ADVERTISEMENT

ಡಿಕೆಶಿ ಮುಂದೆ ವಿವಿಧ ಬೇಡಿಕೆ ಇಟ್ಟ ರೈತರು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 16:08 IST
Last Updated 26 ಆಗಸ್ಟ್ 2023, 16:08 IST
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ರೈತರ ಮನವಿ ಸ್ವೀಕರಿಸಿ, ಅಹವಾಲು ಆಲಿಸಿದರು
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ರೈತರ ಮನವಿ ಸ್ವೀಕರಿಸಿ, ಅಹವಾಲು ಆಲಿಸಿದರು   

ಚಾಮರಾಜನಗರ: ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಬಂದಿಳಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮುಂದೆ ರೈತ ಮುಖಂಡರು ಹಲವು ಬೇಡಿಕೆಗಳನ್ನು ಇಟ್ಟರು. 

ಮನವಿ ಪತ್ರವನ್ನು ಶಿವಕುಮಾರ್‌ಗೆ ನೀಡಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಮೈಸೂರು–ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌, 'ಕಳೆದ ಸಾಲಿನ ಕಬ್ಬಿನ ಬಾಕಿ ಪ್ರತಿ ಟನ್‌ಗೆ ₹150 ಕೊಡಿಸಲು ಹಾಗೂ ನ್ಯಾಯಾಲಯದ ತಡೆ ತೆರವುಗೊಳಿಸಲು ಸರ್ಕಾರ ಕ್ರಮ ವಹಿಸಬೇಕು’ ಎದು ಆಗ್ರಹಿಸಿದರು. 

ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಿ ನೀವು ಪಾದಯಾತ್ರೆ ಆಡಿದ್ದೀರಿ. ಅದರಂತೆ ಯೋಜನೆನ್ನು ತಕ್ಷಣವೇ ಜಾರಿಗೊಳಿಸಬೇಕು. ನೀರಿನ ಕೊರತೆ ಇದ್ದರೂ, ತಮಿಳುನಾಡಿಗೆ ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯಗಳಿಂದ ನೀರು ಹರಿಸುವುದನ್ನು ನಿಲ್ಲಿಸಬೇಕು. ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡಬೇಕು. ಒಂದು ವೇಳೆ ನೀರು ಬಿಡಲು  ಆಗದಿದ್ದರೆ ಬೆಳೆ ನಷ್ಟ ಪರಿಹಾರವನ್ನು ಎಕರೆಗೆ ₹50 ಸಾವಿರದಂತೆ ನೀಡಬೇಕು. ಕೃಷಿ ಪಂಪ್‌ ಸೆಟ್‌ಗೆ  ಆಧಾರ್ ಲಿಂಕ್ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು. 

ADVERTISEMENT

ಜಿಲ್ಲೆಯಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ 90ರಷ್ಟು ಉದ್ಯೋಗಾವಕಾಶ ನೀಡಬೇಕು. ಕೃಷಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ಹಗಲಿನಲ್ಲಿ ಕನಿಷ್ಠ 10 ಗಂಟೆ ನೀಡಬೇಕು. ಕರಾ ನಿರಾಕರಣೆ ಚಳವಳಿಯ ವಿದ್ಯುತ್ ಬಾಕಿಯನ್ನು ಸರ್ಕಾರವೇ ಭರಿಸಬೇಕು. ಅನ್ನಭಾಗ್ಯ ಯೋಜನೆಗೆ ರೈತರಿಂದ ನೇರವಾಗಿ ಭತ್ತ, ರಾಗಿ, ಜೋಳ, ಸಿರಿಧಾನ್ಯ ಖರೀದಿ ಮಾಡಬೇಕು’ ಎದು ಭಾಗ್ಯರಾಜ್ ಆಗ್ರಹಿಸಿದರು. 

ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ‘ಎಲ್ಲವೂ ನನ್ನ ಗಮನದಲ್ಲಿ ಇದೆ. ಕಾರ್ಯರೂಪಕ್ಕೆ ತರುತ್ತೇವೆ’ ಎಂದರು.

ರೈತ ಮುಖಂಡರಾದ ಹೊನ್ನೂರು ಬಸವಣ್ಣ, ಹಾಲಿನ ನಾಗರಾಜ್, ಪಟೇಲ್ ಶಿವಮೂರ್ತಿ, ಕಿರಗಸೂರು ಶಂಕರ, ಹಾಡ್ಯ ರವಿ, ಪ್ರಸಾದ್ ನಾಯಕ, ಮಲೆಯೂರು ಹರ್ಷ, ಬಸವರಾಜಪ್ಪ. ಮಹೇಂದ್ರ, ಸತೀಶ್, ಸಿದ್ದರಾಜು, ನಂಜುಂಡ ನಾಯಕ, ಮಂಜುನಾಥ್ ಗುರುಪ್ರಸಾದ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.