ADVERTISEMENT

ಪುಣಜನೂರು: ಲೇಔಟ್‌ ಅಭಿವೃದ್ಧಿ ಯತ್ನ?

ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಜಾಗ, ಪರಿಸರವಾದಿಗಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 19:30 IST
Last Updated 23 ಸೆಪ್ಟೆಂಬರ್ 2022, 19:30 IST
ಪುಣಜನೂರು ಜಮೀನು ಸ್ಥಳದಲ್ಲಿ ವಿತರಿಸಲಾಗುತ್ತಿರುವ ಕರಪತ್ರ
ಪುಣಜನೂರು ಜಮೀನು ಸ್ಥಳದಲ್ಲಿ ವಿತರಿಸಲಾಗುತ್ತಿರುವ ಕರಪತ್ರ   

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಪುಣಜನೂರು ಗ್ರಾಮದ ವ್ಯಾಪ್ತಿಯಲ್ಲಿ ಕಂದಾಯ ಜಮೀನನ್ನು ಸೆಂಟ್‌, ಎಕರೆ ಆಧಾರದಲ್ಲಿ ವಿಭಾಗಿಸಿ ಹಂಚಿಕೆ ಮಾಡಲು ಯತ್ನಿಸಲಾಗುತ್ತಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.

ಪರಿಸರ ಸೂಕ್ಷ್ಮ ವಲಯದಲ್ಲಿರುವ ಜಮೀನು ಕಂದಾಯ ಭೂಮಿಯಾಗಿದ್ದರೂ, ವಾಣಿಜ್ಯ ಉದ್ದೇಶದ ಚಟುವಟಿಕೆಗಳನ್ನು ನಡೆಸಲು ಅವಕಾಶ ಇಲ್ಲ. ಇದನ್ನು ಉಲ್ಲಂಘಿಸಿ ರಿಯಲ್‌ ಎಸ್ಟೇಟ್‌ ಸಂಸ್ಥೆಯೊಂದ ಎಕರೆಗಟ್ಟಲೆ ಜಾಗವನ್ನು 50 ಸೆಂಟ್‌, ಒಂದು ಎಕರೆ ನಿವೇಶನವಾಗಿ ವಿಭಾಗಿಸಿ ಮಾರಾಟ ಮಾಡಲು ಯತ್ನಿಸುತ್ತಿದೆ ಎಂಬುದು ಆರೋಪ.

‘ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಪರಿಸರ ಸೂಕ್ಷ್ಮ ವಲಯದ್ಲಿ ಏನೂ ಮಾಡುವಂತಿಲ್ಲ. ಜಮೀನು ಮಾಲೀಕರಿಂದ ನಮಗಿನ್ನೂ ಯಾವುದೇ ಮನವಿ ಬಂದಿಲ್ಲ. ಪರಿಸರ ಸೂಕ್ಷ್ಮ ವಲಯದಲ್ಲಿ ಲೇಔಟ್‌ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಎಸಿಎಫ್‌ ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪುಣಜನೂರು ಭಾಗದಲ್ಲಿ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಕರ ಪತ್ರ ವಿತರಿಸಲಾಗುತ್ತಿದ್ದು, ಇದು ಅನೇಕ ಊಹಾಪೋಹಗಳಿಗೆ ದಾರಿ ಮಾಡಿದೆ. ಅದಕ್ಕೆ ಪೂರಕವೆಂಬಂತೆ ಆ ಜಮೀನನನ್ನು ಸಮತಟ್ಟುಗೊಳಿಸುವ ಕೆಲಸವೂ ನಡೆದಿದೆ.

ಪುಣಜನೂರು ಗೇಟ್‌ನಿಂದ ಸ್ವಲ್ಪವೇ ದೂರದಲ್ಲಿ ಈ ಜಮೀನು ಇದೆ. ಸ್ಥಳದಲ್ಲಿ ಲಭ್ಯವಾಗಿರುವ ಕರಪತ್ರದ ಪ್ರಕಾರ, ತಮಿಳುನಾಡಿನ ರಿಯಲ್‌ ಎಸ್ಟೇಟ್‌ ಸಂಸ್ಥೆಯೊಂದು ಜಮೀನಿನ ಮಾಲೀಕತ್ವ ಹೊಂದಿದೆ.

