ADVERTISEMENT

ಇಂಡಿಗನತ್ತ: ಗ್ರಾಮಸ್ಥರೊಂದಿಗೆ ರೈತ ಸಂಘದ ಸಭೆ

​ಪ್ರಜಾವಾಣಿ ವಾರ್ತೆ
Published 7 ಮೇ 2024, 15:49 IST
Last Updated 7 ಮೇ 2024, 15:49 IST
ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ಹೊನ್ನೂರು ಪ್ರಕಾಶ್‌ ನೇತೃತ್ವದಲ್ಲಿ ರೈತ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರ ಸಭೆ ನಡೆಯಿತು
ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ಹೊನ್ನೂರು ಪ್ರಕಾಶ್‌ ನೇತೃತ್ವದಲ್ಲಿ ರೈತ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರ ಸಭೆ ನಡೆಯಿತು   

ಮಹದೇಶ್ವರ ಬೆಟ್ಟ: ತಾಲ್ಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡ ಹೊನ್ನೂರು ಪ್ರಕಾಶ್ ಅಧ್ಯಕ್ಷತೆ ಗ್ರಾಮಸ್ಥರು ಹಾಗೂ ರೈತ ಸಂಘದ ಸದಸ್ಯರ ಸಭೆ ಮಂಗಳವಾರ ನಡೆಯಿತು. 

ಮತದಾನದ ದಿನ ನಡೆದ ಘರ್ಷಣೆ, ಕಾನೂನು ಹೋರಾಟ, ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮುಖಂಡರು ಚರ್ಚೆ ನಡೆಸಿದರು.  

ಘರ್ಷಣೆ ಪ್ರಕರಣದಲ್ಲಿ ಆರೋಪಿಗಳಾಗಿದ್ದುಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳು ಪೊಲೀಸರಿಗೆ ಶರಣಾಗುವ ನಿಟ್ಟಿನಲ್ಲಿ ಮನವರಿಗೆ ಮಾಡುವುದು, ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಜಿಲ್ಲಾಡಳಿತ ಮತ್ತು ಚುನಾಯಿತ ಜನಪ್ರತಿನಿಧಿಗಳ ಜೊತೆ ಚರ್ಚಿಸುವ ಸಂಬಂಧ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.  

ADVERTISEMENT

ಮತಗಟ್ಟೆ ಧ್ವಂಸ ಹಲ್ಲೆ ಪ್ರಕರಣದಿಂದ ಇಂಡಿಗನತ್ತ ಹಾಗೂ ಮೆಂದಾರೆ ಗ್ರಾಮಸ್ಥರ ನಡುವೆ ಉಂಟಾಗಿರುವ ವೈಮನಸ್ಸನ್ನು ಸರಿ ಮಾಡುವುದು, ಪ್ರಕರಣ ವಾಪಸ್‌ ಪಡೆಯುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುವ ಬಗ್ಗೆಯೂ ತೀರ್ಮಾನಿಸಲಾಯಿತು.

‘ಗ್ರಾಮದಲ್ಲಿರುವ ಮಕ್ಕಳಿಗೆ ಆಹಾರ, ಆರೈಕೆ ಜೊತೆಗೆ ಜೀವನ ಮುಖ್ಯವಾಗಿದೆ. ಜಾನುವಾರುಗಳಿಗೆ ಮೇವು, ನೀರು, ಮೂಲ ಸೌಕರ್ಯ ಬೇಕಾಗಿದೆ. ಈ ಸಂಬಂಧ ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗುವುದು. ಜೊತೆಗೆ ಆರೋಪಿಗಳಿಗೆ ಆದಷ್ಟು ಬೇಗ ಜಾಮೀನು ಕೊಡಿಸಲು ಪ್ರಯತ್ನ ನಡೆಸಲಾಗುವುದು’ ಎಂದು ಹೊನ್ನೂರು ಪ್ರಕಾಶ್‌ ತಿಳಿಸಿದರು. 

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ:

ಇಂಡಿಗನತ್ತ ಗ್ರಾಮದಲ್ಲಿ ಮತದಾನ ದಿನ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಇಲ್ಲಿನ ನ್ಯಾಯಾಲಯ ಮುಂದೂಡಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ 33 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 33 ಮಂದಿಯೂ ಜಾಮೀನು ಕೋರಿ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.  ಮಂಗಳವಾರ ಅರ್ಜಿಯ ವಿಚಾರಣೆ ನಡೆದಿದ್ದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮಂಜುನಾಥ್‌ ಅವರು ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೇಳಿದ್ದರಿಂದ ನ್ಯಾಯಾಧೀಶರು ವಿಚಾರಣೆಯನ್ನು ಇದೇ 13ರವರೆಗೆ ಮುಂದೂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.