾಜಕೀಯ ದೊಂಬರಾಟ ಇನ್ನು ಮುಂದೆ ನಡೆಯುವುದಿಲ್ಲ’ ಎಂದು ಹೇಳಿದರು.

‘ಹಿಂದೆ ಕಾಂಗ್ರೆಸ್‌ನವರು ಹಣ, ಹೆಂಡ, ಜಾತಿ, ತೋಳ್ಬಲಗಳಿಂದ ಚುನಾವಣೆ ಗೆಲ್ಲುತ್ತಿದ್ದರು. ಈಗ ಕಾಂಗ್ರೆಸ್‌ಗೆ ವಿಳಾಸವೇ ಇಲ್ಲ. ಮೋದಿ ಅವರು ಪ್ರಧಾನಿ ಆದ ಮೇಲೆ ಕಾಂಗ್ರೆಸ್‌ ದೂಳೀಪಟವಾಗಿದೆ. 26 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್‌ ಸ್ವಲ್ಪ ಉಸಿರಾಡುತ್ತಿದೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮೂರು ಬಾರಿ ಹಿಂದೆ ಮುಂದೆ ನೋಡುವ ಈಗಿನ ಪರಿಸ್ಥಿತಿಯಲ್ಲಿ, ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾನೆ. ರಾಜೀನಾಮೆ ನೀಡಿದ ನಂತರ ಮನೆಯಲ್ಲೇ ಕುಳಿತುಕೊಳ್ಳಬಹುದು ಎಂದು ಕಾಂಗ್ರೆಸ್‌ನವರು ಅಂದುಕೊಂಡಿದ್ದರು. ಅವತ್ತಿನಿಂದ ನಾನು ಮನೆ ಸೇರಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140 ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಅದಕ್ಕಾಗಿ ಪ್ರವಾಸ ಮಾಡುತ್ತೇನೆ. ಮತ್ತೆ ನಿಮ್ಮನ್ನು ಬಂದು ನೋಡುತ್ತೇನೆ’ ಎಂದು ಯಡಿಯೂರಪ್ಪ ಅವರು ಹೇಳಿದರು.

ಏಕಾಂಗಿ ಸ್ಪರ್ಧೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಮಾತನಾಡಿ, ‘ಮೈಸೂರು–ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಲಾಗಿದೆ ಎಂಬ ಮಾತುಗಳೆಲ್ಲ ಕೇಳಿಬರುತ್ತಿವೆ. ಅದು ಶುದ್ಧ ಸುಳ್ಳು. ಬಿಜೆಪಿ ಏಕಾಂಗಿಯಾಗಿಯೇ ಸ್ಪರ್ಧಿಸುತ್ತಿದೆ’ ಎಂದು ಹೇಳಿದರು.

‘ರಘು ಕೌಟಿಲ್ಯ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಕಳೆದ ಬಾರಿಯೇ ಅವರು ಗೆಲ್ಲಬೇಕಿತ್ತು. ಆದರೆ, ಮತದಾರರು ಮಾಡಿದ ತಪ್ಪಿನಿಂದಾಗಿ ಹೆಚ್ಚು ಮತಗಳು ಅಸಿಂಧುವಾಗಿ ಅವರು ಕಡಿಮೆ ಅಂತರದಿಂದ ಸೋಲು ಅನುಭವಿಸಬೇಕಾಯಿತು. ಈ ಬಾರಿ ಆ ರೀತಿ ಆಗಬಾರದು’ ಎಂದರು.

ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಮಾತನಾಡಿ, ‘ಯಡಿಯೂರಪ್ಪ ಅವರು ಪ್ರತಿಯೊಂದು ವರ್ಗದ ಜನರನ್ನು ಗುರುತಿಸಿ ಅವಕಾಶ ಮಾಡಿಕೊಡುತ್ತಾರೆ. ರಘು ಅವರಿಗೆ ಟಿಕೆಟ್‌ ನೀಡಿದ್ದೇ ಇದಕ್ಕೆ ಸಾಕ್ಷಿ. ರಘು ಅವರು ಅತ್ಯಂತ ಹಿಂದುಳಿದ ಜನಾಂಗದ ನಾಯರಾಗಿದ್ದಾರೆ. ಅವರಿಗೆ ಮೊದಲ ಪ್ರಶಾಸ್ತ್ರ್ಯದ ಮತ ಹಾಕಬೇಕು’ ಎಂದು ಹೇಳಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳನ್ನು ಮಹೇಶ್‌ ಅವರು ಪ್ರಸ್ತಾಪಿಸಿದರು.

ಅಭ್ಯರ್ಥಿ ರಘು ಕೌಟಿಲ್ಯ ಅವರು ಮಾತನಾಡಿ, ಈ ಬಾರಿ ಒಂದು ಅವಕಾಶ ನೀಡುವಂತೆ ಮನವಿ ಮಾಡಿದರು.

ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಂದರ್, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ರಾಮಚಂದ್ರ, ಮುಖಂಡರಾದ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ, ಪರಿಮಳ ನಾಗಪ್ಪ, ನಿಜಗುಣರಾಜು ಇತರರು ಮಾತನಾಡಿದರು.

ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಜಿ.ಎನ್.ನಂಜುಂಡಸ್ವಾಮಿ, ಕಾಂಪೋಸ್ಟ್‌ ನಿಗಮದ ಅಧ್ಯಕ್ಷ ಎಸ್‌.ಮಹದೇವಯ್ಯ, ವಿಧಾನಪರಿಷತ್‌ ಸದಸ್ಯ ಸಿದ್ದರಾಜು, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಇದ್ದರು.

‘ಉತ್ಸಾಹ ಕಂಡು ಸುಸ್ತಾದೆ’

ಪ್ರಚಾರ ಸಭೆಗೆ ಬಂದ ಯಡಿಯೂರಪ್ಪ ಅವರನ್ನು ಮುಖಂಡರು ಹಾಗೂ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಅವರು ವೇದಿಕೆಗೆ ಹತ್ತಿದ ಬಳಿಕ, ಮುಖಂಡರು, ಶಾಸಕರೆಲ್ಲ ಯಡಿಯೂರಪ್ಪ ಅವರ ಹೆಸರು ಹೇಳುವಾಗಲೆಲ್ಲ ಬೆಂಬಲಿಗರು ಹಾಗೂ ಕಾರ್ಯಕರ್ತರು ಶಿಳ್ಳೆ, ಚಪ್ಪಾಳೆ ಹೊಡೆಯುತ್ತಿದ್ದರು. ಘೋಷಣೆಗಳನ್ನು ಕೂಗಿದ್ದರು.

ಯಡಿಯೂರಪ್ಪ ಅವರು ಭಾಷಣ ಮಾಡುವಾಗ, ‘ನಿಮ್ಮ ಉತ್ಸಾಹ ಕಂಡು ನಾನು ಸುಸ್ತಾದೆ. ನಾನು ಶಿವಮೊಗ್ಗದಲ್ಲಿದ್ದೇನಾ ಅಥವಾ ಇಲ್ಲಿದ್ದೇನಾ ಎಂಬ ಗೊಂದಲ ಆಗುತ್ತಿದೆ. ಈ ಉತ್ಸಾಹ ನೋಡಿದರೆ ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ’

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರನ್ನು ಬಿಎಸ್‌ವೈ ಹೊಗಳಿದರು.

‘ಎಸ್‌.ಟಿ.ಸೋಮಶೇಖರ್‌ ಅವರು ಉಸ್ತುವಾರಿ ಸಚಿವರಾಗಿದ್ದು ನಿಮ್ಮ ಪುಣ್ಯ. ಎನ್‌.ಮಹೇಶ್‌ ಅವರು ಸಿಕ್ಕಿದ್ದು ನಮ್ಮ ಸೌಭಾಗ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.