ADVERTISEMENT

ಹನೂರು: ವ್ಯವಸಾಯದಲ್ಲೂ ಸೈ ಎನಿಸಿಕೊಂಡ ಮಹಿಳೆ

ಬಿ.ಬಸವರಾಜು
Published 22 ಡಿಸೆಂಬರ್ 2021, 19:30 IST
Last Updated 22 ಡಿಸೆಂಬರ್ 2021, 19:30 IST
ಹನೂರು ತಾಲ್ಲೂಕಿನ ಬಿ.ಗುಂಡಾಪುರ ಗ್ರಾಮದ ಹೊರವಲಯದಲ್ಲಿರುವ ಬಾಲಮಣಿ ಅವರ ಜಮೀನಿನಲ್ಲಿ ಬೆಳೆದಿರುವ ಅರಿಸಿನ ಬೆಳೆ
ಹನೂರು ತಾಲ್ಲೂಕಿನ ಬಿ.ಗುಂಡಾಪುರ ಗ್ರಾಮದ ಹೊರವಲಯದಲ್ಲಿರುವ ಬಾಲಮಣಿ ಅವರ ಜಮೀನಿನಲ್ಲಿ ಬೆಳೆದಿರುವ ಅರಿಸಿನ ಬೆಳೆ   

ಹನೂರು: ಪುರುಷರು ಮಾತ್ರವಲ್ಲ; ಮಹಿಳೆಯರು ಕೂಡ ಯಶಸ್ವಿಯಾಗಿ ವ್ಯವಸಾಯ ಮಾಡಬಹುದು ಎಂದು ಸಾಧಿಸಿ ತೋರಿಸಿದ್ದಾರೆ ತಾಲ್ಲೂಕಿನ ಬಿ.ಗುಂಡಾಪುರ ಗ್ರಾಮದ ಬಾಲಮಣಿ.

‌ಊರಿನಲ್ಲಿ ಸುಂದ್ರಮ್ಮ ಎಂದೇ ಗುರುತಿಸಿಕೊಂಡಿರುವ ಬಾಲಮಣಿ ಅವರಿಗೆ ಈಗ 60ರ ಹರೆಯ. 50 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.ಶಾಲೆಯ ಮುಖವನ್ನೇ ಕಾಣದ ಅವರು ಕೃಷಿಯಲ್ಲಿ ಅಪಾರ ಅನುಭವವ ಹೊಂದಿದ್ದು, ವ್ಯವಸಾಯವೇ ಜೀವನ ಎನ್ನುವಷ್ಟರ ಮಟ್ಟಿಗೆ ಕೃಷಿಯನ್ನು ಮೈಗೂಡಿಸಿಕೊಂಡಿದ್ದಾರೆ.

ತಮಿಳುನಾಡು ಮೂಲ: ಸುಂದ್ರಮ್ಮ ಅವರ ಕುಟುಂಬದವರು ಮೂಲತಃ ತಮಿಳುನಾಡಿನವರು. 60 ವರ್ಷಗಳ ಹಿಂದೆ ಅವರ ಕುಟುಂಬ ಕೂಲಿಯರಸಿಕೊಂಡು ತಮಿಳುನಾಡಿನ ಕೊಯಮತ್ತೂರಿನಿಂದ ರಾಜ್ಯಕ್ಕೆ ವಲಸೆ ಬಂದಿತ್ತು. ಬಳಿಕ ಅಲ್ಲಲ್ಲಿ ಜಮೀನುಗಳಲ್ಲಿ ಕೂಲಿ ಕೆಲಸ ಮಾಡಿ ಬಳಿಕ ಜಮೀನು ಗುತ್ತಿಗೆ ಪಡೆದು ಕೃಷಿ ಮಾಡಲಾರಂಭಿಸಿದರು. 30 ವರ್ಷಗಳಿಂದೀಚೆಗೆ ಸುಂದ್ರಮ್ಮ ಅವರೇ ಪ್ರತ್ಯೇಕವಾಗಿ 7 ಎಕರೆ ಜಮೀನು ಖರೀದಿಸಿ ಕೃಷಿ ಮಾಡುತ್ತಿದ್ದಾರೆ. ತಾವು ಕೃಷಿ ಮಾಡುವುದರ ಜತೆಗೆ ತಮ್ಮ ಯಶಸ್ವಿ ಕೃಷಿಯ ಬಗ್ಗೆ ಇತರರಿಗೂ ತಿಳಿಸಿಕೊಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ADVERTISEMENT