ಕರಪತ್ರದಲ್ಲಿರುವ ಮಾಹಿತಿ ಪ್ರಕಾರ, ಜಮೀನು 19.44 ಎಕರೆಯಷ್ಟು ವಿಸ್ತೀರ್ಣ ಹೊಂದಿದೆ. 49 ಸೆಂಟ್ಸ್‌, 50 ಸೆಂಟ್ಸ್‌, 1 ಎಕರೆ, 1.03 ಎಕರೆ ಸೇರಿದಂತೆ ವಿವಿಧ ಅಳತೆಯಲ್ಲಿ 27 ನಿವೇಶನಗಳನ್ನು ಗುರುತಿಸಲಾಗಿದೆ. 1.13 ಎಕರೆಯಷ್ಟು ಪ್ರದೇಶದಲ್ಲಿ ರಸ್ತೆ ಹಾದು ಹೋಗುತ್ತಿದ್ದು, ಉಳಿದ 18.42 ಎಕರೆ ಮಾರಾಟಕ್ಕೆ ಲಭ್ಯವಿದೆ ಎಂದು ಉಲ್ಲೇಖಿಸಲಾಗಿದೆ.

‘ಲೇಔಟ್‌ ಅಭಿವೃದ್ಧಿಗೆ ಇಲ್ಲಿ ಅವಕಾಶ ಇಲ್ಲ. ಜಮೀನು ಮಾಲೀಕರು ಕೃಷಿ ಉದ್ದೇಶಕ್ಕೆ ಜಮೀನು ಸರಿ ಪಡಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಅವರು ಮನೆ ನಿರ್ಮಿಸುತ್ತಿದ್ದರೆ ಅಥವಾ ಅನ್ಯ ಉದ್ದೇಶಕ್ಕೆ ಜಮೀನು ಬಳಸುವುದಿದ್ದರೆ ನಮ್ಮಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯಲೇ ಬೇಕು. ನಮಗೆ ಇದುವರೆಗೆ ಮನವಿ ಸಲ್ಲಿಸಿಲ್ಲ’ ಎಂದು ಸ್ಥಳೀಯ ಅರಣ್ಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ವೆ ತಿದ್ದುಪಡಿ ಮಾಡಿ ಅಕ್ರಮ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪರಿಸರವಾದಿ ಪುಣಜನೂರು ದೊರೆಸ್ವಾಮಿ ಅವರು, ‘ 1962ರಲ್ಲಿ ಪುಣಜನೂರಿನಲ್ಲಿ ಸರ್ವೆ ನಂಬರ್‌ 38ರಲ್ಲಿ 54 ಕುಟುಂಬಗಳಿಗೆ 292 ಎಕರೆ ಜಮೀನು ಹಂಚಿಕೆ ಮಾಡಲಾಗಿತ್ತು. ಆ ಬಳಿಕ ಅಧಿಕಾರಿಗಳು ಹಾಗೂ ಪ್ರಭಾವಿಗಳು ಸೇರಿ ಸರ್ವೆ ನಂಬರ್‌ ದುರಸ್ತಿ ಮಾಡಿ ನೂರಾರು ಮಂದಿಗೆ ಖಾತೆ ಮಾಡಿಕೊಟ್ಟಿದ್ದಾರೆ’ ಎಂದು ದೂರಿದರು.

‘ಜಮೀನು ವಿಭಾಗಿಸಿ ಮಾರಾಟ ಮಾಡಲು ಪ್ರಯತ್ನ ನಡೆಯುತ್ತಿರುವುದು ನಿಜ. ಹಿಂದೆ ಇದೇ ಜಮೀನಿನಲ್ಲಿ ರೆಸಾರ್ಟ್‌ ಕಟ್ಟಲು ಮುಂದಾಗಿದ್ದರು. ಆಗ ಹೋರಾಟ ಮಾಡಿ ತಡೆದಿದ್ದೆವು. ನಾಲ್ಕೈದು ಜನರ ಕೈ ಬದಲಿ ಈಗ ತಮಿಳುನಾಡಿವರು ಅದರ ಮಾಲೀಕತ್ವ ಹೊಂದಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.