ADVERTISEMENT

ಚಾಮರಾಜನಗರ: ಕ್ವಿಂಟಲ್‌ ಅರಿಸಿನಕ್ಕೆ ಕನಿಷ್ಠ ₹10 ಸಾವಿರ ನಿಗದಿಗೆ ಒತ್ತಾಯ

ಅರಿಸಿನ ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 5:07 IST
Last Updated 24 ಮಾರ್ಚ್ 2023, 5:07 IST
ನಾಗಾರ್ಜುನ್‌ ಕುಮಾರ್‌
ನಾಗಾರ್ಜುನ್‌ ಕುಮಾರ್‌   

ಚಾಮರಾಜನಗರ: ಬೆಲೆ ಕುಸಿದಿರುವ ಅರಿಸಿನ ಬೆಳೆಯನ್ನು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ (ಎಂಐಎಸ್‌) ಖರೀದಿ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ಎಂಐಎಸ್‌ ಅಡಿಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಕ್ವಿಂಟಲ್‌ ಅರಿಸಿನಕ್ಕೆ ₹ 6,694 ಬೆಲೆ ನಿಗದಿ ಪಡಿಸಿದೆ.

ಅರಿಸಿನ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತ ಸಂಘಟನೆಗಳು, ಅರಿಸಿನ ಬೆಳೆಗಾರರು ಎಂಐಎಸ್‌ ಜಾರಿಗೆ ತರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ರೈತರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಕೇಂದ್ರ ಕೃಷಿ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಕ್ವಿಂಟಲ್‌ಗೆ ಕನಿಷ್ಠ ₹ 17,500 ನಿಗದಿ ಪಡಿಸಬೇಕು ಎಂದು ಆಗ್ರಹಿಸಿದ್ದರು.

ADVERTISEMENT

ಇದರ ಆಧಾರದಲ್ಲಿ ರಾಜ್ಯ ಸರ್ಕಾರ ಕೇಂದ್ರ ಕೃಷಿ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಪ್ರಸ್ತಾವಕ್ಕೆ ಒಪ್ಪಿರುವ ಸಚಿವಾಲಯ ಬುಧವಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಯೋಜನೆ ಅನುಷ್ಠಾನಕ್ಕೆ ಸೂಚಿಸಿದೆ.

ಕೇಂದ್ರ ಸರ್ಕಾರ ₹ 6,694 ನಿಗದಿ ಮಾಡಿರುವುದರಿಂದ ರೈತರಿಗೆ ಏನೂ ಅನುಕೂಲವಾಗುವುದಿಲ್ಲ. ರಾಜ್ಯ ಸರ್ಕಾರ ಕೂಡ ನೆರವಿಗೆ ಬರಬೇಕು. ಇದಕ್ಕೆ ಹೆಚ್ಚುವರಿ ಹಣ ಸೇರಿಸಿ ಕ್ವಿಂಟಲ್‌ಗೆ ಕನಿಷ್ಠ ₹ 10 ಸಾವಿರ ಆದರೂ ನಿಗದಿ ಪಡಿಸಬೇಕು ಎಂದು ರೈತ ಮುಖಂಡರು, ಬೆಳೆಗಾರರು ಒತ್ತಾಯಿಸಿದ್ದಾರೆ.

ಶುಕ್ರವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ಈ ವಿಚಾರ ಚರ್ಚೆಗೆ ಬಂದು ಸರ್ಕಾರ ಈ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

₹10 ಸಾವಿರ ನಿಗದಿಗೆ ಬಿಜೆಪಿ ಒತ್ತಾಯ: ‘ಈ ಮಧ್ಯೆ, ಕೇಂದ್ರ ಸರ್ಕಾರ ನಿಗದಿ ಪಡಿಸಿರುವ ಮೊತ್ತಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತಿ ಕ್ವಿಂಟಲ್‌ಗೆ ₹ 3,306 ಪ್ರೋತ್ಸಾಹ ಧನ ಸೇರಿಸಿ, ಎಂಐಎಸ್‌ ಖರೀದಿ ಮೊತ್ತವನ್ನು ₹ 10 ಸಾವಿರಕ್ಕೆ ಏರಿಸಬೇಕು. ಇದರಿಂದ ಜಿಲ್ಲೆಯ ಅರಿಸಿನ ಬೆಳೆಗಾರರಿಗೆ ಅನುಕೂಲವಾಗಲಿದೆ’ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಜಿ.ನಾರಾಯಣ ಪ್ರಸಾದ್‌, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರನ್ನು ಪತ್ರ ಮುಖೇನ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.