‘ತಂದೆಯೊಂದಿಗೆ ತಮಿಳುನಾಡಿನಿಂದ ಇಲ್ಲಿಗೆ ಬಂದಾಗ ನನಗೆ 2 ವರ್ಷ. ನಾವೆಲ್ಲರೂ ಚಿಂಚಳ್ಳಿ, ಮಣಗಳ್ಳಿ ಮುಂತಾದ ಕಡೆ ಜಮೀನುಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆವು. ಬಳಿಕ ನಮ್ಮ ತಂದೆಯೇ ಜಮೀನು ಗುತ್ತಿಗೆ ಪಡೆದು ಕೃಷಿ ಮಾಡಲು ಆರಂಭಿಸಿದರು. ಅವರೊಂದಿಗೆ ಸದಾ ಇರುತ್ತಿದ್ದ ನನಗೆ ಬಾಲ್ಯದಿಂದಲೇ ಕೃಷಿ ಬಗ್ಗೆ ಒಲವು ಬೆಳೆಯಿತು. ಕೃಷಿ ಆಸಕ್ತಿಯಿಂದ ಶಾಲೆಗೆ ಹೋಗಲಿಲ್ಲ. ಬಾಲ್ಯದಿಂದ ಆರಂಭವಾದ ಕೃಷಿಯ ಆಸಕ್ತಿ 60 ವರ್ಷವಾದರೂ ಹಾಗೇ ಉಳಿದಿದೆ’ ಎನ್ನುತ್ತಾರೆ ರೈತ ಮಹಿಳೆ ಬಾಲಮಣಿ (ಸುಂದ್ರಮ್ಮ).

ಇರುವ ಏಳು ಎಕರೆ ಜಮೀನಿನ ಪೈಕಿ, ಮೂರು ಎಕರೆಯಲ್ಲಿ ಮುಸುಕಿನ ಜೋಳ, ಮೂರು ಎಕರೆ ಅರಿಸಿನ ಬೆಳೆದಿದ್ದಾರೆ. ಬಾಲಮಣಿ ಅವರ ಪತಿಗೆ ಕೃಷಿಯಲ್ಲಿ ದೊಡ್ಡ ಆಸಕ್ತಿ ಇಲ್ಲ. ಹಾಗಾಗಿ, ಕೃಷಿಯ ಎಲ್ಲ ಜವಾಬ್ದಾರಿ ಇವರದ್ದೇ. ಮಗ ಹಿಂದೆ ಕೃಷಿ ಕಾಯಕಕ್ಕೆ ನೆರವಾಗುತ್ತಿದ್ದರು. 11 ವರ್ಷಗಳ ಹಿಂದೆ ಅಪಘಾತದಲ್ಲಿ ಅವರು ಮೃತಪಟ್ಟ ನಂತರ ಸಂಪೂರ್ಣ ಕೃಷಿ ಜವಬ್ದಾರಿಯನ್ನು ಇವರೊಬ್ಬರೇ ನಿರ್ವಹಿಸುತ್ತಿದ್ದಾರೆ. ವರ್ಷದ ಒಂಬತ್ತು ತಿಂಗಳೂ ಪೂರ್ತಿ ಇವರ ಜಮೀನಿನಲ್ಲಿ ಕನಿಷ್ಠ 15 ಜನರಿಗೆ ಒಂದಿಲ್ಲೊಂದು ಕೆಲಸ ಇದ್ದೇ ಇರುತ್ತದೆ. ಕೆಲ ಇದ್ದೇ ಇರುತ್ತದೆ.

* ಕೃಷಿಯಲ್ಲಿ ಲಾಭ, ನಷ್ಟ ಸಹಜ. ಇದ್ದ ಒಬ್ಬ ಮಗನೂ ತೀರಿಹೋದ. ನನ್ನ ಆತ್ಮತೃಪ್ತಿಗಾಗಿ ಕೃಷಿಯನ್ನು ಮಾಡುತ್ತಿದ್ದೇನೆ.

-ಬಾಲಮಣಿ (ಸುಂದ್ರಮ್ಮ), ರೈತ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.