ADVERTISEMENT

ಬಂಡೀಪುರ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ: ಅರಣ್ಯ ಇಲಾಖೆಗೆ ಹೆದ್ದಾರಿ ಪ್ರಾಧಿಕಾರ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 16:06 IST
Last Updated 25 ಆಗಸ್ಟ್ 2021, 16:06 IST
ಬಂಡೀಪುರ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿರುವ ಜಿಂಕೆಗಳು (ಪ್ರಜಾವಾಣಿ ಸಂಗ್ರಹ ಚಿತ್ರ) 
ಬಂಡೀಪುರ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿರುವ ಜಿಂಕೆಗಳು (ಪ್ರಜಾವಾಣಿ ಸಂಗ್ರಹ ಚಿತ್ರ)    

ಚಾಮರಾಜನಗರ‌: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 181ರಲ್ಲಿ (ಈ ಮೊದಲು 67) ಮೇಲುಕಾಮನಹಳ್ಳಿಯಿಂದ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ವರೆಗಿನ 12.8 ಕಿ.ಮೀ ರಸ್ತೆಯನ್ನು ದ್ವಿಪಥವನ್ನಾಗಿ ಅಭಿವೃದ್ಧಿ ಪಡಿಸುವ ಪ್ರಸ್ತಾವವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯಕ್ಕೆ ಸಲ್ಲಿಸುತ್ತಿದ್ದಂತೆಯೇ; ಈ ಯೋಜನೆಗೆ ಅನುಮತಿ ನೀಡಬಾರದು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

₹ 40 ಕೋಟಿ ವೆಚ್ಚದ ಈ ಯೋಜನೆಗಾಗಿ 9.5 ಹೆಕ್ಟೇರ್‌ಗಳಷ್ಟು (24 ಎಕರೆ) ಅರಣ್ಯ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಅಗತ್ಯವಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತನ್ನ ಪ್ರಸ್ತಾವದಲ್ಲಿ ಹೇಳಿದೆ.

ರಸ್ತೆ ವಿಸ್ತರಣೆಗೆ ಅನುಮತಿ ನೀಡಿದರೆ, ಇಲ್ಲಿ ಬರುವ ಮರ–ಗಿಡಗಳನ್ನು ಕಡಿಯಬೇಕಾಗುತ್ತದೆ. ಹುಲಿಗಳು ಹಾಗೂ ಅಪರೂಪದ ವನ್ಯ ಪ್ರಾಣಿಗಳಿಗೆ ಆಶ್ರಯ ನೀಡಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವುದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮಾರ್ಗಸೂಚಿಗಳ ಉಲ್ಲಂಘನೆ ಎಂದು ವನ್ಯಪ್ರೇಮಿಗಳು ಆರೋಪಿಸಿದ್ದಾರೆ.

ADVERTISEMENT

‌ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗುಂಡ್ಲುಪೇಟೆ– ಕೊಯಮತ್ತೂರು ವಿಭಾಗಕ್ಕೆ ಬರುತ್ತದೆ. ಈ ಸಂರಕ್ಷಿತ ಪ್ರದೇಶದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು (ತಮಿಳುನಾಡು ಹಾಗೂ ಕೇರಳ) ಹಾದು ಹೋಗುತ್ತಿವೆ.

ಇಲ್ಲಿ ವಾಹನ ಸಂಚಾರಕ್ಕೆ ಅರಣ್ಯ ಇಲಾಖೆ ಈಗಾಗಲೇ ಹಲವು ನಿರ್ಬಂಧಗಳನ್ನು ಹಾಕಿದೆ. ರಾತ್ರಿ 9 ಗಂಟೆಯ ನಂತರ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ರಾತ್ರಿ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಕೇರಳ ಪದೇ ಪದೇ ಒತ್ತಾಯ ಮಾಡುತ್ತಾ ಬಂದಿದ್ದರೂ; ಅರಣ್ಯ ಸಂರಕ್ಷಣೆಯ ಕಠಿಣ ಕಾನೂನುಗಳು ಈವರೆಗೂ ಇದಕ್ಕೆ ಅವಕಾಶ ನೀಡಿಲ್ಲ.

ಸದ್ಯ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಸ್ತೆಗಳು ಏಕಪಥವಾಗಿದ್ದು, ಹೆಚ್ಚು ಅಗಲವಾಗಿಲ್ಲ. ಜಾರಿಯಲ್ಲಿರುವ ನಿಯಮಗಳ ಪ್ರಕಾರ, ಇರುವ ರಸ್ತೆಯಷ್ಟೇ ಅಗಲಕ್ಕೆ ದುರಸ್ತಿ ಮಾಡಬಹುದು.

2006ರಲ್ಲಿ ಹೊರಡಿಸಲಾಗಿರುವ ಪರಿಸರ ಮೇಲಿನ ಪರಿಣಾಮ ಮಾಪನ ಅಧಿಸೂಚನೆಯ ಪ್ರಕಾರ, ಪ್ರಸ್ತಾವಿತ ರಸ್ತೆ ಅಭಿವೃದ್ಧಿ ಯೋಜನೆ ‘ಎ’ ಶ್ರೇಣಿಯ ಯೋಜನೆಯಾಗಿದೆ. ಇಂತಹ ಯೋಜನೆಗೆ ಪರಿಸರ ಮೇಲಿನ ಪರಿಣಾಮ ಮಾಪನ ಮಾಡುವುದು ಕಡ್ಡಾಯ.

ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದ ಅಧಿಸೂಚನೆ ಪ್ರಕಾರ, ರಸ್ತೆ ಅಭಿವೃದ್ಧಿ ಯೋಜನೆಗೆ ಅದರ ಪರಿಣಾಮವನ್ನು ಮುಂಚಿತವಾಗಿ ಅಳೆಯುವುದು ಕಡ್ಡಾಯಗೊಳಿಸಲಾಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅರಣ್ಯ ಹಾಗೂ ಪರಿಸರ ಸಚಿವಾಲಯಕ್ಕೆ ಸಲ್ಲಿಸಿರುವ ಪ್ರಸ್ತಾವದಲ್ಲಿ ಯೋಜನಾ ಪರಿಣಾಮ ಅಳೆಯುವ ಅಗತ್ಯವಿಲ್ಲ ಎಂದು ಹೇಳಿದೆ.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅರಣ್ಯ ಸಂರಕ್ಷಣೆ ಕಾಯ್ದೆ, ವನ್ಯಜೀವಿ ಮಂಡಳಿ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಇಂತಹ ಯೋಜನೆಗಳ ಪರಿಣಾಮ ವನ್ಯಪ್ರಾಣಿಗಳ ಮೇಲೆ ಆಗುತ್ತದೆ. ಯಾವುದೇ ಕಾರಣಕ್ಕೂ ಇದಕ್ಕೆ ಅನುಮತಿ ನೀಡಬಾರದು’ ಎಂದು ಪರಿಸರವಾದಿ ಪುಣಜನೂರು ದೊರೆಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ವನ್ಯಜೀವಿ ಸಂರಕ್ಷಣೆ, ನೀರಿನ ಭದ್ರತೆಗೆ ಕುತ್ತು

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ, ‘ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶ ನಮ್ಮ ರಾಷ್ಟ್ರೀಯ ಪ್ರಾಣಿ (ಹುಲಿ) ಮತ್ತು ರಾಷ್ಟ್ರೀಯ ಪಾರಂಪರಿಕ ಪ್ರಾಣಿಯ (ಆನೆ) ಉತ್ತಮ ಆವಾಸಸ್ಥಾನ. ಈ ತರಹದ ಪ್ರದೇಶಗಳು ದೇಶದ ಭೌಗೋಳಿಕ ಪ್ರದೇಶದ ಶೇಕಡ 1ರಷ್ಟು ಭಾಗದಲ್ಲಿ ಮಾತ್ರ ಉಳಿದಿವೆ. ಇಂತಹ ಪ್ರದೇಶದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಇನ್ನು ಹೆಚ್ಚು ಹೆಚ್ಚು ನಿರ್ಮಾಣದ ಅಗತ್ಯವಿಲ್ಲ’‌ ಎಂದರು.‌

‘ವನ್ಯಜೀವಿಗಳು ಮಾತ್ರವಲ್ಲದೇ, ಬಂಡೀಪುರವು ಕಪಿಲ, ಮೊಯಾರ್ ನದಿಗಳಿಗೆ ಮತ್ತು ಕಬಿನಿ ಹಾಗೂ ನುಗು ಜಲಾಶಯಗಳಿಗೆ ಅತಿ ಅಗತ್ಯವಾದ ಜಲಾನಯನ ಪ್ರದೇಶ. ಈ ನದಿಗಳು ಮತ್ತು ಜಲಾಶಯಗಳ ಮೇಲೆ ಕರ್ನಾಟಕ, ತಮಿಳುನಾಡಿನಲ್ಲಿ ಸಾವಿರಾರು ಕುಟುಂಬಗಳು ಕೃಷಿ, ಕುಡಿಯುವ ನೀರು ಹಾಗೂ ಇತರ ಉಪಯೋಗಗಳಿಗೆ ಅವಲಂಬಿತವಾಗಿದ್ದಾರೆ.ಹಾಗಾಗಿ ವನ್ಯಜೀವಿ ಸಂರಕ್ಷಣೆ ಮತ್ತು ನಮ್ಮ ನೀರಿನ ಭದ್ರತೆಯ ದೃಷ್ಟಿಕೋನದಿಂದ ಈ ಹೆದ್ದಾರಿ ವಿಸ್ತರಣೆ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬಾರದು’ ಎಂದು ಅವರು ಹೇಳಿದರು.

‘ಸರ್ಕಾರಕ್ಕೆ ಅಭಿಪ್ರಾಯ ತಿಳಿಸುತ್ತೇವೆ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌, ‘ಅರಣ್ಯ ಹಾಗೂ ಪರಿಸರ ಸಚಿವಾಲಯಕ್ಕೆ ಪ್ರಸ್ತಾವ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಮಗಿನ್ನೂ ಬಂದಿಲ್ಲ. ಬಂದ ನಂತರ ಇದರಲ್ಲಿರುವ ಲೋಪ–ದೋಷಗಳ ಬಗ್ಗೆ ಸಚಿವಾಲಯಕ್ಕೆ ತಿಳಿಸುತ್ತೇವೆ. ಇಂತಹ ಯೋಜನೆಗಳಿಗೆ ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.