
ಬಿಯರ್
ಚಾಮರಾಜನಗರ: ಅಬಕಾರಿ ಇಲಾಖೆ ಸನ್ನದು (ಪರವಾನಗಿ) ಹಂಚಿಕೆ ಪ್ರಕ್ರಿಯೆಯ ಇ-ಹರಾಜಿನಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯಕುಮಾರ್ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಚಾಮರಾಜನಗರ ಜಿಲ್ಲೆಯಲ್ಲಿ 7 ಪರವಾನಗಿ ಸೇರಿದಂತೆ ರಾಜ್ಯದಾದ್ಯಂತ ಸಿಎಲ್-2, ಸಿಎಲ್-9 ಸೇರಿದಂತೆ 600ಕ್ಕೂ ಹೆಚ್ಚು ನವೀಕರಣಗೊಳ್ಳದ ಪರವಾನಗಿ, ರದ್ದಾಗಿರುವ ಮತ್ತು ಇತರೆ ಕಾರಣಗಳಿಂದ ಸರ್ಕಾರದ ಸುಪರ್ದಿಯಲ್ಲಿರುವ ಪರವನಾಗಿಗಳನ್ನು ಇ ಹರಾಜು ಹಾಕುತ್ತಿದೆ. ಆದರೆ ಹರಾಜು ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು ಅರ್ಹರನ್ನು ಹೊರಗಿಡುವ ಷಡ್ಯಂತ್ರ ಎಂದು ಟೀಕಿಸಿದರು.
ಈಚೆಗೆ ನಗರದ ಜೆ.ಎಚ್ ಪಟೇಲ್ ಸಭಾಂಗಣದಲ್ಲಿ ಇ ಹರಾಜು ಸಂಬಂಧ ನಡೆದ ತರಬೇತಿ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡಲಾಗಿದೆ. ಎಲ್ಲ ಪರವಾನಗಿದಾರರಿಗೆ ಹಾಗೂ ಉದ್ಯಮಿಗಳಿಗೂ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿರುವುದು ಸರಿಯಲ್ಲ. ಸರ್ಕಾರದ ಬೊಕ್ಕಸ ತುಂಬಿಸಿಕೊಳ್ಳಲು ಹರಾಜಿನ ಕನಿಷ್ಠ ಮೊತ್ತವನ್ನು ₹ 80 ಲಕ್ಷಕ್ಕೆ ನಿಗದಿ ಪಡಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇ ಹರಾಜು ಪ್ರಕ್ರಿಯೆಯಿಂದ ದೇಶದ ಯಾವುದೇ ಭಾಗದ ಉದ್ಯಮಿಗಳು ಭಾಗವಹಿಸಲು ಅವಕಾಶ ಇರುವುದರಿಂದ ಸ್ಥಳೀಯರು ಅವಕಾಶ ವಂಚಿರಾಗಲಿದ್ದಾರೆ. ಮದ್ಯದಂಗಡಿಗಳಲ್ಲಿ ಹೊರ ರಾಜ್ಯದವರಿಗೆ ಕೆಲಸ ಸಿಗುತ್ತದೆ ಎಂದು ಆರೋಪಿಸಿದರು.
ಅಬಕಾರಿ ಸನ್ನದು ಹಂಚಿಕೆಯಲ್ಲಿ ಮೀಸಲಾತಿ ತಂದಿರುವುದು ಸ್ವಾಗತಾರ್ಹವಾದರೂ ಜಿಲ್ಲಾವಾರು ಮೀಸಲಾತಿ ಜಾರಿಗೊಳಿಸದಿರುವುದರಿಂದ ಉಳ್ಳವರಿಗೆ ಅನುಕೂಲವಾಗಲಿದೆ. ಹಾಗಾಗಿ ಜಿಲ್ಲಾವಾರು ಮೀಸಲಾತಿ ನಿಗದಿಪಡಿಸಿ ಪರವಾನಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮನೋಜ್ ಪಟೇಲ್, ಬಂಗಾರ ನಾಯಕ, ಮಹೇಶ್ ಪ್ರಸಾದ್, ರಾಮಸಮುದ್ರ ಶಿವಣ್ಣ, ಕೂಸಣ್ಣ, ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.