ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಮುಂಗಾರು ಪೂರ್ವದಲ್ಲೇ ಬಿತ್ತನೆ ಕಾರ್ಯ ಆರಂಭವಾಗುವ ಹಿನ್ನೆಲೆಯಲ್ಲಿ ರೈತರ ಬೇಡಿಕೆಯಂತೆ ಸೂರ್ಯಕಾಂತಿ, ನೆಲಗಡಲೆ, ಅಲಸಂದೆ ಇತರೆ ಬಿತ್ತನೆ ಬೀಜಗಳ ದಾಸ್ತಾನಿಗೆ ಕ್ರಮ ವಹಿಸುವಂತೆ ರೈತ ಸಂಘಟನೆ ಪದಾಧಿಕಾರಿಗಳು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿ ಮುಂದೆ ಸೇರಿದ ರೈತ ಸಂಘಟನೆ ಪದಾಧಿಕಾರಿಗಳು ಬಿತ್ತನೆ ಬೀಜಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ರೈತರಾದ ನಾವು ಸಹಾಯಧನದಲ್ಲಿ ಸಿಗುವ ಬಿತ್ತನೆ ಬೀಜಕ್ಕೆ ಕಾದು ಕುಳಿತಿದ್ದೇವೆ. ಸಕಾಲದಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಮಾಡದೇ ಮಳೆ ಬಂದ ಸಂದರ್ಭದಲ್ಲಿ ಅನಿವಾರ್ಯವಾಗಿ ಖಾಸಗಿಯಾಗಿ ಬಿತ್ತನೆ ಬೀಜ ಖರೀದಿಸುವ ಪರಿಸ್ಥಿತಿ ಸೃಷ್ಟಿ ಆಗುವುದು ಬೇಡ. ಆದ್ದರಿಂದ ರೈತರ ಹಿತದೃಷ್ಟಿಯಿಂದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಹಾಯಕ ನಿರ್ದೇಶಕ ಶಶಿಧರ್ ಮಾತನಾಡಿ, ‘ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ವಹಿಸುವ’ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಪುಟ್ಟಗೌಡ, ರೈತ ಮುಖಂಡರಾದ, ಸುಂದರ್, ಪಡುಗೂರು ಮಹಾದೇವಸ್ವಾಮಿ, ನಾಗಪ್ಪ, ಅಗತಗೌಡನಹಳ್ಳಿ ಜಗದೀಶ್, ಶಿವಸ್ವಾಮಿ, ಹಾಲಹಳ್ಳಿ ಕೆಂಪದೇವಮ್ಮ, ಕಮರಹಳ್ಳಿ ಪ್ರಸಾದ್, ಬನ್ನಿತಾನಪುರ ನಾಗಶೆಟ್ಟಿ, ಹಕ್ಕಲಾಪುರಸ್ವಾಮಿ, ಕೂತನೂರು ಬೆಳ್ಳಶೆಟ್ಟಿ, ಅವಿನಾಶ್ ಮತ್ತು ರೈತ ಕಾರ್ಯಕರ್ತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.