ಚಾಮರಾಜನಗರ: ಜಿಲ್ಲೆಯ ರಕ್ಷಿತಾರಣ್ಯಗಳು ಹಾಗೂ ವನ್ಯಜೀವಿ ಧಾಮಗಳಲ್ಲಿ ಮೇ 23ರಿಂದ ಆನೆಗಳ ಗಣತಿ ಕಾರ್ಯ ಆರಂಭವಾಗುತ್ತಿದ್ದು ಮೂರು ದಿನಗಳ ಕಾಲ ನಡೆಯಲಿದೆ.
ತಮಿಳುನಾಡು ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಆನೆ ಗಣತಿ ಕಾರ್ಯ ನಡೆಯುತ್ತಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚಾಮರಾಜನಗರ ಸಿಸಿಎಫ್ ಹೀರಾಲಾಲ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಹೇಗೆ ನಡೆಯಲಿದೆ ಗಣತಿ: ಮುಂಜಾನೆ 6 ಗಂಟೆಗೆ ಆರಂಭವಾಗುವ ಗಣತಿ ಕಾರ್ಯ ಸಂಜೆ 6ರವರೆಗೂ ಸಾಗಲಿದೆ. ಮೊದಲ ದಿನ ಆನೆ ಬ್ಲಾಕ್‌ಗಳ ಗಣತಿ ನಡೆಯಲಿದೆ. ಆನೆಗಳ ಗುಂಪುಗಳ ಸಂಖ್ಯೆ, ಗುಂಪಿನಲ್ಲಿರುವ ಆನೆಗಳ ಸಂಖ್ಯೆ, ಹೆಣ್ಣಾನೆ, ಮರಿಯಾನೆಗಳ ಸಹಿತ ಎಲ್ಲ ಆನೆಗಳನ್ನು ಗಣತಿಯಲ್ಲಿ ಪರಿಗಣಿಸಲಾಗುತ್ತದೆ. ಮೊದಲ ದಿನ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಸುತ್ತಾಡಿ ಆನೆಗಳ ಗಣತಿ ಕಾರ್ಯ ನಡೆಸಲಿದ್ದಾರೆ.
ಎರಡನೇ ದಿನ ಆನೆಗಳ ಜಾಡಿನಲ್ಲಿ ಅಡ್ಡಾಡಿ ಲದ್ದಿಯ ಆಧಾರದಲ್ಲಿ ಗಣತಿಯ ಮಾಹಿತಿ ಸಂಗ್ರಹಿಸಲಾಗುವುದು. ಕೊನೆಯ ದಿನ ಆನೆಗಳು ನೀರಡಿಕೆ ತಣಿಸಿಕೊಳ್ಳಲು ಬರುವ ಜಲ ಮೂಲಗಳ ಬಳಿ ಗಣತಿ ನಡೆಸಲಾಗುವುದು. ಇದರಿಂದ ಸಮಗ್ರ ಗಣತಿ ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಾಲ್ನಡಿಗೆಯಲ್ಲಿ ಗಸ್ತು ತಿರುಗಿ ಆನೆಗಳ ಗುಂಪಿನ ಗಾತ್ರ, ಲಿಂಗ, ವಯಸ್ಸು ಸಹಿತ ಪೂರಕ ಮಾಹಿತಿಗಳನ್ನು ದಾಖಲಿಸಲಾಗುತ್ತದೆ. ಯಳಂದೂರು ಅರಣ್ಯ ವಲಯದಲ್ಲಿ 40ಕ್ಕೂ ಹೆಚ್ಚಿನ ಸಿಬ್ಬಂದಿ ಗಣತಿ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದು ಆರ್‌ಎಫ್‌ಒ ಎನ್.ನಾಗೇಂದ್ರ ನಾಯಕ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.