ADVERTISEMENT

ಸರ್ಕಾರದ ವಿರುದ್ಧ ಜನ ಬೀದಿಗಿಳಿಯುವುದು ಖಚಿತ: ಕೋಡಿಹಳ್ಳಿ ಚಂದ್ರಶೇಖರ್‌

ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 12:08 IST
Last Updated 6 ಆಗಸ್ಟ್ 2020, 12:08 IST
ಕೋಡಿಹಳ್ಳಿ ಚಂದ್ರಶೇಖರ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಕೋಡಿಹಳ್ಳಿ ಚಂದ್ರಶೇಖರ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು   

ಚಾಮರಾಜನಗರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿ ಮಾಡಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರೈತ ವಿರೋಧಿಯಾಗಿದ್ದು, ಲಕ್ಷಾಂತರ ಜನರು ಈ ಕಾನೂನುಗಳ ವಿರುದ್ಧ ಬೀದಿಗೆ ಇಳಿಯುವುದು ಖಚಿತ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಅವರು ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರಿಗೆ ಈ ಕಾನೂನುಗಳ ಬಗ್ಗೆ ಇನ್ನೂ ಸಂಪೂರ್ಣವಾಗಿ ಅರಿವಾಗಿಲ್ಲ. ನಾವು ರೈತರು ಹಾಗೂ ಜನರಲ್ಲಿ ಇವುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ. ಮನೆ ಮನೆಗಳಿಗೆ ತೆರಳಿ ಕಾನೂನುಗಳ ಅನನುಕೂಲಗಳ ಬಗ್ಗೆ ವಿವರಿಸುತ್ತಿದ್ದೇವೆ. ಜನರು ಬೀದಿಗಿಳಿದಾಗ ಆಡಳಿತದಲ್ಲಿರುವ ಯಾರೆಲ್ಲ ಕೊಚ್ಚಿ ಹೋಗುತ್ತಾರೋ ಗೊತ್ತಿಲ್ಲ’ ಎಂದರು.

‘ಕೋವಿಡ್–19 ಸಂಕಷ್ಟ ಇರುವಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರನ್ನು ಆತಂಕದಲ್ಲಿಟ್ಟು, ಆರ್ಥಿಕ ಅಭದ್ರತೆ ಸೃಷ್ಟಿ ಮಾಡಿ, ತಿದ್ದುಪಡಿ ಕಾಯ್ದೆಗಳನ್ನು ಜಾರಿ ಮಾಡುತ್ತಿವೆ.ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳ ಬಗ್ಗೆ ಬಗ್ಗೆ ವಿಧಾನಸಭೆ, ಸಂಸತ್ತಿನಲ್ಲಿ ಚರ್ಚೆ ಮಾಡದೇ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಉದ್ದೇಶವಾದರೂ ಏನು’ ಎಂದು ಖಾರವಾಗಿ ಪ್ರಶ್ನಿಸಿದರು.

ADVERTISEMENT

‘ಕೃಷಿ ಕ್ಷೇತ್ರಕ್ಕೆ ಕಾಲಿಡಲು ಕಾರ್ಪೊರೇಟ್ ಕಂಪನಿಗಳಿಗೆ ಕಾನೂನಿನ ಮೂಲಕ ಅವಕಾಶ ನೀಡುವುದು ಮತ್ತು ದೇಶದ ರೈತರನ್ನು ದಿವಾಳಿ ಮಾಡುವುದು ಬಿಟ್ಟು ಬೇರೆ ಉದ್ದೇಶ ಕಾಣುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿ.ಎಂ ವಿರುದ್ಧ ಆಕ್ರೋಶ: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಚಂದ್ರಶೇಖರ್ ಅವರು, ‘ರೈತರ ಮಗ, ಮಣ್ಣಿನ ಮಗ, ರೈತ ಪರ ಹೋರಾಟಗಾರರು ಎಂದು ಗುರುತಿಸಿಕೊಂಡಿರುವ ಯಡಿಯೂರಪ್ಪ ಅವರ ಧ್ವನಿ ಎಲ್ಲಿಗೆ ಹೋಯಿತು? ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದರೆ ರೈತರಿಗೆ ತೊಂದರೆಯಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಯಾಕೆ ಹೇಳಲಿಲ್ಲ’ ಎಂದರು.

ಅನ್ನ ನೀಡುವ ಭೂಮಿ ಮುಂದಿನ ತಲೆಮಾರುಗಳಿಗೂ ಬೇಕು. ಅದನ್ನು ಜೋಪಾನ ಮಾಡುವ ಉದ್ದೇಶದಿಂದ 1961ರಲ್ಲಿ ಉಳುವವನೇ ಭೂಮಿಯ ಒಡೆಯ (ಭೂ ಸುಧಾರಣಾ ) ಎಂಬ ಕಾನೂನು ಜಾರಿಗೆ ಬಂತು. ಈಗ ಅದಕ್ಕೆ ತಿದ್ದುಪಡಿ ತಂದುಕಾರ್ಪೊರೇಟ್ ಕಂಪನಿಗಳು ಲಕ್ಷಾಂತರ ಎಕರೆ ಭೂಮಿ ಖರೀದಿ ಮಾಡಲು ಕಾನೂನಿನಲ್ಲಿ ಅವಕಾಶ ಮಾಡಿಕೊಡುತ್ತಿದ್ದಾರೆ’ ಎಂದು ಹೇಳಿದರು.

‘ಇದರಿಂದಾಗಿ ಸಣ್ಣ ರೈತರಿಗೆ ತೊಂದರೆಯಾಗುತ್ತದೆ. ದೇಶದ ಶೇ 80ರಷ್ಟು ರೈತರನ್ನು ಕೃಷಿ ಕ್ಷೇತ್ರದಿಂದ ಹೊರ ಹಾಕುವ ಯೋಚನೆ ಇದು. ಗ್ರಾಮೀಣ ಭಾರತದ ಜನರ ಬಗ್ಗೆ ಕೇಂದ್ರ ಸರ್ಕಾರ ಹೊಂದಿರುವ ಮನಃಸ್ಥಿತಿಯನ್ನು ಇದು ತೋರಿಸುತ್ತದೆ’ ಎಂದು ಚಂದ್ರಶೇಖರ್‌ ಅವರು ಟೀಕಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ಇದ್ದರು.

ಸಭೆ: ಇದಕ್ಕೂ ಮೊದಲು ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ರೈತ ಮುಖಂಡರು ಸಭೆ ನಡೆಸಿ ಹೋರಾಟದ ಮುಂದಿನ ಹಾದಿಗಳ ಬಗ್ಗೆ ಚರ್ಚಿಸಿದರು.

ಮುಖಂಡರಾದ ಕೋಲಾರ ಶಿವಪ್ಪ, ಭೈರೇಗೌಡ, ಕಡಬೂರು ಮಂಜುನಾಥ್‌,ಮಾಡ್ರಳ್ಳಿ ಮಹದೇವಪ್ಪ, ಹೊನ್ನೂರು ಬಸವಣ್ಣ, ಗೌಡಹಳ್ಳಿ ಸೋಮಣ್ಣ, ಹೆಗ್ಗೊಠಾರ ವಿಜಯಕುಮಾರ್‌, ಚಂಗಡಿ ಕರಿಯಪ್ಪ, ಹಾಲಹಳ್ಳಿ ಮಹೇಶ್,‌ ಪೃಥ್ವಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.